ನಗರಸಭಾ ಉಪ ಚುನಾವಣೆ:ಎರಡು ವಾರ್ಡ್‌ಗಳಲ್ಲೂ ತ್ರಿಕೋನ ಸ್ಪರ್ಧೆ-ಬಿಜೆಪಿ, ಕಾಂಗ್ರೆಸ್, ಪುತ್ತಿಲ ಪರಿವಾರದ ಅಭ್ಯರ್ಥಿಗಳು ಕಣದಲ್ಲಿ

0

ಪುತ್ತೂರು:ನಗರ ಸಭೆಯ ಸದಸ್ಯರಿಬ್ಬರ ನಿಧನದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಎರಡು ವಾರ್ಡ್‌ಗಳಲ್ಲಿಯೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ನಾಮಪತ್ರ ಹಿಂಪಡೆಯಲು ದ.18 ಕೊನೆ ದಿನವಾಗಿತ್ತು.ಯಾವುದೇ ಅಭ್ಯರ್ಥಿ ನಾಮಪತ್ರ ಹಿಂತೆಗೆದುಕೊಳ್ಳದೇ ಇರುವುದರಿಂದ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಎರಡೂ ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕುತೂಹಲ ಸೃಷ್ಟಿಸಿದೆ.
ವಾರ್ಡ್ 1ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಸದಸ್ಯರಾಗಿದ್ದ ಬಿಜೆಪಿಯ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರ ಸದಸ್ಯರಾಗಿದ್ದ ಕಾಂಗ್ರೆಸ್‌ನ ಶಕ್ತಿ ಸಿನ್ಹಾರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.


ಉಪಚುನಾವಣೆಯಲ್ಲಿ, ವಾರ್ಡ್ 1(ಕಲ್ಲೇಗ)ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಿನೇಶ್ ಕೆ.ಶೇವಿರೆ, ಬಿಜೆಪಿಯಿಂದ ಸುನೀತಾ ಶಿವನಗರ ಮತ್ತು ಪುತ್ತಿಲ ಪರಿವಾರದಿಂದ ಅನ್ನಪೂರ್ಣ ಎಸ್.ಕೆ ರಾವ್ ಶೇವಿರೆ ಕಣದಲ್ಲಿದ್ದಾರೆ.ಈ ಪೈಕಿ ಕಾಂಗ್ರೆಸ್‌ನ ದಿನೇಶ್ ಕೆ.ಶೇವಿರೆ ಅವರು ಕಳೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಅವರು ಪರಾಜಿತರಾಗಿ ಬಿಜೆಪಿಯ ಶಿವರಾಮ ಸಪಲ್ಯ ಚುನಾಯಿತರಾಗಿದ್ದರು.


ವಾರ್ಡ್-11(ನೆಲ್ಲಿಕಟ್ಟೆ)ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ, ಬಿಜೆಪಿಯಿಂದ ರಮೇಶ್ ರೈ ನೆಲ್ಲಿಕಟ್ಟೆ ಹಾಗೂ ಪುತ್ತಿಲ ಪರಿವಾರದಿಂದ ಚಿಂತನ್ ಪಿ. ಅಂದ್ರಟ್ಟ ಕಣದಲ್ಲಿದ್ದಾರೆ.ಬಿಜೆಪಿ ಅಭ್ಯರ್ಥಿ ರಮೇಶ್ ರೈ ನೆಲ್ಲಿಕಟ್ಟೆ ಅವರು ಕಳೆದ ಬಾರಿಯೂ ಇಲ್ಲಿ ಬಿಜೆಪಿಯಿಂದ ಸ್ಪಽಸಿದ್ದರು.ಆದರೆ,ಕಾಂಗ್ರೆಸ್‌ನ ಶಕ್ತಿ ಸಿನ್ಹಾ ಅವರು ಚುನಾಯಿತರಾಗಿದ್ದು ರಮೇಶ್ ರೈ ಪರಾಭವಗೊಂಡಿದ್ದರು.


ಪ್ರತಿಷ್ಠೆಯ ಕಣ:
ಪ್ರಸ್ತು ಉಪಚುನಾವಣೆ ನಡೆಯಲಿರುವ ಎರಡು ಸ್ಥಾನಗಳಲ್ಲಿ ಹಿಂದೆ ವಾರ್ಡ್ 1ರಲ್ಲಿ ಬಿಜೆಪಿ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ಕಳೆದ ಬಾರಿ ಇಲ್ಲಿ ನೇರ ಸ್ಪರ್ಧೆ ನಡೆದಿತ್ತು.ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಿಂದಿನ ಸ್ಥಾನವನ್ನು ಉಳಿಸಿಕೊಂಡು ಮತ್ತೊಂದರಲ್ಲೂ ಗೆಲುವು ಸಾಽಸಬೇಕೆನ್ನುವ ತವಕದಲ್ಲಿದ್ದು ಇದಕ್ಕಾಗಿ ಎರಡೂ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.ಮತ್ತೊಂದೆಡೆ ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆ ಎದುರಿಸುತ್ತಿರುವ ಪುತ್ತಿಲ ಪರಿವಾರದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಪುತ್ತಿಲ ಪರಿವಾರದ ಪ್ರಮುಖರೂ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.ಎರಡು ವಾರ್ಡ್‌ಗಳಲ್ಲಿಯೂ ಅಭ್ಯರ್ಥಿಗಳ ಪರ ಪ್ರಚಾರ ಜೋರಾಗಿದೆ.ಎರಡೂ ವಾರ್ಡ್‌ಗಳಲ್ಲಿಯೂ ಉಪಚುನಾವಣೆ ಕಾಂಗ್ರೆಸ್, ಬಿಜೆಪಿ ಮತ್ತು ಪುತ್ತಿಲ ಪರಿವಾರಕ್ಕೆ ಪ್ರತಿಷ್ಠೆಯ ಕಣವಾಗಿರುವುದರಿಂದ ಜನರ ಕುತೂಹಲ ಹೆಚ್ಚಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ, ವಾರ್ಡ್‌ಗಳಲ್ಲಿ ಮನೆ ಮನೆ ಭೇಟಿ ಕಾರ್ಯಗಳು ಅಬ್ಬರದಿಂದ ಸಾಗುತ್ತಿದೆ.


ಪುತ್ತಿಲ ಪರಿವಾರಕ್ಕೆ ಈ ಬಾರಿಯೂ ‘ಬ್ಯಾಟ್’:
ಉಪಚುನಾವಣೆ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗಿದ್ದು ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ‘ಬ್ಯಾಟ್’ ಚಿಹ್ನೆ ದೊರೆತಿದೆ.ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಕ್ಷದ ಚಿಹ್ನೆಯನ್ನೇ ನೀಡಲಾಗಿದೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಿಂದುತ್ವ ಸಿದ್ಧಾಂತದಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬ್ಯಾಟ್ ಚಿಹ್ನೆ ಲಭಿಸಿತ್ತು.ನಂತರ ನಡೆದ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾ.ಪಂ.ಗಳ ಉಪಚುನಾವಣೆಯಲ್ಲಿಯೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ ಲಭಿಸಿತ್ತು.ಇದೀಗ ನಗರ ಸಭಾ ಉಪ ಚುನಾವಣೆಯಲ್ಲಿಯೂ ಎರಡೂ ವಾರ್ಡ್‌ಗಳಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಚಿಹ್ನೆ ಆಯ್ಕೆ ಸಂದರ್ಭ ಅರ್ಜಿಯಲ್ಲಿ ಬ್ಯಾಟ್ ಚಿಹ್ನೆಗೆ ಮೊದಲ ಪ್ರಾಶಸ್ತ್ಯ ನೀಡಿದ್ದರು.ಬ್ಯಾಟ್ ಚಿಹ್ನೆಯನ್ನೇ ಅವರಿಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here