ಕಡಬ: ನಮ್ಮ ನಡೆ ಕುಕ್ಕೆ ಶ್ರೀ ಸುಬ್ರಹ್ಮಣ್ಯನೆಡೆಗೆ ಧರ್ಮ ಜಾಗೃತಿಗಾಗಿ ಪಾದಯಾತ್ರೆ

0

ದಲಿತ ಸಮುದಾಯದ ಹಿಂದೆ ಇಡೀ ಹಿಂದೂ ಸಮಾಜವಿದೆ-ಡಾ| ರವೀಶ್ ಪಡುಮಲೆ

ಕಡಬ: ದಲಿತರನ್ನು ಅಸ್ಪ್ರಶ್ಯರಂತೆ ಕಾಣಲಾಗುತ್ತಿದೆ ಎಂದು ಅಲ್ಲಲ್ಲಿ ಮಾತು ಕೇಳಿ ಬರುತ್ತಿದ್ದು ಇದು ಸುಳ್ಳು, ದಲಿತ ಸಮುದಾಯದ ಹಿಂದೆ ಇಡೀ ಹಿಂದೂ ಸಮಾಜವಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಶ್ ಪಡುಮಲೆ ಅವರು ಹೇಳಿದರು.


ಅವರು ಕಡಬ ಪ್ರಖಂಡ ವಿ.ಹಿಂ.ಪ. ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಇದರ ನೇತೃತ್ವದಲ್ಲಿ ಕಡಬದಿಂದ ಸುಬ್ರಹ್ಮಣ್ಯದವರೆಗೆ ನಡೆದ ಧರ್ಮ ಜಾಗೃತಿಗಾಗಿ ನಮ್ಮ ನಡೆ ಕುಕ್ಕೆ ಶ್ರೀಸುಬ್ರಹ್ಮಣ್ಯನೆಡೆಗೆ ಪಾದಯಾತ್ರೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ದಲಿತ ಸಮಾಜದ ಅಭಿವೃದ್ದಿಗೆ ಹಿಂದೂ ಸಮಾಜ ಶ್ರಮಿಸುತ್ತಿದೆ, ದಲಿತರು ಸಮಾಜದ ಮುಖ್ಯವಾಹಿನಿಗೆ ಬಂದು ತನ್ನ ಅಭಿವೃದ್ದಿಗೆ ಮುತುವರ್ಜಿ ವಹಿಸಬೇಕು, ಧರ್ಮ ಜಾಗೃತಿಗೆ ಪಾದಯಾತ್ರೆಯೂ ಪೂರಕವಾಗಿದ್ದು ಹಿಂದೂ ಸಮಾಜ ಒಗ್ಗಟಿನಿಂದ ಸಂಘಟನಾತ್ಮವಾಗಿ ಇರಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.


ಕುಲ್ಕುಂದ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸ್ಕಂದ ಅವರು ಮಾತನಾಡಿ ಪಾದಯಾತ್ರೆಗೆ ಶುಭ ಹಾರೈಸಿದರು. ನಿವೃತ್ತ ಯೋಧ ಡಿ.ಆರ್. ರಾಧಾಕೃಷ್ಣ ಕುಳಬಳ್ಪ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸದಸ್ಯ, ಶ್ರೀ ವತ್ಸ, ಮನೋಹರ್ ರೈ ಎ.ಬಿ, ಮನೋಜ್ ಸುಬ್ರಹ್ಮಣ್ಯ, ತು| ಚಂದ್ರಶೇಖರ ಮರ್ದಾಳ, ಕಡ್ಯ ವಾಸುದೇವ ಭಟ್, ಪ್ರೇಮಲತಾ ವಾಸುದೇವ ಕೇಪುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ರವೀಶ್ ಪಡುಮಲೆ ಅವರನ್ನು ವಿ.ಹಿಂ.ಪ.ವತಿಯಿಂದ ಸನ್ಮಾನಿಸಲಾಯಿತು. ವಿ.ಹಿಂ.ಪ. ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ವಂದಿಸಿದರು. ಕಡಬ ಪ್ರಖಂಡ ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.


ಕುಣಿತ ಭಜನೆಯೊಂದಿಗೆ ನಡೆದ ಪಾದಯಾತ್ರೆ:
ಬೆಳಿಗ್ಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಬಾಲಕೃಷ್ಣ ಡಿ.ಕೆ.ಯವರು ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಬಿಳಿನೆಲೆ ಹಾಗೂ ಸಂಗಡಿಗರಿಂದ ಭಜನೆ ಹಾಗೂ ಮಹಿಳಾ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಪಾದಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಪಾನಿಯ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಕಾರ ನೀಡಲಾಗಿತ್ತು.

LEAVE A REPLY

Please enter your comment!
Please enter your name here