ರೈತರಿಗೆ ಸಂತಸ: ಭಕ್ತರಿಗೆ ಸಂಕಟ – ನೇತ್ರಾವತಿಯ ಸಮೃದ್ಧ ಜಲರಾಶಿ – ಮಲಿನತೆಗೆ ಸಾಕ್ಷಿ

0

ಉಪ್ಪಿನಂಗಡಿ: ನೀರಾವರಿ, ಅಂತರ್ಜಲ ಅಭಿವೃದ್ಧಿಯೊಂದಿಗೆ ಸಂಪರ್ಕ ಸೇತುವೆಯ ಗುರಿಯಿಟ್ಟುಕೊಂಡು ಬಿಳಿಯೂರು ಗ್ರಾಮದ ಕಡಪ್ಪು ಎಂಬಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಿಸುವ ಕಾರ್ಯ ನಡೆದಿದ್ದು, ರೈತರಿಗೆ ಸಂತಸವಾದರೆ, ನೇತ್ರಾವತಿ- ಕುಮಾರಧಾರ ನದಿಗಳಿಗೆ ಸೇರುವ ಮಲಿನ ನೀರಿನಿಂದಾಗಿ ನೇತ್ರಾವತಿ- ಕುಮಾರಧಾರ ಸಂಗಮ ತಾಣದಲ್ಲಿ ತೀರ್ಥ ಸ್ನಾನ ಮಾಡುವ ಭಕ್ತರಿಗೆ ಮಲಿನ ನೀರಿನಿಂದಾಗಿ ಸಂಕಟ ಪಡುವ ಸ್ಥಿತಿ ಬಂದೊದಗಿದೆ.


ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯಡಿ ಸುಮಾರು 51.68 ಕೋಟಿ ರೂ. ಅನುದಾನ ಈ ಸೇತುವೆಗೆ ಮಂಜೂರಾಗಿದ್ದು, 2020ರ ನವೆಂಬರ್ ತಿಂಗಳಲ್ಲಿ ಇದರ ಶಿಲಾನ್ಯಾಸ ನಡೆದಿತ್ತು. ಮುತ್ತಲಿನ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದರೊಂದಿಗೆ ಈ ಭಾಗದ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಸಂಪರ್ಕ ಸೇತುವೆಯ ಮೂಲಕ ನದಿಯ ಈ ದಂಡೆಯಲ್ಲಿರುವ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ಹಾಗೂ ಆ ದಂಡೆಯಲ್ಲಿರುವ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಒಂದುಗೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಇಲ್ಲಿ ನದಿಯು 305.30ಮೀ. ಅಗಲವಾಗಿದ್ದು, ಈ ಅಣೆಕಟ್ಟಿನ ಎತ್ತರ 11.36ಮೀ. ಆಗಿದೆ. ಆದರೆ ಇಲ್ಲಿ ನೀರು ಶೇಖರಣಾ ಗುರಿ ಇರೋದು 4 ಮೀ. ಮಾತ್ರ. ಇದರಲ್ಲಿರುವ 42 ಕಿಂಡಿಗಳಿಗೆ ವರ್ಟಿಕಲ್ ಲಿಫ್ಟ್ ಗೇಟ್‌ಗಳು ಅಳವಡಿಕೆ 120 ಹೆಕ್ಟೇರ್ ಭೂ ಪ್ರದೇಶವು ಈ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶವಾಗಿದ್ದು, 53.79 ಎಂ.ಸಿ.ಎಫ್.ಟಿ. ನೀರು ಶೇಖರಣಾ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ. ಕಿಂಡಿ ಅಣೆಕಟ್ಟಿನ ಮೇಲ್ಮೈಯನ್ನು ಸೇತುವೆಯನ್ನಾಗಿ ಮಾಡಲಾಗಿದ್ದು, ಇದರ ಅಗಲ 5.50 ಮೀ. ಇದೆ. ಈಗಾಗಲೇ ಕಿಂಡಿ ಅಣೆಕಟ್ಟಿನ ಕೆಲಸಗಳು ಮುಗಿದಿದ್ದು, ಗೇಟ್ ಅಳವಡಿಕೆ ಮಾಡಿ ನೀರು ನಿಲ್ಲಿಸುವ ಕಾರ್ಯವಾಗಿದೆ.

ದಕ್ಷಿಣ ಕಾಶಿಯನ್ನೂ ಬಿಡದ ಮಲಿನತೆ: ಗಂಗೆ- ಯಮುನಾ ನದಿಗಳ ಸಂಗಮವಾಗಿ ಉತ್ತರ ಕಾಶಿ ಸದ್ಗತಿದಾಯಕ ಕ್ರಿಯೆಗಳಿಗಾಗಿ ಪ್ರಸಿದ್ಧಿ ಪಡೆದಂತೆ ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ತಾಣವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರವೂ ಸದ್ಗತಿದಾಯಕ ಕ್ರಿಯೆಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರವಾದ ಬಳಿಕ ಚಿತಾಭಸ್ಮ, ಆಸ್ತಿಯನ್ನು ಇಲ್ಲಿ ವಿಸರ್ಜಿಸಿ, ಪಿಂಡ ಪ್ರದಾನ ಮಾಡಿ ನದಿಯಲ್ಲಿ ತೀರ್ಥ ಸ್ನಾನ ಮಾಡಲಾಗುತ್ತದೆ. ಅಲ್ಲದೇ, ತೀರ್ಥ ಸ್ನಾನಗಳಿಗೆ ಸಂಗಮ ಸ್ಥಳ ಪ್ರಸಿದ್ಧಿಯನ್ನು ಪಡೆದಿದ್ದು, ಮಖೆ ಜಾತ್ರೆ, ಆಟಿ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ ಸೇರಿದಂತೆ ಇನ್ನಿತರ ಪವಿತ್ರ ದಿನಗಳಲ್ಲಿ ಇಲ್ಲಿ ತೀರ್ಥ ಸ್ನಾನಗಳನ್ನು ಭಕ್ತರು ಮಾಡುತ್ತಾರೆ. ಆದರೆ ಉಪ್ಪಿನಂಗಡಿಯ ಹೆಚ್ಚಿನ ಕಡೆಗಳ ವಾಣಿಜ್ಯ ಸಂಕೀರ್ಣ, ಹೊಟೇಲ್, ಮನೆಗಳ ಕಟ್ಟಡಗಗಳ, ದುರ್ವಾಸನೆ ಬೀರುತ್ತಿರುವ ಮಲಿನ ನೀರು ಚರಂಡಿ, ಮೋರಿಗಳ ಮೂಲಕ ಇದೇ ನದಿಗಳಿಗೆ ಸೇರುತ್ತಿದೆ. ಇನ್ನೊಂದು ಕಡೆ ತ್ಯಾಜ್ಯವನ್ನು ಕೂಡಾ ಗ್ರಾ.ಪಂ.ನ ಕಣ್ತಪ್ಪಿಸಿ ನದಿಗೆ ಎಸೆಯುವ ಜನರೂ ಇಲ್ಲಿ ಹೆಚ್ಚಾಗಿದ್ದಾರೆ. ನದಿಗಳ ನೀರು ಹರಿದು ಹೋಗುವುದರಿಂದ ಇದರ ಗಂಭೀರತೆ ಯಾರಿಗೂ ಅರಿವಾಗುತ್ತಿರಲಿಲ್ಲ. ಆದರೆ ಕಿಂಡಿ ಅಣೆಕಟ್ಟಿನಲ್ಲಿ ನೀರನ್ನು ಶೇಖರಣೆ ಮಾಡುವುದರಿಂದ ನಿಂತ ನೀರಿನಲ್ಲಿ ಮಲಿನ ನೀರು, ತ್ಯಾಜ್ಯಗಳು ಶೇಖರಗೊಂಡು ನದಿ ನೀರೆಲ್ಲಾ ಸಂಪೂರ್ಣ ಮಲಿನವಾಗುವ ಸಂಭವವಿದೆ. ಇಂತಹ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾ‌ಧಿಗಳು ಬರುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳು ಉತ್ಪತ್ತಿಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ನದಿಗೆ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹಗೊಂಡ ನೀರಲ್ಲಿ ಬಾತು ಕೋಳಿಗಳಂತೆ ತೇಲಲಿವೆ. ಮುಳುಗಲಿದೆ ಉದ್ಭವ ಲಿಂಗ: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸಂಗಮ ತಾಣದ ಪಕ್ಕದಲ್ಲಿ ನೇತ್ರಾವತಿಯ ನದಿ ಒಡಲಲ್ಲಿ ಉದ್ಭವಲಿಂಗವಿದ್ದು, ಇಲ್ಲಿ ವಾರ್ಷಿಕ ಮಖೆಜಾತ್ರೆಯ ಮೊದಲು ಉದ್ಭವಲಿಂಗದ ಮೇಲಿರುವ ಮರಳನ್ನು ತೆರವುಗೊಳಿಸಿ, ಶಿವ ಲಿಂಗವನ್ನು ದರ್ಶನಕ್ಕಾಗಿ ಅಣಿಗೊಳಿಸಲಾಗುತ್ತದೆ. ಮಖೆ ಜಾತ್ರೆಯ ಸಂದರ್ಭದಲ್ಲಿ ಇದಕ್ಕೆ ಪೂಜೆಗಳು ನಡೆದರೆ, ಶಿವರಾತ್ರಿಯ ದಿನ ಭಕ್ತರಿಗೆ ಸ್ವಯಂ ಅಭಿಷೇಕ ಕಲ್ಪಿಸುವ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿದರೆ ಉದ್ಭವ ಲಿಂಗದ ದರ್ಶನ ಭಾಗ್ಯ ದೊರೆಯಲು ಸಾಧ್ಯವಿಲ್ಲ. ಮಖೆ ಜಾತ್ರೆಯ ಸಂದರ್ಭದಲ್ಲಿ ಸಂಗ್ರಹಿಸಿದ ನೀರನ್ನು ಬಿಟ್ಟರೆ, ಆ ಸಮಯದಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ಮತ್ತೆ ನೀರು ಶೇಖರಣೆ ಕಷ್ಟವಾಗಲಿದೆ. ಆದ್ದರಿಂದ ಉದ್ಭವಲಿಂಗದ ದರ್ಶನಕ್ಕೆ ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ಉದ್ಭವಲಿಂಗವೆನ್ನುವುದು ಕಾಲ ಗರ್ಭದಲ್ಲಿ ಹುದುಗಿ ಹೋಗಲಿದೆ. ಇದಲ್ಲದೆ, ನೀರಿನ ಸಂಗ್ರಹದಿಂದ ಮಖೆ ಜಾತ್ರೆಯ ಸಂದರ್ಭದಲ್ಲಿ ನದಿ ದಡದಲ್ಲಿ ಜಾತ್ರಾ ಸಂತೆ, ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿಲ್ಲದಿರುವುದರಿಂದ ಎಲ್ಲವನ್ನೂ ದೇವಾಲಯದ ವಠಾರದಲ್ಲೇ ಮಾಡಬೇಕಾಗುತ್ತದೆ.

ಅಂತರ್ಜಲ ಅಭಿವೃದ್ಧಿಯ ದೃಷ್ಟಿಯಿಂದ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಉತ್ತಮ ವಿಚಾರವೇ. ಆದರೆ ಅದಕ್ಕೂ ಮೊದಲು ನದಿಗೆ ಮಲಿನ ನೀರು ಬಿಡುವುದನ್ನು ತಡೆಯುವ ಕೆಲಸವಾಗಬೇಕಿತ್ತು. ಮಲಿನ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವುದೋ, ಬೇರೆ ಕಡೆ ಅದನ್ನು ಭೂಗರ್ಭದೊಳಗೆ ಇಂಗಿಸುವುದೋ ಅಂತಹ ಯೋಜನೆ ಹಾಕಿಕೊಳ್ಳಬೇಕಿತ್ತು. ಹರಿಯುವ ನೀರಿಗಿಂತಲೂ ನಿಂತ ನೀರಿನಲ್ಲಿ ಮಲಿನ ನೀರು ಸೇರಿದರೆ ಮಾಲಿನ್ಯ ಹೆಚ್ಚು. ಈಗ ಅದೇ ಸ್ಥಿತಿ ನೇತ್ರಾವತಿ ನದಿಗೆ ಬಂದಿದೆ. ನದಿಗಳ ಸಂಗಮ ಕ್ಷೇತ್ರದಲ್ಲಿ ನದಿಯಲ್ಲಿ ಮಿಂದೆದ್ದರೆ ಪಾಪನ ಅನ್ನೋ ನಂಬಿಕೆ ಭಕ್ತರಲ್ಲಿದೆ. ಆದರೆ ನದಿಯ ನಿಂತ ನೀರಿನೊಂದಿಗೆ ಮಲಿನ ನೀರು ಬೆರೆಯುವುದರಿಂದ ನದಿ ನೀರಿಡೀ ಮಲಿನಗೊಳ್ಳಲಿದೆ. ರೋಗರುಜಿನಗಳಿಗೂ ಕಾರಣವಾಗಲಿದೆ. ಅದೂ ಅಲ್ಲದೆ, ಇಲ್ಲಿ ನದಿಯಲ್ಲಿ ಉದ್ಭವಲಿಂಗವಿದೆ. ನದಿಯಲ್ಲಿ ನೀರಿದ್ದರೂ, ಇದರ ದರುಶನಕ್ಕೆ ಪ್ರತ್ಯೇಕ ಯೋಜನೆಯನ್ನು ಹಾಕಿಕೊಳ್ಳಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡದೇ ನೀರು ಶೇಖರಿಸಿರುವುದರಿಂದ ಮುಂದೆ ಉದ್ಭವ ಲಿಂಗದ ದರುಶನ ಭಾಗ್ಯವನ್ನೂ ಭಕ್ತರು ಕಳೆದುಕೊಳ್ಳಬೇಕಾಗುತ್ತದೆ.
ಕಿಶೋರ್ ಜೋಗಿ ಉಬಾರ್,
ಸಾಮಾಜಿಕ ಕಾರ್ಯಕರ್ತರು

LEAVE A REPLY

Please enter your comment!
Please enter your name here