ಪ್ರಗತಿ ಸ್ಟಡಿ ಸೆಂಟರ್ 15 ಸಂವತ್ಸರ ಪೂರ್ಣಗೊಳಿಸಿದ ಸಂಭ್ರಮ-ತಾ|ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ ‘ಪ್ರಗತಿ ವೈಭವ’

0

ಪುತ್ತೂರು:ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ 15 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಗಳ ‘ಪ್ರಗತಿ ವೈಭವ-2023’ ಇಲ್ಲಿನ ಜೈನ ಭವನದಲ್ಲಿ ದ.17ರಂದು ನಡೆಯಿತು.

ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಅವರ ತಾಯಿ ದಿ|ಪಿ.ವಿ ಸಾವಿತ್ರಿ ಮತ್ತು ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಅವರ ಸಹೋದರ ಕೆ.ವಿನೋದ್ ಕುಮಾರ್ ಅವರ ಆಶೀರ್ವಾದ,ಮಾರ್ಗದರ್ಶನ ಮತ್ತು ಸಹಾಯದಿಂದ ಪ್ರಾರಂಭಗೊಂಡಿರುವ ಪ್ರಗತಿ ಸ್ಟಡಿ ಸೆಂಟರ್ 15 ಸಂವತ್ಸರಗಳನ್ನು ಪೂರೈಸಿ ಹದಿನಾರನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಬೆಳಿಗ್ಗೆ ಪ್ರಗತಿ ವೈಭವ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಪ್ರೌಢಶಾಲಾ ಹಾಗು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳಾದ ದೇಶಭಕ್ತಿ ಗೀತೆ, ಜಾನಪದ, ಮೌಲ್ಯಾಧಾರಿತ ಹಾಸ್ಯ ಪ್ರಧಾನ ನಾಟಕ, ದೇಶಭಕ್ತಿ ನೃತ್ಯರೂಪಕ ಕಾರ್ಯಕ್ರಮ ಪ್ರಸ್ತುತಿಗೊಂಡಿತ್ತು.ಸಂಜೆ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.


ಗೋಕುಲ್‌ನಾಥ್ ದಂಪತಿ ಬದುಕಿನ ಚಿಂತನೆ ಕಟ್ಟಿಕೊಡುವ ಫ್ಯಾಮಿಲಿ ಡಾಕ್ಟರ್:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ ಪ್ರಗತಿ ಸ್ಟಡಿ ಸೆಂಟರ್ ವೈಯಕ್ತಿಕ ಆಸಕ್ತಿಯಿಂದ ಬೆಳೆದಿದೆ.ಕೊರೋನಾ ಬಾರದೆ ಇರುತ್ತಿದ್ದರೆ ಅವರ ಸ್ಥಿತಿಯೇ ಬದಲಾಗುತ್ತಿತ್ತು.ಕೋವಿಡ್ ಸಂದರ್ಭ ಬಹಳ ಕಷ್ಟ ಅನುಭವಿಸಿದ್ದಾರೆ.ಅದರಿಂದ ಹೊರಗೆ ಬಂದು ಛಲದಿಂದ ಗುರಿಯನ್ನು ಸಾಧಿಸಿದ್ದಾರೆ.ಅವರ ಛಲವನ್ನು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೂ ನೀಡುತ್ತಿದ್ದಾರೆ.ಬಹಳಷ್ಟು ಎಕ್ಸ್‌ಪರ್ಟ್ ಸಂಸ್ಥೆಗಳಲ್ಲಿ ಶೇ.95ರ ಮೇಲೆ ಅಂಕ ಬಂದರೆ ಮಾತ್ರ ದಾಖಲಾತಿಯಾಗುತ್ತದೆ.ಅದಕ್ಕಿಂತ ಕಡಿಮೆ ಇದ್ದವರಿಗೆ ತುಂಬಾ ಕಾಲೇಜುಗಳಲ್ಲಿ ಕಟಾ- ಇದೆ.ಅಂತಹ ವಿದ್ಯಾರ್ಥಿಗಳು ಇತರ ಕಾಲೇಜುಗಳಲ್ಲಿ ಕಲಿತು ಪಾಸಾಗುವುದು ಸಹಜ.ಆದರೆ ಶಾಲೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದು ಬಹಳ ದೊಡ್ಡ ಚಾಲೆಂಜ್.ಬೇರೆ ತರಗತಿಗಳಲ್ಲಿ ಪಾಸ್ ಆಗುವುದಕ್ಕೂ ಪ್ರಗತಿಯಲ್ಲಿ ಪಾಸ್ ಆಗುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಯಾಕೆಂದರೆ ಇಲ್ಲಿ ಅನುತ್ತೀರ್ಣ ಆಗಿರುವವರಿಗೆ ಅದನ್ನು ಎದುರಿಸುವ ಶಕ್ತಿ ಕೊಡುತ್ತಾರೆ.ಇಂತಹ ಪ್ರಗತಿ ವಿದ್ಯಾಸಂಸ್ಥೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಕಡಿಮೆ ಆಗಿದೆ.ವಿದ್ಯಾಭ್ಯಾಸ ಮಾತ್ರವಲ್ಲ ಸಮಾಜದಲ್ಲಿ ಸಮಾನತೆಯ ಶಕ್ತಿಯನ್ನು ತುಂಬುವ ಗೋಕುಲ್‌ನಾಥ್ ಮತ್ತು ಪ್ರೇಮಲತಾ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರಲ್ಲದೆ,ಇವರು ಬದುಕಿನ ಚಿಂತನೆಯನ್ನು ಕಟ್ಟಿಕೊಡುವ ಫ್ಯಾಮಿಲಿ ಡಾಕ್ಟರ್ ಆಗಿ ಮೂಡಿ ಬಂದಿದ್ದಾರೆ ಎಂದರು.ಸುದ್ದಿ ಸಮೂಹ ಸಂಸ್ಥೆಯು ಆರೋಗ್ಯ, ಮಳೆ ಕೊಯ್ಲು, ಭ್ರಷ್ಟಾಚಾರದ ವಿರುದ್ಧ ಸಮಾಜದ ಜಾಗೃತಿ ಮಾಡುತ್ತಿದೆ ಎಂದರು.


ಪ್ರಯತ್ನ ಮತ್ತು ಪರಿಶ್ರಮಕ್ಕೆ ಅದೃಷ್ಟ ದೇವತೆ ಒಲೀತಾಳೆ:
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಾನಾ ಕಾರಣದಿಂದ ಕಲಿಕೆಯಿಂದ ಹಿಂದೆ ಸರಿಯಬಹುದು.ಆದರೆ ಅವರಿಗೆ ಆಶಾಕಿರಣವಾಗಿ, ದಾರಿ ದೀಪವಾಗಿ ಪ್ರಗತಿ ಸ್ಟಡಿ ಸೆಂಟರ್ ಮುಂದೆ ನಿಂತಿದೆ.ಶೈಕ್ಷಣಿಕವಾಗಿ ಸಿಗುವಂತಹ ಅಂಕ ಪಟ್ಟಿ ಜೀವನದ ಸರ್ವಸ್ವ ಅಲ್ಲ.ಯಾಕೆಂದರೆ ಅನೇಕ ಜನ ವ್ಯಾಸಂಗದಲ್ಲಿ ಶೇ.35 ಅಂಕ ಪಡೆದವರೂ ಮತ್ತೊಮ್ಮೆ ಪ್ರಯತ್ನ ಮಾಡಿ ಇವತ್ತು ಐಎಎಸ್ ಅಧಿಕಾರಿಗಳಾದವರೂ ನಮ್ಮ ಕಣ್ಣಮುಂದೆ ಇದ್ದಾರೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಏನೇ ಕಷ್ಟ ಬಂದರೂ ಶೈಕ್ಷಣಿಕವಾಗಿ ಮತ್ತು ವ್ಯವಹಾರಿಕವಾಗಿ ನೆಪ ಮಾತ್ರಕ್ಕೆ ಪ್ರಯತ್ನ ಮಾಡಬೇಕು.ಪ್ರಯತ್ನ ಮತ್ತು ಪರಿಶ್ರಮಕ್ಕೆ ಸಫಲತೆ ಸಿಗುತ್ತದೆ.ಅದೃಷ್ಟ ದೇವತೆ ಒಲೀತಾಳೆ ಎಂದರು.


ಮಕ್ಕಳಿಗೆ ಒಳ್ಳೆಯ ಸ್ಕೂಲ್,ಫೀಸ್ ಕೊಟ್ಟರೆ ಮುಗಿಯುವುದಿಲ್ಲ:
ಶಿಕ್ಷಣ ತಜ್ಞೆ ಪ್ರೇರಕ ಭಾಷಣಗಾರ್ತಿ ವಚನ ಜಯರಾಮ್ ಅವರು ಮಾತನಾಡಿ ನಾವು ನಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿರಬಹುದು, ಮನೆಯಲ್ಲೂ ಉತ್ತಮ ವಾತಾವರಣ ಇರಬಹುದು.ಸಮಾಜ ತಕ್ಕಮಟ್ಟಿಗೆ ಪ್ರೋತ್ಸಾಹ ನೀಡುತ್ತಿರಬಹುದು.ಒಳ್ಳೆಯ ಮಕ್ಕಳಾಗಿರಬಹುದು.ಆದರೂ ಎಲ್ಲಿಯೋ ತಪ್ಪುತ್ತಿರುವ ಆಯದಲ್ಲಿ ಪ್ರಗತಿ ಸ್ಟಡಿ ಸೆಂಟರ್‌ನಂತಹ ಸಂಸ್ಥೆಗಳು ಮಕ್ಕಳ ವೀಕ್‌ನೆಸ್ ಅರ್ಥ ಮಾಡಿಕೊಂಡು ತರಬೇತಿ ನೀಡುತ್ತವೆ.ಶಿಕ್ಷಣ ಸಂಸ್ಥೆ ಜೀವನದಲ್ಲಿ ವಿವೇಚನೆ ಮಾಡುವ ಶಕ್ತಿ ಕೊಡುತ್ತದೆ.ಪೋಷಕರು ಲೈಫ್ ಸ್ಕಿಲ್ ಕಲಿಸಬೇಕು.ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕೇವಲ ಒಳ್ಳೆಯ ಸ್ಕೂಲ್, ಫೀಸ್ ಕೊಟ್ಟರೆ ಮುಗಿಯುವುದಿಲ್ಲ.ಉತ್ತಮ ಪ್ರೋತ್ಸಾಹ ಸಿಗಬೇಕೆಂದು ಹೇಳಿದರು.ತನ್ನ ಮಗನಿಗೂ ವಾತಾವರಣ ಬದಲಿಸಿದ ಬಳಿಕ ಉತ್ತಮನಾದ ಎಂದವರು ಹೇಳಿದರು.‌


ಪ್ರಗತಿ ಶಿಕ್ಷಣ ಸಂಸ್ಥೆ ಶಿಲ್ಪಿಯಾಗಿ ಕಾರ್ಯನಿರ್ವಹಿಸುತ್ತಿದೆ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಕಠಿಣವಾದ ಪ್ರಗತಿಯನ್ನು ಸಾಧಿಸಿ ಇವತ್ತು ಪ್ರಗತಿಯಿಂದ ಸಾಧಕರನ್ನು ತಯಾರು ಮಾಡಿದ ಕೀರ್ತಿ ಗೋಕುಲ್‌ನಾಥ್ ಮತ್ತು ಹೇಮಲತಾ ಅವರಿಗೆ ಸಲ್ಲುತ್ತದೆ.ನಾನು ಗೋಕುಲನಾಥ್ ಅವರ 32 ವರ್ಷದ ಹಿಂದಿನ ಸ್ನೇಹಿತನಾಗಿ ಅವರನ್ನು ಅರಿಯಬಲ್ಲೆ.ನಾನು ಹಲವು ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದೇನೆ.ಸಂತೋಷ ತಂದಿದೆ. ಅದರಲ್ಲೂ ಇವತ್ತಿನ ಕಾರ್ಯಕ್ರಮ ವಿಭಿನ್ನತೆ ತಂದು ಕೊಟ್ಟಿದೆ.ಈ ಶಿಕ್ಷಣ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಮತ್ತು ಪ್ರಾಂಶುಪಾಲೆ ಹೇಮಲತಾ ಹಾಗು ಶಿಕ್ಷಕರು ಒಂದು ಶಿಲ್ಪಿಯಾಗಿ ಕಾರ್ಯನಿರ್ವಹಿಸಿ ಕಠಿಣವಾದ ಸವಾಲನ್ನು ಸಮಾಜದಲ್ಲಿ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ ಎಂದರು.


ವಿದ್ಯಾರ್ಥಿಯ ಪರಿವರ್ತನೆಗೆ ಪ್ರಗತಿ ಸ್ಟಡಿ ಸೆಂಟರ್ ಅಗತ್ಯ:
ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅವರು ಮಾತನಾಡಿ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬದುಕು ಕಟ್ಟಿಕೊಳ್ಳುವ ಕೌಶಲ್ಯ ಭರಿತ ಶಿಕ್ಷಣವೂ ಇದೆ.
ವಿದ್ಯಾರ್ಥಿ ಒಂದು ಹಂತದಲ್ಲಿ ಅನುತ್ತೀರ್ಣನಾದಾಗ ಆತನಿಗೆ ಮನೆಯಲ್ಲಿ ಜೋರು ಮಾಡುವುದು ಸಾಮಾನ್ಯ.ಇದರಿಂದ ಆತ ಮಾನಸಿಕವಾಗಿ ನೊಂದುಕೊಳ್ಳುತ್ತಾನೆ.ಅಂಥ ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡುವ ಕೆಲಸ ಪ್ರಗತಿಯಿಂದ ಆಗುತ್ತಿದೆ.ಅಂತಹ ಮಕ್ಕಳಿಗೆ ಉದ್ಯೋಗವೂ ಸಿಕ್ಕಿದೆ.ನನ್ನ ಮಗನೂ ಪ್ರಗತಿ ಸ್ಟಡಿ ಸೆಂಟರ್‌ನ ಮಾರ್ಗದರ್ಶನದಿಂದ ಸಮಾಜದಲ್ಲಿ ಮುಂದೆ ಬಂದಿದ್ದು, ಇದೀಗ ಪೊಲೀಸ್ ಸೇವೆಗೆ ಪ್ರಯತ್ನ ಮಾಡುತ್ತಿದ್ದಾನೆ ಎಂದರು.


ನೂರಾರು ವರ್ಷ ಸಂಸ್ಥೆ ಪ್ರಗತಿಯ ದಾಪುಗಾಲಿಡಲಿ:
ಪೋಷಕರ ಪರವಾಗಿ ಬೆಂಗಳೂರಿನ ಸವಿತಾಯಶೋದಾ ಅವರು ಮಾತನಾಡಿ ಪ್ರಗತಿ ಸ್ಟಡಿ ಸೆಂಟರ್ 16ನೇ ವರ್ಷಕ್ಕೆ ದಾಪುಗಾಲಿಡುತ್ತಿದೆ.ಈ ಸಂಸ್ಥೆ ನೂರಾರು ವರ್ಷ ಪ್ರಗತಿಯ ದಾಪುಗಾಲು ಇಡಲಿ,ನಮ್ಮಂಥ ಪೋಷಕರಿಗೆ ಆಶಾಕಿರಣವಾಗಿ ಬೆಳೆಯಲಿ ಎಂದರು.ನನ್ನ ಬಾಳಿನ ಆಶಾಕಿರಣ ಮತ್ತು ನನ್ನ ಮಗನ ಪಾಲಿನ ಆಶಾಕಿರಣ ಈ ಪ್ರಗತಿ ಸ್ಟಡಿ ಸೆಂಟರ್ ಆಗಿದೆ ಎಂದ ಅವರು, ನನ್ನ ಮಗ 9ನೇ ತರಗತಿಯ ತನಕ ಚೆನ್ನಾಗಿ ಓದಿದವ ಒಮ್ಮೆಲೇ ಕಲಿಕೆಯಲ್ಲಿ ಹಿಂದೆ ಬಿದ್ದ.ಕೊನೆಗೆ ಆತನಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆಗೆ ಹಾಜರಾಗಲೂ ಕಷ್ಟ ಆಗಿತ್ತು.ಅಂತಹ ಸಂದರ್ಭದಲ್ಲಿ ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಧೈರ್ಯ ತುಂಬಿದ್ದು ಪ್ರಗತಿ ಸ್ಟಡಿ ಸೆಂಟರ್ ಎಂದು ಅವರು ಭಾವುಕರಾದರು.ಈ ಸಂದರ್ಭ, ವೇದಿಕೆಯಲ್ಲಿದ್ದ ಅವರ ಗಂಡ ಅಪ್ಪಯ್ಯ ಪಿ.ಟಿ ಅವರು ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್ ಅವರನ್ನು ಆಲಂಗಿಸಿ ಕೃತಜ್ಞತೆ ಸಲ್ಲಿಸಿದರು.ಗೋಕುಲ್‌ನಾಥ್ ಅವರಿಗೂ ಆನಂದ ಭಾಷ್ಪ ಉಕ್ಕಿತು.


ಪ್ರಗತಿ ಸ್ಟಡಿ ಸೆಂಟರ್‌ನ ಲಕ್ಷಾಂತರ ತಾರೆಗಳು ದೇಶವಿದೇಶದಲ್ಲಿ ಬೆಳಗುತ್ತಿವೆ:
ನಿವೃತ್ತ ಶಿಕ್ಷಕ, ಮದುಪ್ರಪಂಚದ ಪ್ರಧಾನ ಸಂಪಾದಕ, ಸುದ್ದಿ ಬಿಡುಗಡೆ ಪ್ರತಿಭಾರಂಗದ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಅವರು ಮಾತನಾಡಿ ನಮ್ಮ ಪ್ರಯಣ ಸರಿಯಾದ ರೀತಿಯಲ್ಲಿದ್ದಾಗ ಅದಕ್ಕೆ ಬೆಳಕು ಕೊಡುವುದು ಶಿಕ್ಷಣ.ಇದಕ್ಕೆ ಪೂರಕವಾಗಿ ಇವತ್ತು ಪ್ರಗತಿ ಸ್ಟಡಿ ಸೆಂಟರ್‌ನ ಲಕ್ಷಾಂತರ ತಾರೆಗಳು ದೇಶವಿದೇಶದಲ್ಲಿ ಬೆಳಗುತ್ತಿವೆ.ಇಂತಹ ಸಾಧನೆಯ ಹಿಂದೆ ಪ್ರಗತಿ ಸ್ಟಡಿ ಸೆಂಟರ್‌ನ ಗೋಕುಲ್‌ನಾಥ್ ಮತ್ತು ಹೇಮಲತಾ ದಂಪತಿ ಶಿವಪಾರ್ವತಿಯಾಗಿ ನಮಗೆ ಕಾಣುತ್ತಾರೆ ಎಂದರು.


ಯಾರಾದರೂ ಸೋತರೆ ನಾವಿದ್ದೇವೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್ ಪಿ.ವಿ ಅವರು ಮಾತನಾಡಿ ಟ್ಯುಟೋರಿಯಲ್ ಆರಂಭಿಸಿದ ಕಾಲವಿತ್ತು.ಬಳಿಕದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಯಲ್ಲೇ ಅವರಿಗೆ ಪರೀಕ್ಷೆಗೆ ಭರ್ತಿ ಮಾಡಬೇಕಾದುದರಿಂದ ಅದು ಕೋಚಿಂಗ್ ಸೆಂಟರ್ ಆಗಿ ಪರಿವರ್ತನೆಯಾಗಿತ್ತು.ಇವತ್ತು ಹಿಂದಿನ ಕಾಲದ ಪರಿಸ್ಥಿತಿ ಇಲ್ಲ. ನಾನು ನೋಡಿದ ಹಾಗೆ ಕೊರೋನಾದ ಕಾಲದ ಬಳಿಕ ವಿದ್ಯಾರ್ಥಿಗಳು ಮುಂದೆ ಬರಲು ಹಿಂಜರಿಯುತ್ತಾರೆ.ನಾನು ಸಿ.ಸಿ ಕ್ಯಾಮರಾದಲ್ಲಿ, ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪ್ರತಿ ದಿನ ಪರಿಶೀಲಿಸುತ್ತೇನೆ.ಹಾಗಾಗಿ ಪ್ರತಿ ವಿದ್ಯಾರ್ಥಿಯ ಮೂಮೆಂಟ್ ನಮಗೆ ಗೊತ್ತಿದೆ.ನಾನು ಪ್ರತಿ ವಿದ್ಯಾರ್ಥಿಯನ್ನು ರೀಡಿಂಗ್ ಮಾಡುತ್ತೇನೆ.ಅದರಿಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ನಿಂತಿದೆ. ಈ ನಿಟ್ಟಿನಲ್ಲಿ ಯಾರೇ ವಿದ್ಯಾರ್ಥಿಗಳು ಸೋತರೆ ನಾವಿದ್ದೇವೆ ಎಂದು ಭರವಸೆ ನೀಡಿದರು.


ಮಕ್ಕಳ ಲೆವೆಲ್‌ಗೆ ಇಳಿದು ಪಾಠ:
ಪ್ರಗತಿ ಸ್ಟಡಿ ಸೆಂಟರ್‌ನ ಪ್ರಾಂಶಪಾಲೆ ಹೇಮಲತಾ ಗೋಕುಲ್‌ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ 15 ವರ್ಷದ ಹಿಂದೆ ನಾವು ನವೋದಯ ಕೋಚಿಂಗ್ ಕ್ಲಾಸ್ ಆರಂಭಿಸಿದ್ದೆವು.ಆಗ ಕೇವಲ 14 ಮಕ್ಕಳಿದ್ದ ಸಂಸ್ಥೆ 65 ಮಕ್ಕಳಿಗೆ ಏರಿತ್ತು.ಆಗ ಮಕ್ಕಳಿಗೆ ಶಿಸ್ತು ನೀಡುವ ಸಮವಸ ಜಾರಿಗೆ ತಂದೆವು.ಆಗ ಮಕ್ಕಳಿಗೂ ತಾವು ಅನುತ್ತೀರ್ಣರಾದ ವಿದ್ಯಾರ್ಥಿಗಳೆಂಬ ಕೀಳರಿಮೆ ಇಲ್ಲವಾಯಿತು.ಅದಕ್ಕೆ ತಕ್ಕಂತೆ ನಾವು ಕೂಡಾ ಮಕ್ಕಳ ಲೆವೆಲ್‌ಗೆ ಇಳಿದು ಪಾಠ ಮಾಡುತ್ತೇವೆ.ನಮ್ಮಲ್ಲಿ ಎಸ್‌ಎಸ್‌ಎಲ್‌ಸಿ ಬಂದವರು ಡಿಗ್ರಿ ಮುಗಿಸಿ ಹೋದವರು ಇದ್ದಾರೆ.ಉತ್ತಮ ಕೆಲಸದಲ್ಲಿ ಇದ್ದವರೂ ಇದ್ದಾರೆ.ನಿರಂತರ ಪ್ರಯತ್ನದಿಂದ ಉತ್ತಮ ಸಾಧನೆ ಮಾಡಿದ್ದಾರೆ.ನನ್ನ ಹೈದರಾಬಾದಿನ ಕನಸು ಪುತ್ತೂರಿಗೆ ಬಂದು ನನಸಾಗಿದೆ ಎಂದರು.
ಸನ್ಮಾನ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಪ್ರಗತಿ ಸ್ಟಡಿ ಸೆಂಟರ್‌ನ ಹಿರಿಯ ವಿದ್ಯಾರ್ಥಿಗಳಾದ ಬೆಂಗಳೂರಿನಲ್ಲಿ ಅಸಿಸ್ಟಂಟ್ ಪ್ರೊಫೆಸ್ಸರ್ ಆಗಿರುವ ಕು ವಿನಿತಾ, ಐಸಿಐಸಿಐ ಬ್ಯಾಂಕ್ ಉದ್ಯೋಗಿ ಕು.ಸುಶ್ಮಾ ಸಿ ಅವರನ್ನು ಸನ್ಮಾನ ಪತ್ರ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.ಪ್ರಗತಿ ಎಜ್ಯುಕೇಶನ್ ಫೌ-ಂಡೇಶನ್ 15 ವರ್ಷ ಸಾಗಿ ಬಂದ ಕುರಿತು ಪ್ರಗತಿ ಸ್ಟಡಿ ಸೆಂಟರ್‌ನ ಮುಖ್ಯಗುರು ಪ್ರಮೀಳಾ ಎನ್.ಡಿ ವಾರ್ಷಿಕ ವರದಿ ವಾಚಿಸಿದರು.ಸ್ಪರ್ಧಾ ಕಾರ್ಯಕ್ರಮ ನಡುವೆ ನಿತಿನ್ ರೈ ಕುಕ್ಕುವಳ್ಳಿ ಅವರ ನಿರ್ದೇಶನದ ‘ಧರ್ಮದೈವ-2’ ಚಿತ್ರದ ಹಾಡು ಮತ್ತು ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು.ಗುರುಪ್ರಿಯ ನಾಯಕ್ ಅವರ ಸಾರಥ್ಯದಲ್ಲಿ ‘ಗಾನನೃತ್ಯ ವೈಭವ’ ಪ್ರದರ್ಶನ ನಡೆಯಿತು.ಪ್ರಗತಿ ಸ್ಟಡಿ ಸೆಂಟರ್‌ನ ಶಿಕ್ಷಕರಾದ ಮಾಧವಿ, ಹರ್ಷಿತಾ, ಚೈತಾಲಿ, ಸುಶಾಂತ್, ಸುಮಿತ್ರಾ, ಸುಪ್ರಿತಾ, ಅಂಜನ್, ಶೃತಿ, ದೀಕ್ಷಿತಾ, ಕಲಾವತಿ ಅತಿಥಿಗಳನ್ನು ಗೌರವಿಸಿದರು.ಪ್ರಗತಿ ಸ್ಟಡಿ ಸೆಂಟರ್ ಸಹೋದ್ಯೋಗಿಗಳು ಪ್ರಾರ್ಥಿಸಿದರು.ಸುಶ್ಮಾ ಸ್ವಾಗತಿಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಶಿಕ್ಷಕಿ ಮಾಧವಿ ವಂದಿಸಿದರು.ಸಂಸ್ಥೆಯ ಇಂಗ್ಲೀಷ್ ಉಪನ್ಯಾಸಕಿ ಒಲಿಮಿಯ ಪಾಯಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸ್ಪರ್ಧೆಯ ವಿಜೇತರ ವಿವರ
ಪ್ರಗತಿ ವೈಭವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ (ಪ್ರ), ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ನರಿಮೊಗರು (ದ್ವಿ), ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ (ತೃ), ಪ್ರೌಢ ಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ(ಪ್ರ), ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು (ದ್ವಿ), ಸರಸ್ವತಿ ಪ್ರೌಢ ಶಾಲೆ ನರಿಮೊಗರು(ತೃ) ಬಹುಮಾನ ಪಡೆದರು.ವಿಜೇತರಿಗೆ ಟ್ರೋಫಿ, ಪ್ರಮಾಣ ಪತ್ರವನ್ನು ಗಣ್ಯರು ವಿತರಿಸಿದರು.ವಿದುಷಿ ಪವಿತ್ರ ರೂಪೇಶ್, ಹರೀಶ್ ಮಂಜೊಟ್ಟಿ, ರವಿ ಪಾಂಬಾರು, ನಿತಿನ್ ರೈ ಕುಕ್ಕುವಳ್ಳಿ, ನಾರಾಯಣ್ ರೈ ಕುಕ್ಕುವಳ್ಳಿ ತೀರ್ಪುಗಾರರಾಗಿ ಸಹಕರಿಸಿದರು.


ಹಿರಿಯ ವಿದ್ಯಾರ್ಥಿಗಳಿಬ್ಬರ ಅನಿಸಿಕೆ
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ನ ಅಸಿಸ್ಟೆಂಟ್ ರಿಲೇಶನ್‌ಶಿಪ್ ಮ್ಯಾನೇಜರ್ ಸುಶ್ಮಾ, ಎಲ್ಲಿ ಹೋದರೂ ಜನ ನನ್ನನು ಗುರುತಿಸುತ್ತಾರೆ.ನಾನು ಏನೂ ಆಗಲ್ಲ ಅಂದುಕೊಂಡಿದ್ದೆ. ಆದರೆ ನನಗೆ ಉತ್ತಮ ಪ್ರೋತ್ಸಾಹ ನೀಡಿ ಇವತ್ತು ನಾನು ಐಸಿಐಸಿಐ ಬ್ಯಾಂಕ್ ಉದ್ಯೋಗಿಯಾಗಿದ್ದೇನೆ.ಇದಕ್ಕೆ ನಾನು ಗೋಕುಲ್‌ನಾಥ್ ಮತ್ತು ಹೇಮಲತಾ ಮೇಡಂಗೆ ಕೃತಜ್ಞತೆ ಸಲ್ಲಿಸುತ್ತೇನೆ.ಇವತ್ತು ಏನು ಇದ್ದೀನಿ ಅದಕ್ಕೆ ಕಾರಣ ಪ್ರಗತಿ ಸ್ಟಡಿ ಸೆಂಟರ್ ಎಂದರು.ಇನ್ನೋರ್ವ ಹಿರಿಯ ವಿದ್ಯಾರ್ಥಿನಿ ಬೆಂಗಳೂರಿನ ನಿಜಲಿಂಗಪ್ಪ ಡಿಗ್ರಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಆಗಿರುವ ವಿನಿತಾ ಅವರು ಮಾತನಾಡಿ ನಾನು ಪ್ರಗತಿಗೆ ಬಂದ ವಿಚಾರ, ಪುತ್ತೂರಿಗೆ ಬಂದ ವಿಚಾರವನ್ನು ಇನ್‌ಸ್ಟ್ರಾಗ್ರಾಂನಲ್ಲಿ ಹಾಕಿಕೊಂಡಿದ್ದೇನೆ.ನಾನು ಪುತ್ತೂರಿಗೆ ಇಷ್ಟ ಇಲ್ಲದೆ ಬಂದಿದ್ದೆ.ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕೇವಲ ಫೆಲ್ ಆದ ಮಕ್ಕಳು ಮಾತ್ರ ಟ್ರೈನ್ ಆಗುವುದಲ್ಲ.ನನ್ನಂಥ ಅಹಂಕಾರ ಇರುವ ಮಕ್ಕಳನ್ನೂ ಉತ್ತಮ ದಾರಿಗೆ ತರುವಲ್ಲಿ ಪ್ರಗತಿಯ ಅಗತ್ಯತೆ ಮಾದರಿ ಎಂದರು.

LEAVE A REPLY

Please enter your comment!
Please enter your name here