ಪುತ್ತೂರು:ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳ ಸಂದೇಶ ರವಾನೆ ಮಾಡಿದ್ದಲ್ಲದೆ ದೇವಳದ ಪೂಜೆಗೆ ಅಡ್ಡಿ ಪಡಿಸಿದ ವಿಚಾರಕ್ಕೆ ಸಂಬಂಧಿಸಿ ಅರ್ಚಕರೊಬ್ಬರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನ್ಯಾಯಾಲಯ ಆದೇಶ ನೀಡಿದೆ.
ಬಾಳ್ತಿಲ ಕಶೆಕೋಡಿ ನಿವಾಸಿ ಎಂ.ನಾರಾಯಣ ಭಟ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದವರು.‘ನಾನು ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕನಾಗಿದ್ದು, ನ.9ರಂದು ಆರೋಪಿಗಳಾದ ಕೃಷ್ಣಮೂರ್ತಿ ಕಾರಂತ, ರೇವತಿ, ಐತ್ತಪ್ಪ ಭಂಡಾರಿ, ಪುಷ್ಪರಾಜ ಶೆಟ್ಟಿ, ವೇಣುಗೋಪಾಲ ಶೆಟ್ಟಿ ಮತ್ತು ದೀಪಕ್ ಶೆಟ್ಟಿ ಮತ್ತಿತರರು ದೇವಸ್ಥಾನದ ದಿನ ನಿತ್ಯದ ಪೂಜೆಯನ್ನು ನೆರವೇರಿಸಲು ಅಡ್ಡಿಪಡಿಸಿದ್ದಲ್ಲದೆ ಅರ್ಚಕ ವೃತ್ತಿಯಿಂದ ನನ್ನನ್ನು ತೆಗೆದು ಹೊಸದಾಗಿ ಅರ್ಚಕ ವೃತ್ತಿಗೆ ಬೇರೆಯವರನ್ನು ನೇಮಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.ಈ ಕುರಿತು ನ.10ಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದಾಗ,ಇದೊಂದು ಅಸಂಜ್ಞೆಯ ಪ್ರಕರಣವಾಗಿದ್ದು,ನ್ಯಾಯಾಲಯದ ಅನುಮತಿ ಪಡೆಯಲು ಹಿಂಬರಹ ನೀಡಿದ್ದರು.ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನನ್ನ ಗೌರವಕ್ಕೆ ಚ್ಯುತಿ ಬರುವಂತೆ ಅವಾಚ್ಯ ಶಬ್ದಗಳ ಸಂದೇಶವನ್ನು ನಕಲಿ ಆಡಿಯೋ ಮೂಲಕ ಬಿತ್ತರಿಸಿದ್ದಾರೆ.ಈ ಕುರಿತು ಕೂಡಾ ಪೊಲೀಸರಿಗೆ ದೂರು ನೀಡಲಾಗಿದೆ.ಆರೋಪಿಗಳು ಬಲತ್ಕಾರವಾಗಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿದ್ದಲ್ಲದೆ ಅದನ್ನು ತೆರೆದು ಪೂಜಾ ಕಾರ್ಯಕ್ರಮವನ್ನು ಇನ್ನೊಬ್ಬರಿಂದ ಮಾಡಿಸಿದ್ದಾರೆ’ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಉಪ್ಪಿನಂಗಡಿ ಪೊಲೀಸರಿಗೆ ಆದೇಶ ನೀಡಿದೆ.