ಡಿ.25, 26: ನೇರೆಂಕಿಗುತ್ತು ದೈವಗಳ ನೇಮೋತ್ಸವ, ಬ್ರಹ್ಮಬೈದರ್ಕಳ ಜಾತ್ರೋತ್ಸವ

0

ರಾಮಕುಂಜ: ಪುರಾಣ ಪ್ರಸಿದ್ಧ ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ಡಿ.25 ಮತ್ತು 26ರಂದು ನಡೆಯಲಿದೆ.


ಡಿ.25ರಂದು ಬೆಳಿಗ್ಗೆ ೮ರಿಂದ ಸ್ವಸ್ತಿ ಪುಣ್ಯಾಹವಾಚನ, ಗಣಪತಿಹೋಮ, ದುರ್ಗಾಹೋಮ, ಪಂಚವಿಂಶತಿ ಕಲಶ, ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಗಂಟೆ ೬ರಿಂದ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಕಲ್ಲುರ್ಟಿ ದೈವದ ನೇಮ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ ೯ರಿಂದ ದೈಯೊಂಕ್ಲು, ಮೈಸಂದಾಯ ನೇಮ, ಧೂಮಾವತಿ, ಭಾವನ ದೈವದ ನೇಮ ನಡೆಯಲಿದೆ.


ಡಿ.26ರಂದು ಪೂರ್ವಾಹ್ನ ಗಂಟೆ 9ಕ್ಕೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮ, ಬಟ್ಟಲು ಕಾಣಿಕೆ ಮತ್ತು ಕೈಕಾಣಿಕೆ, ಹರಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಇಳಿಯುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 10ರಿಂದ ಮಾರನೆ ದಿನ ಸೂರ್ಯೋದಯದ ತನಕ ಬೈದೇರುಗಳು ಮೀಸೆ ಧರಿಸುವುದು, ಮಾಣಿ ಬಾಲೆ ಗರಡಿ ಇಳಿಯುವುದು, ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟ್, ಬೈದೇರುಗಳ ಸೇಟ್, ಕಂಚಿಕಲ್ಲಿಗೆ ಕಾಯಿ ಹೊಡೆಯುವುದರೊಂದಿಗೆ ನೇಮೋತ್ಸವ ಸಂಪನ್ನಗೊಳ್ಳಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರರೂ ಆದ ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಅವರು ತಿಳಿಸಿದ್ದಾರೆ.


ಡಿ.25-ಹೊರೆಕಾಣಿಕೆ ಮೆರವಣಿಗೆ:
ಡಿ.25ರಂದು ಪೂರ್ವಾಹ್ನ 9.30ರಿಂದ ಹಳೆನೇರೆಂಕಿ ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಡಿ.26ರಂದು ರಾತ್ರಿ 8ಕ್ಕೆ ಧರ್ಮಜಾಗೃತಿ ಸಭೆ ನಡೆಯಲಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ, ಸಿವಿಲ್ ಇಂಜಿನಿಯರ್ ಡಾ| ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

LEAVE A REPLY

Please enter your comment!
Please enter your name here