ಶಾಂತಾರಾಮರ ಲೌಕಿಕ ಜೀವನ ಸೈನಿಕರಂತೆ ಇತ್ತು: ಪುರಂದರ ಭಟ್
ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಮಜ್ದೂರು ಸಂಘ ಪುತ್ತೂರು ವಿಭಾಗದ ವತಿಯಿಂದ ಡಿ.23ರಂದು ಪುತ್ತೂರಿನ ಸೈನಿಕರ ಭವನದಲ್ಲಿ ಇತ್ತೀಚೆಗೆ ನಿಧನರಾದ ಪುತ್ತೂರಿನ ನಿವೃತ್ತ ಸಂಚಾರ ನಿಯಂತ್ರಕರಾದ ದಿ. ಶಾಂತರಾಮ ವಿಟ್ಲರವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ಭಾರತೀಯ ಮಜ್ದೂರು ಸಂಘದ ಪುತ್ತೂರು ವಿಭಾಗದ ಸ್ಥಾಪಕಾಧ್ಯಕ್ಷ ಪುರಂದರ ಭಟ್ ರವರು ನುಡಿನಮನ ಸಲ್ಲಿಸಿ ಜೀವಕ್ಕಿಂತ ಪ್ರಿಯವಾದುದು ಮನುಷ್ಯನಿಗೆ ಬೇರೊಂದಿಲ್ಲ. ಶಾಂತಾರಾಮರ ಲೌಕಿಕ ಜೀವನ ಸೈನಿಕರಂತೆ ಇತ್ತು. ಬದುಕಿನಲ್ಲಿ ಎರಡು ಭಾಗವಿದೆ. ಬದುಕಿನಲ್ಲಿ ಎಂತಹ ಸನ್ನಿವೇಶವನ್ನು ಎದುರಿಸಲು ಸಿದ್ದರಿರಬೇಕು. ಕಷ್ಟ ಎಲ್ಲರಿಗೂ ಬರುತ್ತದೆ. ನಮಗೆ ಬೇಕಾಗಿರುವುದು ವಿಚಾರದ ಕ್ರಾಂತಿ. ಶಾಂತರಾಮರು ಬದುಕಿದ್ದಾಗ ಮಾಡಿದ ಉತ್ತಮ ಕೆಲಸಗಳೆಲ್ಲವನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದರು.
ಮಾಜಿ ಶಾಸಕ ಶಕುಂತಳಾ ಟಿ.ಶೆಟ್ಟಿರವರು ನುಡಿನಮನ ಸಲ್ಲಿಸಿ ಸಂಸ್ಥೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆದ ವ್ಯಕ್ತಿ. ಪ್ರತಿಯೋರ್ವರ ನೋವಿಗೆ ಸದಾ ಸ್ಪಂಧಿಸುತ್ತಿದ್ದ ವ್ಯಕ್ತಿ. ಅಸಾಧ್ಯವಾದುದನ್ನು ಸಾಧಿಸಿದ ವ್ಯಕ್ತಿ ಅವರು.
ಕುಶಿಯನ್ನು ಇನ್ನೊಬ್ಬರಿಗೆ ಹಂಚಿ ನೋವನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡ ಹೋದ ದೀಮಂತ ವ್ಯಕ್ತಿ. ಶಾಂತರಾಮ್ ರವರು ಉತ್ತಮ ವ್ಯಕ್ತಿತ್ವದ ಓರ್ವ ನಿಷ್ಕಲ್ಮಶ ವ್ಯಕ್ತಿ. ಯಾರಿಗೂ ತೊಂದರೆಯಾದರೂ ಸಹಾಯ ಹಸ್ತ ಚಾಚುವ ಎದೆಗಾರಿಕೆ ಅವರಲ್ಲಿತ್ತು. ಕಾರ್ಯಕರ್ತರಿಗೆ ತೊಂದರೆಯಾದಾಗ ಸ್ಪಂಧಿಸುವ ಮನಸ್ಸು ಅವರದ್ದಾಗಿತ್ತು. ಸಂಘಟನೆಗೆ ಅವರು ಅಪಾರ ಸಮಯನೀಡಿದ್ದಾರೆ. ಅವರ ಆಶಯದಂತೆ ಸಂಘಟನೆಯನ್ನು ನಾವೆಲ್ಲರೂ ಬೆಳೆಸೋಣ ಎಂದರು.
ಭಜರಂಗದಳದ ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕರವರು ನುಡಿನಮನ ಸಲ್ಲಿಸಿ ನಮಗೆ ಇದೊಂದು ಅಘಾತಕಾರಿ, ನೋವಿನ ಸಂಗತಿಯಾಗಿದೆ. ಶ್ರದ್ದೆ, ಬದ್ಧತೆಯ ಸೇನಾನಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ನಾವು ಮಾಡಿದ ಉತ್ತಮ ಕೆಲಸಗಳ ಆಧಾರದಲ್ಲಿ ಮಹಾತ್ಮನಾಗಬಲ್ಲ. ನಿಷ್ಟೆ, ಬದ್ಧತೆಯಿಂದ ಕೆಲಸ ಮಾಡಿದ ವ್ಯಕ್ತಿ ದಿ. ಶಾಂತರಾಮ ವಿಟ್ಲ. ಅವರೊಬ್ಬರು ಶಕ್ತಿಯಾಗಿದ್ದರು. ವಿಧಿನಿಯಮದಂತೆ ಅವರು ನಮ್ಮನ್ಮೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಸಾಧನೆ, ಆದರ್ಶಗಳನ್ನು ನಾವೆಲ್ಲರು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು.
ಭಾರತೀಯ ಮಜ್ದೂರು ಸಂಘದ ಪುತ್ತೂರು ವಿಭಾಗದ ಅಧ್ಯಕ್ಷರಾದ ಗಿರೀಶ್ ಮಳಿರವರು ನುಡಿನಮನ ಸಲ್ಲಿಸಿ ಅವರೊಬ್ಬರು ಕೆಎಸ್ ಆರ್ ಟಿಸಿ ಉದ್ಯೋಗಿಯಾಗಿ ನಾನು ಕಂಡಿಲ್ಲ. ಅವರೋರ್ವ ಉತ್ತಮ ಚಿಂತಕರಾಗಿದ್ದರು. ತನ್ನ ಇಡೀ ಜೀವನವನ್ನೇ ಪರೋಪಕಾರಕ್ಕಾಗಿ ಧಾರೆ ಎರೆದ ವ್ಯಕ್ತಿ ಅವರು. ಅವರು ಎಲ್ಲವನ್ನು ಸಾಧಿಸಿದ್ದಾರೆ ಎಂದರು.
ಮಹಾಲಿಂಗೇಶ್ವರ ದೇವರ ಕಟ್ಟೆ ಸಮಿತಿ ಅಧ್ಯಕ್ಷ ಲೊಕೇಶ್ ರವರು ನುಡಿನಮನ ಸಲ್ಲಿಸಿ ನೇರ, ದಿಟ್ಟ,ನಿರಂತರ ವ್ಯಕ್ತಿತ್ವಕ್ಕೆ ಇನ್ನೊಂದು ಹೆಸರೇ ದಿ.ಶಾಂತರಾಮ ವಿಟ್ಲ. ಪುತ್ತೂರಿನ ಇತಿಹಾಸದಲ್ಲೇ ಒಂದು ಸುಂದರ ಕಟ್ಟೆ ನಿರ್ಮಿಸುವಲ್ಲಿ ಮುಂಚುಣಿಯಲ್ಲಿದ್ದವರು ದಿ. ಶಾಂತರಾಮ ವಿಟ್ಲರವರು. ಅವರ ಹೋರಾಟ ಗುಣ ಇತರರಿಗೆ ಮಾದರಿ. ಉದಾರ ಮನೋಭಾವದ ವ್ಯಕ್ತಿ. ಪುತ್ತೂರಿನಲ್ಲಿ ಬಿಎಂಎಸ್ ನ ಉಳಿವಿಗೆ ಶಾಂತರಾಮ ವಿಟ್ಲರವರ ಪಾತ್ರ ಅಪಾರ ಎಂದರು.
ಬಿ.ಎಮ್.ಎಸ್. ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ ರೈ, ಭಾರತೀಯ ಮಜ್ದೂರು ಸಂಘದ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಡಿ., ಬಿ.ಎಂ.ಎಸ್.ರಿಕ್ಷಾ ಮಾಲಕ ಸಂಘದ ಗೌರವಾಧ್ಯಕ್ಷ ಲೊಕೇಶ್ ಹೆಗ್ಡೆ, ಕೆ.ಎಸ್.ಆರ್.ಟಿ.ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಕೆ.ಎಸ್.ಆರ್.ಟಿ. ಮಂಗಳೂರು ಘಟಕದ ಸಿಬ್ಬಂದಿ ಜಯರಾಮ ಮೂಡುಶೆಡ್ಡೆ, ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಸಿಬ್ಬಂದಿ ಮಹಾಬಲ ಗೌಡ ಗಡಿಮಾರು ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು. ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ನಿವೃತ್ತ ಸಿಬ್ಬಂದಿ ಕೆ.ರಮೇಶ್ ಶೆಟ್ಟಿ ವಾಮದಪದವು
ಕಾರ್ಯಕ್ರಮ ನಿರೂಪಿಸಿದರು.