ಕಡಬ: ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಇಂದು ಮಧ್ಯಾಹ್ನ ಮರ್ದಾಳ ಸಮೀಪದ ಅಳೇರಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಓಮ್ನಿಯಲ್ಲಿದ್ದ 8 ಮಂದಿ ಗಂಭೀರ ಗಾಯಗೊಂಡಿದ್ದು, ಓಮ್ನಿ ಚಾಲಕ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ (53) ಎಂಬವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಗಾಯಾಳುಗಳಾದ ಮೃತ ರವಿ ಅವರ ತಾಯಿ ಮಣಿಯಮ್ಮ(75), ಪತ್ನಿ ವಾಣಿ (47), ಪುತ್ರಿ ರಿಷಾ (19), ಪುತ್ರ ಶರಣ್ (10), ಸಹೋದರ ಯೋಗೇಶ್ (55), ಅವರ ಪತ್ನಿ ನೀತು (45), ಪುತ್ರಿ ನೇಹಾ (24), ಪುತ್ರ ಅಂಜನ್ (14) ಇವರಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಿರುವಿನಲ್ಲಿ ರಸ್ತೆ ಕಿರಿದಾಗಿದ್ದು ರಸ್ತೆಗೆ ತಾಗಿದಂತೆ ಇರುವ ವಿದ್ಯುತ್ ಕಂಬದಿಂದಾಗಿ ಅಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.