ಪುತ್ತೂರು:ದ.27ರಂದು ನಡೆಯಲಿರುವ ಪುತ್ತೂರು ನಗರಸಭೆ ಉಪಚುನಾವಣೆಗೆ ಸಂಬAಧಿಸಿ ಪುತ್ತಿಲ ಪರಿವಾರ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳಿಬ್ಬರು ಚುನಾವಣಾ ಪ್ರಚಾರ ಪತ್ರಿಕೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಕರಪತ್ರದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಚಿತ್ರ ಹಾಗೂ ಪುತ್ತಿಲ ಪರಿವಾರ ಎಂಬ ಚಿಹ್ನೆಯನ್ನು ಬಳಸುವ ಮೂಲಕ ಮತದಾರರಿಗೆ ಆಮಿಷ ಒಡ್ಡುವ ಕಾರ್ಯ ಮಾಡಲಾಗುತ್ತಿದೆ ಎಂದು ಅಭ್ಯರ್ಥಿಗಳಿಗೆ ನಗರ ಸಭೆಯ ನೋಡಲ್ ಅಧಿಕಾರಿಯವರು ದ.22ರಂದು ನೋಟೀಸ್ ಜಾರಿಗೊಳಿಸಿದ್ದು, ಈ ರೀತಿ ಚಿತ್ರ ಪ್ರಕಟಿಸಲಾಗಿರುವ ಫಲಕಗಳನ್ನು 24 ಗಂಟೆಯೊಳಗೆ ತೆರವುಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಪುತ್ತೂರು ನಗರಸಭಾ ಉಪಚುನಾವಣೆ ಕಾರ್ಯ ಕಲಾಪಗಳು ನಡೆಯುತ್ತಿರುವ ಸಂದರ್ಭದಲ್ಲಿ ಪುತ್ತಿಲ ಪರಿವಾರ ಎಂಬ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳಾದ ಅನ್ನಪೂರ್ಣ ಎಸ್.ಕೆ.ರಾವ್ ಹಾಗೂ ಚಿಂತನ್ ಪಿ. ಎಂಬವರು ಪತ್ರಕಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಚಿತ್ರವನ್ನು ಹಾಗೂ ಪುತ್ತಿಲ ಪರಿವಾರ ಎಂದು ಚಿಹ್ನೆ ಪ್ರಕಟಿಸುತ್ತಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಿದೆ.ಚುನಾವಣಾಧಿಕಾರಿಗಳನ್ನು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ದಾಖಲಾಗಿರುತ್ತದೆ.
ಪುತ್ತೂರು 11ನೇ ವಾರ್ಡ್ ನೆಲ್ಲಿಕಟ್ಟೆಯ ವ್ಯಾಪ್ತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮತದಾರರಿಗೆ ಪುತ್ತಿಲ ಪರಿವಾರದಿಂದ ರಾಜಕೀಯ ದೃಷ್ಟಿಯಲ್ಲಿ, ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಕರಪತ್ರ ಹಂಚುವ ಮೂಲಕ ಮತದಾನಕ್ಕೆ ಅಮಿಷ ಒಡುತ್ತಿದ್ದಾರೆ.ಹಣದ ಲಾಭಿಯು ಉಚಿತ ಊಟ, ತಿಂಡಿ ಬಟ್ಟೆ, ದೇವರ ಪ್ರಸಾರ ನೀಡುವ ಆಮಿಷವನ್ನು ಈ ಕಾರ್ಯಕ್ರಮದ ಮುಖಾಂತರ ಪುತ್ತಿಲ ಪರಿವಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ದೂರು ದಾಖಲಾಗಿರುತ್ತದೆ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದ್ದು ಫಲಕಗಳನ್ನು ಈ ಕೂಡಲೇ ತೆರವುಗೊಳಿಸತಕ್ಕದ್ದು.
ಈ ನೋಟೀಸ್ ನೀಡಿದ 24 ಗಂಟೆಯೊಳಗೆ ಕ್ರಮ ಕೈಗೊಂಡು ವರದಿ ಮಾಡುವಂತೆ ಸೂಚಿಸಿದೆ ಎಂದು ಪುತ್ತೂರು ನಗರ ಸಭಾ ಉಪಚುನಾವಣೆ 2023 ಎಂ.ಸಿ.ಸಿ. ನೋಡಲ್ ಅಧಿಕಾರಿಯವರು ಅನ್ನಪೂರ್ಣ ಎಸ್. ಕೆ. ರಾವ್ ಹಾಗೂ ಚಿಂತನ್ ಪಿ. ಅವರಿಗೆ ನೋಟೀಸ್ ನೀಡಿದ್ದು, ಪ್ರತಿಯನ್ನು ಪುತ್ತೂರು ನಗರ ಸಭಾ ಚುನಾವಣಾಧಿಕಾರಿ ಹಾಗೂ ಪುತ್ತೂರು ತಹಸೀಲ್ದಾರರಿಗೆ ನೀಡಿರುವುದಾಗಿ ವರದಿಯಾಗಿದೆ.