ಕಡಬ: ಕಡಬ ಸಮೀಪದ ಹೊಸಮಠ ನದಿ ಕಿನಾರೆಯಲ್ಲಿ ತಲೆ ಎತ್ತಲಿರುವ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಸಮುದಾಯ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ ಡಿ.26ರಂದು ನೆರವೇರಲಿದ್ದು, ಇದಕ್ಕಾಗಿ ಸಕಲ ಸಿದ್ದತೆಗಳು ನಡೆದಿದ್ದು ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನದಿ ಕಿನಾರೆಯ ಸುಮಾರು 3 ಎಕ್ರೆ ಜಾಗದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಜನರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ 3 ದರ್ಜೆಯ ಸಮುದಾಯ ಭವನದ ನಿರ್ಮಾಣ ಯೋಜಯಲ್ಲಿದೆ. ಇದರ ಶಿಲಾನ್ಯಾಸ ಜೊತೆಗೆ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನೆ, ಕಡಬ ತಾಲೂಕು ನೂತನ ಸಮಿತಿಯ ಪದಗ್ರಹಣ ನಡೆಯಲಿದೆ. ಯಶಸ್ವಿ ಕಾರ್ಯಕ್ರಮಕ್ಕಾಗಿ ಸಮುದಾಯದ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ರಚಿಸಿದ ವಿವಿಧ ಸಮಿತಿಗಳ ಕಾರ್ಯಕರ್ತರು ತನ್ನ ಸೇವೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿ ತಳಿರು ತೋರಣಗಳಿಂದ ಶೃಂಗಾರಗೊಂಡಿದೆ. ಮಂಗಳೂರು ಆದಿಚುಂಚನಗಿರಿ ಕಾವೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರ ನಿರಂತರ ಮಾರ್ಗದರ್ಶನದಲ್ಲಿ ಸಿದ್ದತೆ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.
ಇಂದು ಹೊರೆಕಾಣಿಕೆ ಸಮರ್ಪಣೆ:
ಎಲ್ಲಾ ಗ್ರಾಮಗಳಿಂದ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಬರುವ ಹೊರೆಕಾಣಿಕೆಯನ್ನು ವಾಹನ ಜಾಥಾದ ಮೂಲಕ ಶಿಲಾನ್ಯಾಸ ನೆರವೇರಲಿರುವ ಹೊಸಮಠಕ್ಕೆ ತರಲಾಗುವುದು, ಡಿ.26 ಬೆಳಿಗ್ಗೆ 9.೦೦ಕ್ಕೆ ಕಡಬ ಒಕ್ಕಲಿಗ ಸ್ಪಂದನ ಸಮುದಾಯ ಸಹಕಾರ ಸಂಘದ ಉದ್ಘಾಟನೆ, ಬಳಿಕ ಕಡಬದಿಂದ ಹೊಸಮಠದವರೆಗೆ ವಾಹನಾ ಜಾಥಾ ಮೆರವಣಿಗೆ ಉದ್ಘಾಟನೆ, ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರು ಡಾ| ನಿರ್ಮಾಲಾನಂದನಾಥ ಮಹಾಸ್ವಾಮೀಜಿ 10.15ಕ್ಕೆ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮಧ್ಯಾಹ್ನ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ, ಯಕ್ಷಗಾನ ಸಾಧಕರಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದ ಎರಡು ದಿನವೂ ರಾತ್ರಿಯವರೆಗೆ ಊಟೋಪಚಾರದ ವ್ಯವಸ್ಥೆ ಇದೆ.
ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಸತಿ ನಿಲಯ, ವಾಣಿಜ್ಯ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದ ಗೌಡ ಶಿಲನ್ಯಾಸ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಿದ್ದಾರೆ. ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘ ನಿಯಮಿತ ಉದ್ಘಾಟನೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸಲಿದ್ದಾರೆ. ಸಭಾ ಕಾರ‍್ಯಕ್ರಮ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ನೆರವೇರಸಿಲಿದ್ದಾರೆ. ವಿಪಕ್ಷ ನಾಯಕ ಆರ್ ಆಶೋಕ್ ಜಾಥ ಉದ್ಘಾಟಿಸಲಿದ್ದಾರೆ. ಸಂಘದ ಸದಸ್ಯರಿಗೆ ಗೌರವಾರ್ಪಣೆಯನ್ನು ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವಥ್ ನಾರಾಯಣ್ ನೆರವೇರಿಲಸಿದ್ದಾರೆ. ಸ್ಥಾಪಕ ಸದಸ್ಯರಿಗೆ ಗೌರವಾರ್ಪಣೆಯನ್ನು ರಾಜ್ಯ ಒಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಹನುಮಂತಯ್ಯ ನೆರವೇರಿಲಿದ್ದಾರೆ. ಮಂಗಳೂರು ಆದಿಚುಂಚನಗಿರಿ ಕಾವೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಡಬ ಒಕ್ಕಲಿಗೆ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅಧ್ಯಕ್ಷತೆ ವಹಿಲಿದ್ದಾರೆ.