ಕುಕ್ಕೆ ಜಾತ್ರೋತ್ಸವ ಸಂಪನ್ನ-ನೀರಿನಲ್ಲಿ ಬಂಡಿ ಉತ್ಸವ

0

ಕಾಣಿಯೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಡಿ.24ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿದಾನ ನೆರವೇರಿಸಿದರು.

ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು. ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಮಧ್ಯಾಹ್ನದ ನಂತರ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಲ್ಲಕ್ಕಿ ಉತ್ಸವ ಆರಂಭವಾಯಿತು. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ನಂತರ ವಿವಿಧ ಸಂಗೀತ ಸುತ್ತುಗಳ ಪಲ್ಲಕ್ಕಿ ಉತ್ಸವ ನೀರಿನಲ್ಲಿ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು. ಈ ವಿಶಿಷ್ಠ ಉತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಕೃತಾರ್ಥರಾದರು. ಡಿ.24ರ ಬೆಳಗ್ಗೆ ಸುಮುಹೂರ್ತದಲ್ಲಿ ಕೊಪ್ಪರಿಗೆ ಇಳಿಯಿತು. ಆ ಬಳಿಕ ದೇವಳದಲ್ಲಿ ಮಹಾ ಸಂಪ್ರೋಕ್ಷಣಾ ಹೋಮವು ನೆರವೇರಿತು.


ನೀರಿನಲ್ಲಿ ಆಡಿದ ಯಶಸ್ವಿ:
ಶ್ರೀ ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ತುಂಬಿಸಿದ ನೀರಿನಲ್ಲಿ ಸಂಭ್ರಮಿಸಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ಮಕ್ಕಳೊಂದಿಗೆ ನೀರಾಟವಾಡಿ ಸಂಭ್ರಮಿಸಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರು, ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.

ವಿಶಿಷ್ಠವಾದ ನೀರಿನಲ್ಲಿ ಬಂಡಿ ಉತ್ಸವದ ಸಂದರ್ಭ ಈ ಬಾರಿ ಶ್ರೀ ದೇವಳದಲ್ಲಿ ಸಹಸ್ರಾರು ಭಕ್ತರು ಸೇರಿದ್ದರು. ರಜಾದಿನವಾದ ಆದಿತ್ಯವಾರ ಶ್ರೀ ದೇವಳದಲ್ಲಿ ನಡೆದ ವಿಶಿಷ್ಠವಾದ ಉತ್ಸವವನ್ನು ಊರ ಮತ್ತು ಪರವೂರ ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಜ.16 ಕಿರುಷಷ್ಠಿ:
ಶ್ರೀ ದೇವಳದಲ್ಲಿ ಚಂಪಾಷಷ್ಠಿಯ ನಂತರ ಶ್ರೀ ದೇವರ ಕಿರುಷಷ್ಠಿ ರಥೋತ್ಸವವು ಜ.16ರಂದು ಸಂಜೆ ನೆರವೇರಲಿದೆ. ಈ ಮೊದಲು ಕಿರುಷಷ್ಠಿ ಅಂಗವಾಗಿ ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

LEAVE A REPLY

Please enter your comment!
Please enter your name here