1947 ಆ.15 ಭಾರತಕ್ಕೆ ಬ್ರಿಟೀಷರಿಂದ ನಮ್ಮ ಕೈಗೆ ಆಡಳಿತ ಬಂದ ದಿನ. ಆದರೆ ಜ.26 ಪ್ರಜಾಪ್ರಭುತ್ವದ ದಿನ. ಜನರಿಗೆ ಸಂವಿಧಾನ ದೊರಕಿ ನಮಗೆ ಬೇಕಾದವರನ್ನು ಆಯ್ಕೆ ಮಾಡುವ, ಎಲ್ಲರಿಗೂ ಸಮಾನ ಅವಕಾಶದ ಹಕ್ಕು ನೀಡಿದ ದಿನ – ಇಡೀ ದೇಶದ ಎಲ್ಲಾ ಧರ್ಮದವರಿಗೂ, ಜಾತಿಯವರಿಗೂ, ಎಲ್ಲಾ ನಿವಾಸಿಗಳಿಗೂ ಸ್ವಾತಂತ್ರ್ಯದ ಹಕ್ಕು ನೀಡಿದ, ಪ್ರತಿಯೊಬ್ಬರಿಗೂ ಸಮಾನ ಮತದಾನದ ಅವಕಾಶದ ಹಕ್ಕು ನೀಡಿದ ದಿನವದು.
ನಮ್ಮ ದೇಶದ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ಮೋದಿಜೀ, ರಾಹುಲ್ ಗಾಂಧಿ, ದೇವೇಗೌಡ, ಅಮಿತ್ ಶಾ, ಸಿದ್ಧರಾಮಯ್ಯ ಸಹಿತ ದೇಶದ ಯಾವುದೇ ನಾಯಕರಿಗಾಗಲೀ ಇರುವುದು ಒಂದೇ ಓಟಿನ ಹಕ್ಕು. ದೇಶದ ಶ್ರೀಮಂತರಾದ ಅದಾನಿ, ಅಂಬಾನಿ, ಟಾಟಾ, ಬಿರ್ಲಾ, ಎಷ್ಟೇ ಪ್ರಭಾವಿ ಬುದ್ಧಿವಂತ ವ್ಯಕ್ತಿಗಳಿಗಾಗಲೀ ಇರುವುದು ಒಂದೇ ಓಟಿನ ಬಲ. ನಮ್ಮ ಊರಿನಲ್ಲಿ, ದೇಶದಲ್ಲಿ ಯಾವುದೇ ಮೂಲೆಯಲ್ಲಿರುವ ಅತೀ ಬಡವರಿಗೂ, ನಿರಕ್ಷರಸ್ಥರಿಗೂ, ಕೃಷಿಕರಿಗೂ, ಕೂಲಿ ಕಾರ್ಮಿಕರಿಗೂ, ರಿಕ್ಷಾ ಚಾಲಕರಿಗೂ, ವಕೀಲರಿಗೂ, ವೈದ್ಯರಿಗೂ, ಶಿಕ್ಷಕರಿಗೂ, ಯಾವುದೇ ಕಸುಬು ಮಾಡುವವರಿಗೂ ಇರುವ ಓಟಿನ ಹಕ್ಕು ಒಂದೇ. ಸಂವಿಧಾನದ ಎದುರು ಎಲ್ಲರೂ ಸಮಾನರು. ಯಾವುದೇ ಊರಿನ ಪಂಚಾಯತ್, ತಾ.ಪಂ., ಜಿ.ಪಂ., ವಿಧಾನ ಸಭೆ, ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ಆಯಾ ಕ್ಷೇತ್ರದಲ್ಲಿ ಮಾತ್ರ ಓಟಿನ ಅವಕಾಶವಿದೆ. ಅಂದರೆ ಆಯಾ ಕ್ಷೇತ್ರದಲ್ಲಿ ಆಡಳಿತದ ಜನಪ್ರತಿನಿಧಿಗಳ ಆಯ್ಕೆಗೆ ಅಲ್ಲಿಯ ಕ್ಷೇತ್ರದ ಮತದಾರರಿಗೆ ಮಾತ್ರ ಅವಕಾಶ. ದೇಶದ ಪ್ರಧಾನಿ ಮೋದಿಯವರಿಗಾಗಲೀ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗಾಗಲೀ, ದೇಶದ ಶ್ರೀಮಂತ ಅದಾನಿ, ಅಂಬಾನಿಯವರಿಗಾಗಲೀ ಅವರ ಕ್ಷೇತ್ರವನ್ನು ಬಿಟ್ಟು ಹೊರಗಿನ ಯಾವುದೇ ಕ್ಷೇತ್ರದಲ್ಲಿ ಮತದಾನ ಮಾಡಿ ಗೆಲ್ಲಿಸುವ ಅವಕಾಶವಿಲ್ಲ. ಎಂಬುದು ಎಲ್ಲರಿಗೂ ತಿಳಿದಿದೆ.
ಆದುದರಿಂದ ಪ್ರತಿಯೊಬ್ಬ ಮತದಾರನಿಗೂ ನಮ್ಮ ನಮ್ಮ ಕ್ಷೇತ್ರದ ಪ್ರತಿನಿಧಿಯೇ ಮುಖ್ಯ. ಅವರು ಅರ್ಹರಾಗಿರಬೇಕು, ಸಮರ್ಥರಾಗಿರಬೇಕು. ತಮ್ಮ ಕ್ಷೇತ್ರದ ಮತದಾರರು ದೇವರು ಎಂದು ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕು. ಜನರ ಸೇವೆಗಾಗಿ ಆಯ್ಕೆಯಾಗಿದ್ದೇನೆ ಎಂದು ಯೋಚಿಸಿ ಅವರ ಹಿತವನ್ನು ಕಾಪಾಡುವವರಾಗಬೇಕು. ಅದರ ಬದಲು ನಮ್ಮ ನಾಯಕರಿಂದಾಗಿ ಗೆಲುವು. ಅವರ ಸೇವೆಗಾಗಿ ಆಯ್ಕೆಯಾಗಿರುವುದು ಎಂದು ಯೋಚಿಸಿದರೆ ಜನರ ಮತದಾನದ ಹಕ್ಕಿಗೆ ಬೆಲೆಯಿರಲಾರದು. ನಮ್ಮ ಊರಿನ ಮತದಾರರ ಹಿತ ಕಾಯದೆ. ಹೈಕಮಾಂಡಿನ ಮನೆ ಬಾಗಿಲು ಕಾಯುವವರಾದರೆ ಹಿಂದಿನ ರಾಜರುಗಳ ಆಡಳಿತಕ್ಕಿಂತ ಅಪಾಯಕಾರಿ ಗುಲಾಮಗಿರಿಯ ಸಂಸ್ಕೃತಿಯಾಗಬಹುದು. ಪ್ರಜಾಪ್ರಭುತ್ವವೇ ನಾಶವಾಗಬಹುದು.
ಈ ಮೇಲಿನ ಚಿಂತನೆಯೊಂದಿಗೆ ಆಯಾ ಕ್ಷೇತ್ರದ, ದೇಶದ ಎಲ್ಲಾ ಮತದಾರರು ‘ಈ ಊರು ದೇಶ ನಮ್ಮದು, ಆಡಳಿತ ನಮ್ಮದು, ನಮಗಾಗಿ ಇರುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಜನರು ರಾಜರುಗಳು. ಜನಪ್ರತಿನಿಧಿಗಳು, ಅಧಿಕಾರಿಗಳು ಜನಸೇವಕರು. ನಮ್ಮ ಸೇವೆಗಾಗಿ ಇರುವವರು’ ಎಂಬುವುದನ್ನು ತಿಳಿದುಕೊಂಡು ಆಚರಣೆಗೆ ತಂದರೆ ನಾವು ನಿಜವಾದ ಅರ್ಥದಲ್ಲಿ ರಾಜರಾಗುತ್ತೇವೆ. ಪ್ರಜಾಪ್ರಭುತ್ವ ನಮ್ಮದಾಗುತ್ತದೆ. ಅದನ್ನು ಕಾರ್ಯರೂಪಕ್ಕೆ ತರದಿದ್ದರೆ ನಾವು ಜನರು ಎಂದಿನಂತೆ ಗುಲಾಮರಾಗುತ್ತೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಾಜರುಗಳಂತೆ ಮೆರೆಯುತ್ತಾರೆ. ಆದುದರಿಂದ ಜನರು ಜಾಗೃತರಾಗಲು ನಮ್ಮ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸುವ ದಿನವಾಗಿ ಜ.26 ಪ್ರಚಾಪ್ರಭುತ್ವದ ದಿನವನ್ನು ಮನೆಮನೆಯಲ್ಲಿ ಸಂಭ್ರಮಿಸೋಣ. ಊರು ಊರುಗಳಲ್ಲಿ ಎಲ್ಲಾ ಕಚೇರಿಗಳಲ್ಲಿ ಆಚರಿಸೋಣ. ನಾವು ರಾಜರು, ಈ ಊರು ನಮ್ಮದು, ನಮಗಾಗಿ ಆಡಳಿತ ಎಂಬುವುದರೊಂದಿಗೆ ಲಂಚ-ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆಯನ್ನು ಎಲ್ಲೆಡೆ ಮೊಳಗಿಸೋಣ.
ಈ ಪ್ರಜಾಪ್ರಭುತ್ವದ ಘೋಷಣೆಯನ್ನು ಮೊಳಗಲು ಮತ್ತು ಘೋಷಣೆಯನ್ನು ಎಲ್ಲಾ ಕಡೆಯಲ್ಲಿ ಆಚರಣೆಗೆ ತರಲು ಅದಕ್ಕೆ ಸಂಬಂಧಿಸಿ ಫಲಕವನ್ನು ಈ ಕೆಳಗೆ ನೀಡಿದ್ದೇವೆ. ಅದನ್ನು ಎಲ್ಲಾ ಕಡೆ ಅಳವಡಿಸೋಣ.