*ಸನಾತನ ಧರ್ಮ ಉಳಿಸಿಕೊಂಡರೆ ನಮ್ಮ ಬದುಕು ಸುಂದರ -ವಿದ್ಯಾಪ್ರಸನ್ನ ಸ್ವಾಮೀಜಿ
*ಸನಾತನ ಧರ್ಮ ಯಾವತ್ತು ಅಲಿಯುವುದಿಲ್ಲ – ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ
*ಧರ್ಮ ರಹಿತ ವಿಚಾರದಲ್ಲಿ ದೂರವಿರುವ – ಮಹಾಬಲ ಸ್ವಾಮೀಜಿ
*ಶನಿಪೂಜೆಯ ಎರಡು ಪಾಲು ಹೆಚ್ಚು ಜನರು ಬಂದಿರುವುದು ಸಂತೋಷ – ಕೇಮಾರು ಶ್ರೀ
*ಹಿಂದು ಬಾಂಧವರು ಒಂದು ಗೂಡಿಸುವ – ಡಾ. ಸುರೇಶ್ ಪುತ್ತೂರಾಯ
*ಸವಾಲುಗಳಿಗೆ ಸಂದೇಶ ಕೊಡಲು, ಲೋಕಕಲ್ಯಾಣರ್ಥಕ್ಕಾಗಿ ಕಲ್ಯಾಣೋತ್ಸವ – ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ ದೇವರಿಗೆ ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿವತಿಯಿಂದ ಇತಿಹಾಸ ಪ್ರಸಿದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.25ರಂದು ಅತ್ಯಂತ ವೈಭವದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಡಿ.24ರಂದು ಸಂಜೆ ಸಾವಿರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಯಿತು.
ಬೊಳುವಾರಿನಲ್ಲಿ ವೈಭವದ ಮೆರವಣಿಗೆಯನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಚೆಂಡೆಕುಣಿತ, ನೃತ್ಯ ಭಜನೆ ತಂಡದೊಂದಿಗೆ, ಕೇಸರಿ ಶಲ್ಯ ಧರಿಸಿದ ಮಹಿಳೆಯರು ಮೆರವಣಿಯುದ್ದಕ್ಕೂ ಪುಷ್ಪಾರ್ಚಣೆ ಮಾಡುವ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಗೆ ಬಂದು ಅಲ್ಲಿಂದ ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸಹಿತ ಪದಾಧಿಕಾರಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರಿರುವ ಪಲ್ಲಕಿಯನ್ನು ತಾವೆ ಹೆಗಲಮೇರಿಸಿ ಪ್ರಧಾನ ವೇದಿಕೆಗೆ ತಂದು ಅರ್ಚಕರಿಗೆ ಅರ್ಪಿಸಿದರು. ವಿಶಾಲವಾದ ಸುಂದರ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ಈ ಸಂದರ್ಭ ವೆಂಕಟರಮಣ ಗೋವಿಂದ.. ಗೋವಿಂದಾ.. ಶ್ರೀನಿವಾಸ ಗೋವಿಂದ.. ಸ್ಮರಣೆಯಲ್ಲಿ ಭಕ್ತರು ಮುಳುಗಿದರು. ಶ್ರೀನಿವಾಸನನ್ನು ಕೊಂಡಾಡುವ ಭಕ್ತಿಗೀತೆ, ಭಜನೆ, ಮಂತ್ರಗಳು ಎಲ್ಲೆಡೆ ಮೊಳಗಿದವು. ಶ್ರೀನಿವಾಸ ದೇವರ ಪ್ರತಿಷ್ಠೆಯ ಮುಂದೆ ಸನಾತನ ಸಮಾಗಮನ ನಡೆಯಿತು.
ಸನಾತನ ಧರ್ಮ ಉಳಿಸಿಕೊಂಡರೆ ನಮ್ಮ ಬದುಕು ಸುಂದರ:
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ ಭಗವಂತನಿಗೆ ವಿವಾಹ ಮಾಡಿಸಲು ನಾವು ಯಾರೂ ಅಲ್ಲ. ಭಗವಂತನಿಗೆ ನಿತ್ಯ ಕಲ್ಯಾಣ. ಬದುಕಿನಲ್ಲಿ ಭಗವಂತನ ಸ್ತೋತ್ರ ಮಾಡುವ ಕಾರ್ಯಕ್ರಮವೇ ಶ್ರೀನಿವಾಸ ಕಲ್ಯಾಣೋತ್ಸವ. ಭಗವಂತನ ಬಗ್ಗೆ ಒಳ್ಳೆಯ ಶಬ್ದವನ್ನು ಪ್ರಯೋಗ ಮಾಡಿದರೆ ಇದು ನಿತ್ಯ ಕಲ್ಯಾಣೋತ್ಸವ. ಭಗವಂತನ ನಾಮ ಉಚ್ಛಾರ ಮಾಡದಿದ್ದರೆ ನಮ್ಮ ಬದುಕು ವ್ಯರ್ಥವಾಗುತ್ತದೆ ಎಂಬುದು ಪ್ರಾಚೀನರ ಮಾತು. ಹಾಗಾಗಿ ಭಗವಂತನ ಸ್ತ್ರೋತ್ರ ನಿತ್ಯ ಮಾಡಬೇಕು. ಅದೇ ರೀತಿ ಸಂಪತನ್ನು ಯಾವ ದುಷ್ಟ ಚಟಗಳಿಗೆ ಕೊಡದೆ ಧರ್ಮಕಾರ್ಯಗಳಿಗೆ ವಿನಿಯೋಗ ಮಾಡಿದರೆ ಲಕ್ಷ್ಮೀ ಧಾರಣೆ ಮಾಡಿದ ಫಲ ಬರುತ್ತದೆ. ಸಂಪತನ್ನು ಸದ್ವಿನಿಯೋಗ ಮಾಡುವುದು ಒಂದೆ ಲಕ್ಷ್ಮೀ ನಾರಾಯಣ ವಿವಾಹ ಮಾಡುವುದು ಒಂದೆ ಎಂದ ಅವರು ಇವತ್ತು ನಮ್ಮ ಸಂಸ್ಕೃತಿ ಸನಾತನ ಧರ್ಮವನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಬದುಕು ಸುಂದರವಾಗಿರುತ್ತದೆ. ಹಾಗಾಗಿ ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ನಮ್ಮ ಜೀವಾಳವನ್ನಾಗಿ ಮಾಡಬೇಕು. ಸನಾತನ ಧರ್ಮ ಸಂಸ್ಕೃತಿ ಭಾರತೀಯ ಜೀವನದಲ್ಲಿ ಅವಿಭಾಜ್ಯ ಅಂಗವಾಗಬೇಕು ಎಂಬ ಕಾರಣಕ್ಕೆ ಸನಾತನ ಸಮಾಗಮ ಎಂಬ ಹೆಸರಿನೊಂದಿಗೆ ಅರುಣ ಕುಮಾರ್ ಪುತ್ತಿಲ ಅವರು ಕಾರ್ಯಕ್ರಮ ಆಯೋಜಿಸಿದ್ದಾರೆ.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದರು.
ಸನಾತನ ಧರ್ಮ ಯಾವತ್ತು ಅಲಿಯುವುದಿಲ್ಲ:
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ ಸನಾತನ ಧರ್ಮದ ಬಗ್ಗೆ ಅನೇಕ ಮಂದಿ ಅನೇಕ ರೀತಿಯಲ್ಲಿ ಮಾತನಾಡುತ್ತಾರೆ. ಅವರ ವೈಯುಕ್ತಿಕ ಲಾಭಕ್ಕೂ ಇರಬಹುದು. ಆದರೆ ಸನಾತನ ಧರ್ಮ ಯಾವತ್ತು ಅಲಿಯುವುದಿಲ್ಲ. ಇದನ್ನು ಯಾರಿಗೂ ಏನು ಮಾಡಲು ಆಗುವುದಿಲ್ಲ. ಹಾಗೆಂದು ಸುಮ್ನೆ ಕೈಚೆಲ್ಲಿ ಕೂತುಕೊಳ್ಳಬಾರದು. ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದಂತೆ ಕ್ಷತ್ರೀಯರು ಧರ್ಮದ ರಕ್ಷಣೆ ಮಾಡಬೇಕು ಎಂದರು.
ಧರ್ಮ ರಹಿತ ವಿಚಾರದಲ್ಲಿ ದೂರವಿರುವ:
ಕನ್ಯಾನ ಶ್ರೀ ಕ್ಷೇತ್ರ ಕಣಿಯೂರು ಇಲ್ಲಿನ ಮಹಾಬಲ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಬಹಳ ಸಂತೋಷದ ವಿಚಾರ. ಇದನ್ನು ಸಂಘಟಿಸಿರುವ ಅರುಣ್ ಕುಮಾರ್ ಪುತ್ತಿಲ ಅವರು ಬಡವರ ಬಂಧು. ಪುತ್ತೂರಿಗೆ ಪುತ್ತಿಲ ಹೇಗೋ ಮಹಾಲಿಂಗೇಶ್ವರ ದೇವರು ಅರುಣ್ ಕುಮಾರ್ ಪುತ್ತಿಲರ ಕೈ ಬಿಡುವುದಿಲ್ಲ. ಇವತ್ತು ಧರ್ಮ ರಕ್ಷಣೆ ಮಾಡುವುದು ಬಹಳ ಅಗತ್ಯ. ಧರ್ಮ ರಹಿತ ವಿಚಾರದಲ್ಲಿ ದೂರ ಇರುವ ಎಂದು ಹೇಳಿದರು.
ಶನಿಪೂಜೆಯ ಎರಡು ಪಾಲು ಹೆಚ್ಚು ಜನರು ಬಂದಿರುವುದು ಸಂತೋಷ:
ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ ಇದೇ ಮೈದಾನದಲ್ಲಿ 12 ವರ್ಷದ ಹಿಂದೆ ನಾವು ಶನಿ ಪೂಜೆಯಲ್ಲಿ ಪಾಲ್ಗೊಂಡಿದ್ದೆವು. ಆಗ ಕೆಲ ಅಧಿಕಾರಿಗಳು ಮತ್ತು ವ್ಯಕ್ತಿಗಳ ನಡೆ ನಮಗೆ ಬೇಸರ ತಂದಿತ್ತು. ಆದರೆ ಇವತ್ತು ಅದಕ್ಕಿಂತ ಎರಡು ಪಾಲು ಹೆಚ್ಚು ಜನ ಈ ಸನ್ನಿಧಿಯಲ್ಲಿ ಸೇರಿರುವುದು ಸಂತೋಷ ತಂದಿದೆ. ಇದು ದೇವರ ಕರುಣೆ. ನಮ್ಮಲ್ಲಿ ಡಿವೈನ್ ಎನರ್ಜಿ ಇರಬೇಕು. ಯಾಕೆಂದರೆ ಇವತ್ತು ಸೀರಿಯಲ್ ಮೂಲಕ ಸಂಸಾರ ಬೇರೆ ಮಾಡುವ ಮಾಫಿಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಧಾರ್ಮಿಕ ಶಿಕ್ಷಣ ಬಹಳ ಅಗತ್ಯವಾಗಿದೆ ಎಂದರು.
ಹಿಂದು ಬಾಂಧವರು ಒಂದು ಗೂಡಿಸುವ:
ಸನಾತನ ಸಮಾಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಪುತ್ತಿಲ ಪರಿವಾರದಿಂದ ಮತ್ತು ಮಹಾಲಿಂಗೇಶ್ವರನ ಆಶೀರ್ವಾದದಿಂದ ಬಹಳ ಸುಸೂತ್ರವಾಗಿ ಕಾರ್ಯಕ್ರಮ ಆರಂಭಿಸಿದ್ದೇವೆ. ಡಿ.25ರಂದು ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಪುತ್ತೂರಿನ ಸಮಸ್ತ ಹಿಂದುಗಳು ಭಾಗವಹಿಸುವ ಮೂಲಕ ಹಿಂದು ಬಾಂಧವರನ್ನು ಒಂದಗೂಡಿಸೋಣ ಎಂದರು.
ಸವಾಲುಗಳಿಗೆ ಸಂದೇಶ ಕೊಡಲು, ಲೋಕಕಲ್ಯಾಣರ್ಥಕ್ಕಾಗಿ ಕಲ್ಯಾಣೋತ್ಸವ:
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದು ಸಮಾಜಕ್ಕೆ ಶಕ್ತಿಯನ್ನು ತುಂಬುವ ಪ್ರಯತ್ನ ಮತ್ತು ಧಾರ್ಮಿಕ ವ್ಯವಸ್ಥೆಯ ಜೊತೆಗೆ ಇಡಿ ಸಮಾಜಕ್ಕೆ ಶಕ್ತಿಯನ್ನು ಕೊಡಬೇಕು. ಧರ್ಮ ಸಂಸ್ಕೃತಿಯ ಮುಂದೆ ಇರುವ ಹಲವಾರು ಸವಾಲುಗಳಿಗೆ ಅತ್ಯಂತ ಸಂಘಟಿತವಾಗಿದ್ದೇವೆ ಎನ್ನುವ ಸಂದೇಶ ಕೊಡುವ ನಿಟ್ಟಿನಲ್ಲಿ ಮತ್ತು ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ತಿಮ್ಮಪ್ಪನ ಸಾನಿಧ್ಯಕ್ಕೆ ಭಕ್ತಿಯ ಕಾಣಿಕೆ ಸಮರ್ಪಿಸಿದರೆ ನಮ್ಮ ಬದುಕು ಪಾವನ ಆಗುತ್ತದೆ. ತಿರುಪತಿಯಲ್ಲಿ ಶ್ರೀನಿವಾಸನ ದರುಶನವನ್ನು ಅತ್ಯಂತ ಹತ್ತಿರದಿಂದ ಕಾಣಲು ಅಸಾಧ್ಯವಾದ ಸಂದರ್ಭದಲ್ಲಿ ಇಡಿ ಸಮಾಜಕ್ಕೆ ಶ್ರೀನಿವಾಸನ ಅನುಗ್ರಹ ಕರುಣಿಸಲು ಮತ್ತು ಲೋಕಕಲ್ಯಾಣಕ್ಕಾಗಿ ಇವತ್ತಿನ ಕಲ್ಯಾಣೋತ್ಸವ ಮಾಡುತ್ತಿದ್ದೇವೆ. ಡಿ.25ರ ಸಂಜೆಯ ತನಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತದೆ. ಭಕ್ತರು ಎಲ್ಲರು ಭಾಗವಹಿಸುವಂತೆ ವಿನಂತಿಸುತ್ತೇನೆ ಎಂದರು. ಶ್ರೀನಿವಾಸ ಕಲ್ಯಾಣೋತ್ಸ ಸಮಿತಿ ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಅನಿಲ್ ಗೌಡ ತೆಂಕಿಲ, ಸ್ವಾಗತ ಸಮಿತಿ ಕಾರ್ಯದರ್ಶಿ ರಾಜಾರಾಮ ಭಟ್, ಸಂಚಾಲಕ ರವಿಕುಮಾರ್ ಕೆದಂಬಾಡಿ ಮಠ, ಆರ್ಥಿಕ ಸಮಿತಿ ಕೋಶಾಧಿಕಾರಿ ಉದಯ ಕುಮಾರ್ ಸಂಪ್ಯ, ಸ್ವಾಗತ ಸಮಿತ ಕಾರ್ಯದರ್ಶಿ ಗಣೇಶ್ಚಂದ್ರ ಭಟ್ ಮಕರಂದ, ರಾಜು ಶೆಟ್ಟಿ ಚಿಕ್ಕಮುಡ್ನೂರು, ರೂಪೇಶ್, ಕೃಷ್ಣಪ್ರಸಾದ್ ಶೆಟ್ಟಿ, ಡಾ.ಗಣೇಶ್ಪ್ರಸಾದ್ ಮುದ್ರಾಜೆ, ವೆಂಕಟ್ರಮಣ ಕಡಬ, ಪ್ರವೀಣ್ ಶೆಟ್ಟಿ ತಿಂಗಳಾಡಿ ಅತಿಥಿಗಳನ್ನು ಗೌರವಿಸಿದರು. ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜಗುರು ಯೋಗಿ ಶ್ರದ್ಧಾನಾಥ ಜೀ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು ವೇದಿಕೆಯಲ್ಲಿ ಉಪಸ್ಥಿರಿದ್ದರು. ಗುರುಪ್ರಿಯ ಪ್ರಾರ್ಥಿಸಿದರು. ಸನಾತನ ಸಮಾಗಮದ ಆರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸನಾತನ ಸಮಾಗಮದ ಬಳಿಕ ಶ್ರೀನಿವಾಸ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ರಾತ್ರಿ ತುಳುವೆರ ತುಡರ್ ಸುರತ್ಕಲ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಯು.ಪೂವಪ್ಪ, ಶ್ರೀಕೃಷ್ಣ ಉಪಾಧ್ಯಾಯ ಸಹಿತ ಸಾವಿರಾರು ಮಂದಿ ಉಪಸ್ಥಿತರಿದ್ದರು. ಸಮಿತಿ ಉಪಾಧ್ಯಕ್ಷೆ ಹರಿಣಿಪುತ್ತೂರಾಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಹಿಜಾಬ್ ರಾಜಕಾರಣಕ್ಕೆ ಪ್ರತಿಯಾಗಿ ಶಾಲಾ, ಕಾಲೇಜುಗಳಿಗೆ ಕೇಸರಿ ಶಲ್ಯ
ನಮ್ಮ ಕೊನೆಯ ಉಸಿರು ಇರುವ ತನಕ ಧರ್ಮವನ್ನು ಉಳಿಸುವ ಸಂಕಲ್ಪದ ಕಾಲಗಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಒಂದು ಕಡೆದ ಧರ್ಮರಕ್ಷಣೆ ಮಾಡುವ ಕಾರ್ಯಕರ್ತರನ್ನು ಗಡಿಪಾರು ಕೇಸು ದಾಖಲು ಮಾಡುವ ಕೆಲಸ ಸರಕಾರ ಮಾಡುತ್ತಿದೆ. ಇನ್ನೊಂದು ಕಡೆ ಧರ್ಮದ ಮುಂದಿರುವ ಯಾವುದೇ ಸವಾಲುಗಳಿದ್ದರೂ ಅದನ್ನು ಸ್ವೀಕಾರ ಮಾಡಿ ಮತ್ತೆ ನಮ್ಮ ಧರ್ಮತನವನ್ನು ಎತ್ತರಕ್ಕೆ ಏರಿಸುವ ಸಂಕಲ್ಪದ ಕಾಲಗಟ್ಟದಲ್ಲಿದ್ದೇವೆ. ಇವೆರಡರ ಮಧ್ಯೆ ಸರಕಾರ ಹಿಜಾಬಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಹಿಂದು ಹೆಣ್ಣು ಮಕ್ಕಳು ಮುಂದಿನ ದಿನ ಕೇಸರಿ ಶಲ್ಯವನ್ನು ಹಾಕಿ ಶಾಲೆಗೆ ಮತ್ತು ಕಾಲೇಜಿಗೆ ಹೋಗಲು ಸಿದ್ದರಿದ್ದಾರೆ. ಹಿಂದು ಸಮಾಜದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದರೆ ಸರಕಾರವನ್ನು ಉರುಳಿಸಲು ಹಿಂದು ಸಮಾಜ ಸಿದ್ದವಾಗಿದೆ.
ಅರುಣ್ ಕುಮಾರ್ ಪುತ್ತಿಲ