ಕೆಮ್ಮಿಂಜೆ:ದಲಿತ ಕಾಲೋನಿ ರಸ್ತೆ ಜಾಗ ಸ್ಥಳೀಯ ಮಹಿಳೆಗೆ ಮಂಜೂರು-ಬೇಲಿಹಾಕಿದ ಮಹಿಳೆ -ಬೇಲಿ ತೆರವಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಂಬೇಡ್ಕರ್ ರಕ್ಷಣಾ ವೇದಿಕೆ

0

ಪುತ್ತೂರು; ಕೆಮ್ಮಿಂಜೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ದಲಿತ ಕುಟುಂಬಗಳ ಮನೆಗಳನ್ನು ಸಂಪರ್ಕಿಸುವ ರಸ್ತೆಯೊಂದನ್ನು ಅಧಿಕಾರಿ ವರ್ಗದವರು ಅಕ್ರಮ ಸಕ್ರಮದಡಿ ಸ್ಥಳಿಯ ಮಹಿಳೆಯೊಬ್ಬರಿಗೆ ಮಂಜೂರು ಮಾಡಿದ್ದಾರೆ. ಅವರು ಈಗ ರಸ್ತೆಗೆ ಬೇಲಿಹಾಕಿ ರಸ್ತೆ ಬಂದ್ ಮಾಡಿದ್ದು ಅಲ್ಲಿರುವ ದಲಿತ ಕುಟುಂಬಗಳಿಗೆ ರಸ್ತೆ ಇಲ್ಲದಂತಾಗಿದೆ. ಇದರ ಬಗ್ಗೆ ಡಿ.26ರಂದು ಪುತ್ತೂರು ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರನ್ನು ಭೇಟಿ ಮಾಡಲಿದ್ದೇವೆ. ಅವರು ಸ್ಪಂಧಿಸಿದ್ದರೆ ಆ ಕ್ಷಣದಿಂದಲೇ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ‘ಉಪವಾಸ ಸತ್ಯಾಗ್ರಹ’ ನಡೆಸುವುದಾಗಿ ಸಂತ್ರಸ್ತರಾಗಿರುವ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಪರಮೇಶ್ವರ್ ತಿಳಿಸಿದ್ದಾರೆ.


ಡಿ.25ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಮ್ಮಿಂಜೆಯ ಕುದ್ಕುಳಿ ಎಂಬಲ್ಲಿನ 4 ದಲಿತ ಕುಟುಂಬಗಳಿಗೆ ಇದ್ದ ಸಂಪರ್ಕ ರಸ್ತೆಯನ್ನು 2022ರ ಅಕ್ಟೋಬರ್ ತಿಂಗಳಲ್ಲಿ ಸ್ಥಳೀಯ ಮಹಿಳೆಯರಿಬ್ಬರು ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ನಮಗೆ ಅರಿವಿಲ್ಲದಂತೆ ಸರ್ವೆಯರ್ ಮೂಲಕ ಅಳತೆ ಮಾಡಿಸಿಕೊಂಡಿದ್ದಾರೆ. 4 ತಿಂಗಳ ಬಳಿಕ ಸರ್ವೆ ಇಲಾಖೆಯಿಂದ ನೊಟೀಸ್ ಬಂದಿದ್ದು ಸದರಿ ರಸ್ತೆ ನಿಮಗೆ ಸೇರಿದಲ್ಲ ಎಂದು ನೊಟೀಸ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನಾವು ಲೋಕಾಯುಕ್ತರಿಗೆ ದೂರು ನೀಡಿರುವುದಲ್ಲದೆ ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಾದೀಶರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನ್ಯಾಯಾಧೀಶರು ತಹಶೀಲ್ದಾರ್‌ರವರಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಉಡಾಪೆ ಉತ್ತರ ನೀಡಿದ್ದಾರೆ. ಸುಳ್ಳು ಮಾಹಿತಿ ನೀಡಿರುವ ತಹಶೀಲ್ದಾರ್ ನಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.


ಶಕುಂತಳಾ ಟಿ. ಶೆಟ್ಟಿಯವರು ಶಾಸಕರಾಗಿದ್ದಾಗ ಈ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅವರು ಈ ಅರ್ಜಿಯನ್ನು ಮಾನ್ಯ ಮಾಡಿಲ್ಲ. ನಂತರ ಮಾಜಿ ಶಾಸಕ ಸಂಜೀವ ಮಠಂದೂರು ಅವಧಿಯಲ್ಲೂ ಮಂಜೂರಾಗಿಲ್ಲ. ಆದರೆ ಇದೀಗ ತಹಶೀಲ್ದಾರ್ ಈ ಜಾಗವನ್ನು ಮಂಜೂರು ಮಾಡಿದ್ದು, ಯಾವ ಆಧಾರದಲ್ಲಿ ರಸ್ತೆಯ ಸ್ಥಳವನ್ನು ಮಂಜೂರು ಮಾಡಿದ್ದಾರೆ ಎಂದು ಪರಮೇಶ್ವರರವರು ಪ್ರಶ್ನಿಸಿದರು.


ಯಥಾಸ್ಥಿತಿ ಕಾಪಾಡಲು ಮುಖ್ಯಮಂತ್ರಿ ಆದೇಶ:
ನಮಗಾಗಿರುವ ಅನ್ಯಾಯ ಬಗ್ಗೆ ಕಳೆದ ಪ.ಜಾತಿ, ಪಂಗಡದ ಕುಂದು ಕೊರತೆಗಳ ನಿವಾರಣಾ ಸಭೆಯಲ್ಲಿ ಮಾತನಾಡಿದ್ದೇವೆ. ಇದರ ಬಗ್ಗೆ ತಹಶೀಲ್ದಾರ್‌ರವರು ಈ ವಿಚಾರವನ್ನು ಇಲ್ಲಿ ಮಾತನಾಡವುದು ಸರಿಯಲ್ಲ. ತಮ್ಮ ಕಚೇರಿಗೆ ಬರುವಂತೆ ತಿಳಿಸಿ ಅಲ್ಲಿ ಮಾತನಾಡುವಂತೆ ಸೂಚಿಸಿದ್ದರು. ಕಚೇರಿಗೆ ಹೋದಾಗ ತಮ್ಮ ನಿವಾಸದ ಬಳಿ ಬರುವಂತೆ ತಿಳಿಸಿದ್ದರು. ಅಲ್ಲಿಯೂ ನಾವು ಹೋಗಿದ್ದು ನಮ್ಮನ್ನು ಸಾಕಷ್ಟು ಅಲೆದಾಡಿಸಿದ ಬಳಿಕ ಸಹಾಯಕ ಆಯುಕ್ತರ ಗಮನಕ್ಕೆ ತರುವಂತೆ ತಹಶೀಲ್ದಾರ್ ಸೂಚಿಸಿದ್ದರು. ನಾವು ಸಹಾಯಕ ಆಯುಕ್ತರ ಬಳಿ ಹೋದಾಗ ಅವರು ಇದು ನನಗೆ ಸಂಬಂಧಿಸಿದ ವಿಷಯವಲ್ಲ. ಇದು ತಹಶೀಲ್ದಾರ್ ಪರಿಹರಿಸಬೇಕಾಗಿರುವುದು ಎಂದು ತಿಳಿಸಿದ್ದು ನಮಗೆ ಯಾರಿಂದಲೂ ಸ್ಪಂಧನೆ ದೊರೆತಿಲ್ಲ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಅವರಿಗೆ ದೂರು ನೀಡಿದ್ದು, ಈ ರಸ್ತೆಯ ಯಥಾಸ್ಥಿತಿ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಯವರೂ ರಸ್ತೆಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ಪುತ್ತೂರಿನ ತಹಶೀಲ್ದಾರ್ ಮಾತ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು. ಜಿಲ್ಲಾಧಿಕಾರಿ, ಸರ್ವೆಯರ್ ಹಾಗೂ ತಹಶೀಲ್ದಾರ್ ರಸ್ತೆ ಊರ್ಜಿತಗೊಳಿಸುವಂತೆ ಅದೇಶಿಸಿರುವುದಾಗಿ ಪರಮೇಶ್ವರ್ ತಿಳಿಸಿದರು.


ಇದೀಗ ಏಕಾಏಕಿಯಾಗಿ ಅಕ್ರಮ ಸಕ್ರಮದಡಿಯಲ್ಲಿ ಮಂಜೂರು ಮಾಡಲಾದ ರಸ್ತೆಯನ್ನು ಅವರು ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಇದರಿಂದ ನಮ್ಮ ಮಕ್ಕಳು ಶಾಲೆಗೆ ತೆರಳಲು, ಅನಾರೋಗ್ಯವಾದಾಗ ವಾಹನ ತರಲು ಸಮಸ್ಯೆಯಾಗುತ್ತಿದೆ. ಈ ರಸ್ತೆಯನ್ನು ಬೇಲಿ ತೆರವು ಮಾಡಿ ನಮ್ಮ ಸಂಚಾರಕ್ಕೆ ಮುಕ್ತಗೊಳಿಸಿ ಕೊಡಬೇಕು ಎಂದು ಅವರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.


ಕಳೆದ ಶನಿವಾರ ರಸ್ತೆಗೆ ಬೇಲಿ ಹಾಕಿರುವ ಜಯಲತಾ ರೈ ಅವರು ಇದಕ್ಕಾಗಿ ಬೇರೆ ಊರಿನ ದಲಿತ ಯುವಕರನ್ನು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ನಾವು ತಡೆದಾಗ ಮಾತಿನ ಚಕಮಕಿ ನಡೆದಿದೆ. ಹಾಗಿದ್ದರೂ ಪೋಲಿಸರಾಗಲೀ, ತಾಲೂಕು ಆಡಳಿತದ ಅಧಿಕಾರಿಗಳಾಗಲೀ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ ಎಂದು ಅವರು ದೂರಿದರು. ದಲಿತರು ಓಡಾಡುವ ರಸ್ತೆಯನ್ನೇ ಅಕ್ರಮ ಸಕ್ರಮದಡಿಯಲ್ಲಿ ಮುಂಜೂರು ಮಾಡಿರುವ ಪ್ರಕರಣದಲ್ಲಿ ತಪ್ಪು ಮಾಡಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು. ರಸ್ತೆಗೆ ಹಾಕಿರುವ ಬೇಲಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತವಾಗಿಸಬೇಕು. ನ್ಯಾಯದ ವಿರುದ್ಧ ನಿಲ್ಲುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಸಂತ್ರಸ್ತ ಕುಟುಂಬಗಳ ಕೃಷ್ಣಪ್ಪ, ಶೀನಪ್ಪ, ರಾಮ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here