ನಾಡಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ, ದಿವ್ಯ ಬಲಿಪೂಜೆ

0

ಮತ್ತೊಬ್ಬರ ಬಾಳಿನಲ್ಲಿ ಬೆಳಕು ಚೆಲ್ಲುವವನೇ ನಿಜವಾದ ಭಕ್ತ-ವಂ|ನಿಲೇಶ್ ಕ್ರಾಸ್ತಾ

*ಹಬ್ಬದ ಪ್ರಯುಕ್ತ ಕ್ರೈಸ್ತ ಬಾಂಧವರು ಸಿಹಿಯ ಪ್ರತೀಕವಾದ ಕೇಕ್ ಹಂಚಿ ಸಂಭ್ರಮದೊಂದಿಗೆ, ಒಬ್ಬರನ್ನೊಬ್ಬರು ಹಸ್ತಲಾಘವ, ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಂಡರು.
*ದಿವ್ಯ ಬಲಿಪೂಜೆ ಆರಂಭಕ್ಕಿಂತ ಮುನ್ನ ಆಯಾ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಭಕ್ತಿಗೀತೆ (ಕ್ಯಾರಲ್ಸ್) ಹಾಡುವ ಸಂಪ್ರದಾಯ ಮೊದಲ್ಗೊಂಡಿತು. ದಿವ್ಯ ಬಲಿಪೂಜೆ ಬಳಿಕ ಕ್ರೈಸ್ತಬಾಂಧವರು ಚರ್ಚ್‌ನಲ್ಲಿ ನಿರ್ಮಿಸಿರುವಂತಹ ಯೇಸುಕ್ರಿಸ್ತರ ಜನನ ಸಾರುವ ಗೋದಲಿಯನ್ನು ವೀಕ್ಷಿಸಿ ಸಂಭ್ರಮಪಟ್ಟರು.
*ಕ್ರಿಸ್ಮಸ್ ಹಬ್ಬದ ಬಲಿಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸುಕ್ರಿಸ್ತರ ಜನನವನ್ನು ಸ್ವಾಗತಿಸಿದರು.
*ಕ್ರಿಸ್ಮಸ್ ಹಬ್ಬದಂದು ಸಾಂತಾಕ್ಲಾಸ್ ಎಂಬ ಹೆಸರಿನ ಮೂಲಕ ಅವರ ವೇಷವನ್ನು ತೊಟ್ಟು ಮನೆ ಮನೆಗೆ ಹೋಗಿ ಉಡುಗೊರೆಗಳನ್ನು ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಲಾಗುತ್ತದೆ.
*ಚರ್ಚ್‌ಗಳು ವರ್ಣಮಯ ದೀಪಗಳಿಂದ ಅಲಂಕೃತಗೊಂಡರೆ, ಅಲ್ಲಲ್ಲಿ ನೇತಾಡಿಸಿದ್ದ ವಿವಿಧ ಆಕಾರದ ಕ್ರಿಸ್ಮಸ್ ನಕ್ಷತ್ರಗಳು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
*ಆಯಾ ಚರ್ಚ್‌ಗಳ ಆವರಣದಲ್ಲಿ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪುತ್ತೂರು: ನಾವು ಒಬ್ಬಂಟಿಗರಲ್ಲ, ನಮ್ಮೊಡನೆ ಯೇಸುಕ್ರಿಸ್ತರು ಇದ್ದಾರೆ ಮಾತ್ರವಲ್ಲ ಅವರು ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಮನುಷ್ಯನ ಪಾಪ ಪರಿಹಾರಕ್ಕೋಸ್ಕರ ಯೇಸುಕ್ರಿಸ್ತರು ಮನುಷ್ಯನ ಜನ್ಮ ತಾಳಿ ಬಂದವರಾಗಿದ್ದು ಅವರ ಮಾತಿನಂತೆ ನಾವು ಮತ್ತೊಬ್ಬರ ಬಾಳಿನಲ್ಲಿ ಬೆಳಕನ್ನು ಯಾವಾಗ ಚೆಲ್ಲುತ್ತೇವೆಯೋ ಅವನೇ ನಿಜವಾದ ಭಕ್ತ ಎಂದು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಧರ್ಮಗುರು ವಂ|ನೀಲೇಶ್ ಕ್ರಾಸ್ತಾರವರು ಹೇಳಿದರು.

ಕ್ರಿಸ್ಮಸ್: ಮರೀಲು ಚರ್ಚ್

ನಾಡಿನೆಲ್ಲೆಡೆ ಕ್ರೈಸ್ತ ಬಾಂಧವರು ಡಿ.25ರಂದು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಆಯಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ದಿವ್ಯ ಬಲಿಪೂಜೆಗಳು ನಡೆಯಿತು. ಅದರಂತೆ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಅವರು ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಬೈಬಲಿನ ಮೇಲೆ ಸಂದೇಶವನ್ನು ನುಡಿದರು. ಜೀವನದಲ್ಲಿ ಯಾವುದೇ ಕಷ್ಟದ ಸಂದರ್ಭ ಬಂದರೂ ವಿಚಲಿತರಾಗದೆ ಅದನ್ನು ಧೈರ್ಯದಿಂದ ಎದುರಿಸುವ ಭರವಸೆಯ ಜೀವನ ನಮ್ಮದಾಗಬೇಕು. ಕಷ್ಟದಲ್ಲಿರುವ ವ್ಯಕ್ತಿಗೆ ನಮ್ಮ ಒಳ್ಳೆಯ ಮಾತುಗಳು ಅವನ ಮುಂದಿನ ಭವಿಷ್ಯದ ಜೀವನಕ್ಕೆ ನಾಂದಿ ಹಾಡಬಲ್ಲುದು. ನಮಗೆ ಏನು ಲಾಭವಿದೆ ಎಂಬ ಚಿಂತನೆ ಮಾಡದೆ ಪರರಿಗೋಸ್ಕರ ನಮ್ಮಿಂದ ಏನು ಲಾಭವಿದೆ ಎಂಬುದನ್ನು ನಾವು ತಿಳಿದಾಗ ಕ್ರಿಸ್ಮಸ್ ಹಬ್ಬಕ್ಕೆ ಅರ್ಥ ಬರುತ್ತದೆ ಎಂದರು. ದಿಯಾಕೋನ್ ವಂ|ಸ್ಟ್ಯಾನೀಸ್ ಲೋ-ಸ್‌ರವರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕ್ರಿಸ್ಮಸ್: ಮರೀಲು ಚರ್ಚ್

ಮಾಯಿದೆ ದೇವುಸ್ ಚರ್ಚ್:
ಮಾನವನ ಪಾಪ ಪರಿಹಾರಕ್ಕೋಸ್ಕರ ಯೇಸುಕ್ರಿಸ್ತರು ಮಾನವನ ರೂಪದಲ್ಲಿ ಗೋದಲಿಯಲ್ಲಿ ಜನಿಸಿದ್ದಾರೆ. ಯೇಸುಕ್ರಿಸ್ತರು ನಮ್ಮ ಹೃದಯದಲ್ಲಿ ನೆಲೆಗೊಂಡಾಗ ನಮಗೆ ಆಶೀರ್ವಾದ, ಸಮಾಧಾನ ಲಭಿಸುತ್ತದೆ. ಜೊತೆಗೆ ಕ್ರಿಸ್ಮಸ್ ಹಬ್ಬವು ಲೋಕಕ್ಕೆ ಶಾಂತಿ, ಪ್ರೀತಿ, ಸೌಹಾರ್ದತೆ ಮತ್ತು ಮಾನವೀಯತೆಯನ್ನು ಸಾರುವ ಸಂಕೇತವೆನಿಸಿದೆ ಎಂದು ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್ ಹೇಳಿದರು. ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಧರ್ಮಗುರುಗಳಾದ ವಂ|ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ರೂಪೇಶ್ ತಾವ್ರೋರವರು ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕ್ರಿಸ್ಮಸ್-ಮಾಯಿದೆ ದೇವುಸ್ ಚರ್ಚ್

ಬನ್ನೂರು ಚರ್ಚ್:
ಮನುಷ್ಯನಿಗೆ ನಿಸ್ವಾರ್ಥಿ ಮಾನವನಾಗಿ ಜೀವಿಸಲು ಯೇಸುಕ್ರಿಸ್ತರು ಧರೆಗೆ ಬಂದಿರುವುದಾಗಿದೆ. ಯೇಸುಕ್ರಿಸ್ತರು ಗೋದಲಿಯಲ್ಲಿ ಹುಟ್ಟಿ ಬಡತನ ಏನೆಂಬುದನ್ನು ತೋರಿಸಿಕೊಟ್ಟವರು. ಮನುಷ್ಯನ ಮಧ್ಯೆ ಶಾಂತಿ-ಸಮಾಧಾನದ ಬೆಸುಗೆಯನ್ನು ಹೊಂದಿಸಲು ಯೇಸುಕ್ರಿಸ್ತರು ಬಂದಿರುತ್ತಾರೆ. ನಾವು ನಮ್ಮ ಸ್ವಾರ್ಥವನ್ನು ಬಿಡಬೇಕು, ನಾವೇ ಶ್ರೇಷ್ಟರು ಎಂಬ ಅಹಂಕಾರವನ್ನು ತೊಡೆದು ಹಾಕಬೇಕು. ನಾವು ಯೋಚನೆ ಮಾಡುವ ಪ್ರತಿಯೊಂದು ಚಿಂತನೆಯು, ನಾವು ಆಡುವ ಪ್ರತಿಯೊಂದು ಶಬ್ದವು, ನಾವು ತೋರಿಸುವ ನಡವಳಿಕೆಯು ಉತ್ತಮವಾಗಿದ್ದಲ್ಲಿ ದೇವರು ಖಂಡಿತಾ ಆಶೀರ್ವದಿಸುತ್ತಾನೆ ಎಂದು ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಸ್ಥಳೀಯ ಧರ್ಮಗುರು ವಂ|ಜೇಸನ್ ಪಾಸ್‌ರವರು ಹೇಳಿದರು. ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ವಂ|ಡೊನಾಲ್ಡ್ ಡಿ’ಸೋಜ ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕ್ರಿಸ್ಮಸ್: ಬನ್ನೂರು ಚರ್ಚ್
ಕ್ರಿಸ್ಮಸ್: ಬನ್ನೂರು ಚರ್ಚ್

ಉಪ್ಪಿನಂಗಡಿ ಚರ್ಚ್:
ಅಸತ್ಯ, ಅಜ್ಞಾನ ಮತ್ತು ಮರಣದಲ್ಲಿ ಮುಳುಗಿ ದಾರಿ ಕಾಣದೆ ಕತ್ತಲಲ್ಲಿ ವಾಸಿಸುತ್ತಿದ್ದ ಜನರಿಗೆ ಸತ್ಯ, ಬೆಳಕು, ನಿತ್ಯ ಜೀವವನ್ನು ನೀಡಲೆಂದು ಮನುಷ್ಯ ರೂಪದಲ್ಲಿ ಬಂದವರೇ ಯೇಸುಕ್ರಿಸ್ತರು. ಯೇಸುಕ್ತಿಸ್ತರು ಭೂಲೋಕಕ್ಕೆ ಬಂದದ್ದು ಭೂಲೋಕದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು. ನಾವೆಲ್ಲರೂ ಶಾಂತಿ, ಸೌಹಾರ್ದತೆಯಿಂದ ಸಮಾಧಾನಚಿತ್ತರಾಗಿ ನಮ್ಮಲ್ಲಿನ ಮಾನವೀಯತೆಯು ಹೃದಯ ಹಾಗೂ ಮನಸ್ಸಿನಲ್ಲಿ ನೆಲೆಗೊಳ್ಳುವಂತೆ ಆಗಬೇಕು ಎನ್ನುವುದೇ ಕ್ರಿಸ್ಮಸ್ ಹಬ್ಬದ ಸಾರವಾಗಿದೆ ಎಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಮೂಲತಃ ಬನ್ನೂರು ಚರ್ಚ್ ನಿವಾಸಿ, ಪ್ರಸ್ತುತ ಶಿವಮೊಗ್ಗ ಧರ್ಮಪ್ರಾಂತ್ಯದಲ್ಲಿ ಸೇವೆ ನೀಡುತ್ತಿರುವ ವಂ|ರಿಚರ್ಡ್ ಮಸ್ಕರೇನ್ಹಸ್‌ರವರು ಹೇಳಿದರು. ಚರ್ಚ್ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋರವರು ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ಕ್ರಿಸ್ಮಸ್: ಉಪ್ಪಿನಂಗಡಿ ಚರ್ಚ್
ಕ್ರಿಸ್ಮಸ್: ಉಪ್ಪಿನಂಗಡಿ ಚರ್ಚ್

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಕಾರ್ಯದರ್ಶಿ ಎವ್ಲಿನ್ ಡಿ’ಸೋಜ, ಬನ್ನೂರು ಚರ್ಚ್ ಉಪಾಧ್ಯಕ್ಷ ತೋಮಸ್ ಫರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, ಮರೀಲು ಚರ್ಚ್ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಎಡ್ವಿನ್ ಡಿ’ಸೋಜ, ಉಪ್ಪಿನಂಗಡಿ ಚರ್ಚ್ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ ಬಿಳಿಯೂರು, ಕಾರ್ಯದರ್ಶಿ ವಿಲ್ರೆಡ್ ಡಿ’ಸೋಜ ಸಹಿತ ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು, ವೇದಿ ಸೇವಕರು, ಸ್ಯಾಕ್ರಿಸ್ಟಿಯನ್, ಧರ್ಮಭಗಿನಿಯರು, ಗಾಯನ ಮಂಡಳಿ, ವಿವಿಧ ಸಂಘ-ಸಂಸ್ಥೆಯ ಪದಾಽಕಾರಿಗಳು ಹಾಗೂ ಸದಸ್ಯರು ಕ್ರೈಸ್ತ ಭಕ್ತಾಧಿಗಳೊಂದಿಗೆ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

LEAVE A REPLY

Please enter your comment!
Please enter your name here