ಬಾಂಧವ್ಯವನ್ನು ಬೆಸೆಯುವ ಕಾರ್ಯ ಕ್ರೀಡಾಕೂಟದಿಂದ ಸಾಧ್ಯ- ಭಾಗೀರಥಿ ಮುರುಳ್ಯ
ಕಾಣಿಯೂರು: ಯುವಜನರಿಗೆ ಪ್ರೇರಣೆಯಾಗಿ ಸಹಕಾರ ನೀಡುವ ಕಾರ್ಯಕ್ರಮದ ಜೊತೆಗೆ ಯುವ ಜನತೆಯನ್ನು ಒಗ್ಗೂಡಿಸಿ ಆತ್ಮೀಯತೆಯಿಂದ ಬಾಂಧವ್ಯವನ್ನು ಬೆಸೆಯುವ ಕಾರ್ಯ ಇಂತಹ ಕ್ರೀಡಾಕೂಟದಿಂದ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಇಂತಹ ಕ್ರೀಡಾಕೂಟ ಸಹಕಾರಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏಲಡ್ಕ ನೇತಾಜಿ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ಪ್ರೀಮಿಯರ್ ಲೀಗ್ ಕೆಪಿಎಲ್ 2023 ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ, ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ಸೇವಾ ಮನೋಭಾವದಿಂದ ಮುನ್ನಡೆದಾಗ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.
ಸ್ವಾತ್ರಂತ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಲು ಕ್ರೀಡೆ ಅತ್ಯುತ್ತಮ ಮಾರ್ಗ. ಪರಸ್ಪರ ಅನ್ಯೋನತೆಯಿಂದ ಸಮಾಜದ ಎಲ್ಲಾ ವರ್ಗದ ಜನರೂ ಭಾಗವಹಿಸಿಸುವ ಕ್ರೀಡೆ ಭಾವೈಕ್ಯಕ್ಕೆ ಪೂರಕ ಎಂದರು. ಪ್ರಜ್ವಲ್ ರೈ ಪಾತಾಜೆ, ಸಾಪ್ಟ್‌ವೇರ್ ಉದ್ಯೋಗಿ ಶಿವರಂಜನ್ ಚೌಟ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಚಾರ್ವಾಕ ಕಪಿಲ ಚಾಂಪಿಯನ್ಸ್‌ನ ಮಾಲಕ ನಂದನ್ ಕಜೆ, ಸ್ವಾತ್ರಂತ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ಥಾಪನಾ ಸಮಿತಿ ಸದಸ್ಯ ಸುನಿಲ್ ಕೆರ್‌ನಡ್ಕ, ತೀರ್ಪುಗಾರರಾದ ಭಾನುಪ್ರಕಾಶ್ ಪುತ್ತೂರು, ರವಿ ಆಚಾರ್ಯ ಕೆಮ್ಮಾಯಿ, ವಿನೋದ್ ಪುತ್ತೂರು, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ರಾಮಣ್ಣ ಗೌಡ ಮುಗರಂಜ, ಸ್ಥಾಪಕಾಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ರಕ್ಷಿತ್ ಮುಗರಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕಿರಣ್ ಮಲೆಕೆರ್ಚಿ ಸ್ವಾಗತಿಸಿ, ರಮೇಶ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಮೇಶ್ ಬೆಳ್ಳಾರೆ, ಅಜೀಜ್ ಮುಂಡೂರು ವೀಕ್ಷಕ ವಿವರಣೆ ನೀಡಿದರು.
ವಿಜೇತರ ವಿವರ: ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಪ್ರೀಮಿಯರ್ ಲೀಗ್ ಕೆಪಿಎಲ್ 2023ರಲ್ಲಿ ನಕ್ಷತ್ರ ಫ್ರೆಂಡ್ಸ್ ಪುಣ್ಚತ್ತಾರು ಪ್ರಥಮ ಸ್ಥಾನ ಪಡೆದುಕೊಂಡರೆ, ಪವರ್ ಪ್ಲಸ್ ಏಲಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು.
ಸನ್ಮಾನ: ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕ್ರೀಡಾಪಟು ಅಹಿಜಿತ್ ಕಟ್ಟತ್ತಾರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಉತ್ತಮ್ ಗುಂಡಿಗದ್ದೆ, ರಾಷ್ಟ್ರ ಮಟ್ಟದ ಹಿರಿಯ ಕ್ರೀಡಾಪಟು ಸುಶೀಲ ಪೆರ್ಲೋಡಿ ಅವರನ್ನು ಸನ್ಮಾನಿಸಲಾಯಿತು. ಮತ್ತು ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕಾರ್ಯಾಚರಿಸುತ್ತಿರುವ ಜೀವರಕ್ಷಕ ಆಂಬ್ಯೂಲೆನ್ಸ್ ಇದರ ಚಾಲಕರನ್ನು ಗೌರವಿಸಲಾಯಿತು.