ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂಡಳಿಯ 15ನೇ ವಾರ್ಷಿಕೋತ್ಸವ ಶ್ರೀ ಸತ್ಯನಾರಾಯಣ ಪೂಜೆ, ಕುಣಿತ ಭಜನೆ, ಧಾರ್ಮಿಕ ಸಭೆಯೊಂದಿಗೆ ಡಿ.24ರಂದು ನಡೆಯಿತು. ಬೆಳಿಗ್ಗೆ ಶ್ರೀ ಗಣಪತಿ ಹೋಮ ನಡೆಯಿತು. ಸಂಜೆ ಶ್ರೀ ಸತ್ಯನಾರಾಯಣ ದೇವರ ಪೂಜೆ, ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂಡಳಿ ಮತ್ತು ಶ್ರೀ ರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಧಾರ್ಮಿಕ ಸಭೆ:
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣರಾಜ್ ಭಟ್ ಕೆದಿಲ ಅವರು, ನಮ್ಮ ಸಂಸ್ಕೃತಿ ಜಗತ್ತಿನಲ್ಲೇ ಶ್ರೀಮಂತ ಸಂಸ್ಕೃತಿ, ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೂರವಿರಬೇಕು, ನಮ್ಮ ಸಂಸ್ಕೃತಿಯ ಅಳಿವು ನಮ್ಮ ದೇಶದ ಉಳಿವಿನ ಮೇಲೆ ಪ್ರಭಾವ ಬೀರುತ್ತದೆ ಎಂದರು. ಭಜನಾ ಮಂದಿರಗಳಲ್ಲಿ ಭಜನಾ ಕಾರ್ಯಕ್ರಮಗಳಲ್ಲಿ ನಾವು ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಬದುಕಿನ ಮಹತ್ವವನ್ನು ತಿಳಿಸಿಸುವ ಭಜನೆಯ ಅಗತ್ಯತೆಯನ್ನು ತಿಳಿದುಕೊಳ್ಳಬೇಕು ಎಂದು ಗಣರಾಜ್ ಭಟ್ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹಿಂದೂ ಸಂಘಟನೆ ಮುಖಂಡ ಕಿಶೋರ್ ಕುಮಾರ್ ಪುತ್ತೂರು ಅವರು ಮಾತನಾಡಿ, ಹಳ್ಳಿಹಳ್ಳಿಗಳಲ್ಲಿ ಭಜನಾ ಮಂದಿರಗಳನ್ನು ಸದೃಢಗೊಳಿಸುವ ಕಾರ್ಯ ನಿರಂತರ ನಡೆಯಬೇಕು. ಆ ಮೂಲಕ ನಾವೆಲ್ಲಾ ಒಗ್ಗಟ್ಟಾಗಿ ಹಿರಿಯರು ಕಂಡ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಬೇಕು ಎಂದರು. ಭಜನಾ ಮಂಡಳಿಯ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಯೋಧ್ಯಾನಗರ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಸಬಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ಪುರಂದರ ಪೂಜಾರಿ ತುಂಬೆತಡ್ಕ, ಸಬಳೂರು ಶಾಲಾ ಎಸ್.ಡಿ.ಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಭಜನಾ ತರಬೇತುದಾರ, ಕಡಬ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸದಾನಂದ ಆಚಾರ್ಯ ಕಾಣಿಯೂರು ಅವರನ್ನು ಸನ್ಮಾನಿಸಲಾಯಿತು. ಸಹಕಾರ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಗಳಿಸಿದ ಚೈತ್ರಾ ಓ.ಕೆ, ಹೈಸ್ಕೂಲ್ ವಿಭಾಗದ ರಾಜ್ಯಮಟ್ಟದ ಕಬಡ್ಡಿ ಆಟಗಾರ ದಿಲೀಪ್ ಕೊಲ್ಯ, ಭೋಜನ ವ್ಯವಸ್ಥೆ ಮಾಡಿರುವ ಬೆಳಿಯಪ್ಪ ಗೌಡ ತಿಮರಗುಡ್ಡೆ, ಪಾಯಸದ ವ್ಯವಸ್ಥೆ ಮಾಡಿರುವ ಸೀತಾರಾಮ ಪೂಜಾರಿ ಸೀಗೆತ್ತಡಿ, ಭಜನಾ ಮಂದಿರಕ್ಕೆ ಮೈಕ್ ಒದಗಿಸಿಕೊಟ್ಟ ರಾಜೀವ ಗೌಡ ಪಟ್ಟೆದಮೂಲೆ, ಪೈಂಟ್ ಒದಗಿಸಿದ ಪ್ರಶಾಂತ್ ಗುರುಸ್ವಾಮಿ, ಮಂದಿರಕ್ಕೆ ಸೀಲಿಂಗ್ ವ್ಯವಸ್ಥೆ ಮಾಡಿರುವ ಸುಂದರ ನಾಯ್ಕ ಚೆಕ್ಕಿತಡ್ಕ ಅವರನ್ನು ಗೌರವಿಸಲಾಯಿತು.
ಭುವಿ ಒಕೆ ಪ್ರಾರ್ಥಿಸಿದರು. ಭಜನಾ ಮಂಡಳಿಯ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ರಾದಾಕೃಷ್ಣ ನಾಯ್ಕ ವಂದಿಸಿದರುರು. ಭುವನೇಶ್ ಬುಡಲೂರು, ಚಿದಾನಂದ ಪಾನ್ಯಾಲ್, ರಾಮಚಂದ್ರ ನಾಯ್ಕ ಏಣಿತಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ನಾಟಕ ಆಧಾರಿತ ‘ಶಿವದೂತೆ ಗುಳಿಗೆ’ ಬಯಲಾಟ ನಡೆಯಿತು.