ಉಪ್ಪಿನಂಗಡಿ ಮಾಧವ ಶಿಶು ಮಂದಿರದಲ್ಲಿ ಮಾತೃ ಭೋಜನ – ಕುಟುಂಬ ಮಿಲನ ಕಾರ್ಯಕ್ರಮ – ಗುಣ ಸಂಪಾದನೆ ಮರೆತಿರುವುದು ಸಮಸ್ಯೆಗೆ ಕಾರಣ: ರವೀಂದ್ರ

0

ಉಪ್ಪಿನಂಗಡಿ: ವಿಶ್ವದ ಅತ್ಯಂತ ಶ್ರೇಷ್ಠ ಜೀವನ ಪದ್ದತಿಯನ್ನು ಹೊಂದಿರುವ ಹಿಂದೂ ಜೀವನ ಪದ್ಧತಿಯ ಹಿರಿಮೆ ಗರಿಮೆ ನಮಗಿದ್ದರೂ, ಹಣ ಸಂಪಾದನೆಯ ನಾಗಾಲೋಟದಲ್ಲಿ ಗುಣ ಸಂಪಾದನೆಯನ್ನು ಮರೆತ್ತಿರುವುದೇ ಸಮಾಜದ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಮಂಗಳೂರು ವಿಭಾಗ ಸಾಮರಸ್ಯ ಸಂಯೋಜಕ್ ರವೀಂದ್ರ ಹೇಳಿದ್ದಾರೆ.
ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಆಯೋಜಿಸಲ್ಪಟ್ಟ ಮಾತೃ ಭೋಜನ – ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಯಾವಾಗ ನಮ್ಮ ಶಾಲಾ ಪಠ್ಯ ಪುಸ್ತಕಗಳಲ್ಲಿ ರಾಮಾಯಣ ಮಹಾಭಾರತದಂತಹ ಜೀವನ ಮೌಲ್ಯಗಳನ್ನು ಭೋಧಿಸುವ ಕ್ರಮವು ಮರೆಯಾಯಿತೋ ಆ ದಿನಗಳಿಂದ ನೈತಿಕ ಅಧಃ ಪತನ ಸಮಾಜದಲ್ಲಿ ಕಾಣಿಸಿದೆ. ಮನೆಯಲ್ಲಿ ಮಾರ್ಗದರ್ಶನ ನೀಡಬೇಕಾದ ಹಿರಿಯರೂ ಇಲ್ಲವಾಗಿರುವುದು ಒಂದೆಡೆಯಾದರೆ, ಮಕ್ಕಳು ಸಂಸ್ಕಾರ ರಹಿತ ಶಿಕ್ಷಣಕ್ಕೆ ಒಳಗಾದ ಕಾರಣ ಸಮಾಜಕ್ಕೆ ಉತ್ತಮವಾದುದ್ದನ್ನು ನೀಡುವ ವ್ಯವಸ್ಥೆಯೇ ಮರೆಯಾಯಿತು. ಈ ಕೊರತೆಯನ್ನು ನೀಗಿಸಲು ಸಮಾಜದಲ್ಲಿನ ಸಂಸ್ಕಾರ ಕೇಂದ್ರಗಳನ್ನು ಬಲಪಡಿಸುವ ಕಾರ್ಯ ಪ್ರತಿ ಮನೆಯಿಂದಲೂ ನಡೆಯಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಭಜನಾ ಕ್ಷೇತ್ರದ ಸಾಧಕಿ ಶಕೀಲಾ ಕುಂದರ್ ಮುಂಬೈ ಮಾತನಾಡಿ, ಸಮಾಜದ ಪ್ರತಿಯೊಂದು ಮಕ್ಕಳ ಹಿತವನ್ನು ಬಯಸಿ, ಅವರ ಉನ್ನತಿಗಾಗಿ ಶ್ರಮಿಸುವ ಮೂಲಕ ಮಾತೃ ಭಾವವನ್ನು ಪ್ರತಿಯೋರ್ವರು ಮೈಗೂಡಿಸಿಕೊಳ್ಳಬೇಕೆಂದರು. ಅತಿಥಿಯಾಗಿ ಭಾಗವಹಿಸಿದ ಪ್ರಸನ್ನ ಗೋಪಾಲ ಪೈ ಮಾತನಾಡಿ ,ಹಿಂದೂ ಜೀವನ ಪದ್ದತಿಯೊಳಗಿನ ಅಮೃತತ್ವವನ್ನು ಅರಿತು ಸವಿಯಲು ಶಿಶು ಮಂದಿರಗಳಂತಹ ಸಂಸ್ಕಾರ ಕೇಂದ್ರಗಳ ಅಗತ್ಯತೆ ಇದೆ ಎಂದರು.


ಶಿಶು ಮಂದಿರದ ವ್ಯವಸ್ಥಾ ಸಂಚಾಲಕ್ ಕಂಗ್ವೆ ವಿಶ್ವನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಶು ಮಂದಿರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕುಮಾರಿ ಆದ್ಯ ಶೆಟ್ಟಿ ಬಾರ್ಲ ರವರಿಂದ ಕೀ ಬೋರ್ಡ್ ವಾದನ, ಕುಮಾರಿ ಪ್ರಜ್ಞಾ ಆಚಾರ್ಯ ಹಾಗೂ ಕುಮಾರಿ ನಿಧಿ ಅವರಿಂದ ದೇಶ ಭಕ್ತಿ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿದರು. ಸೇವಾ ವಿಭಾಗದ ಸಂಚಾಲಕ್ ಯು. ರಾಜೇಶ್ ಪೈ ವಂದಿಸಿದರು. ಶಿಕ್ಷಕಿ ಹರಿಣಾಕ್ಷಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ಜಯಂತ ಪೊರೋಳಿ, ಧನಂಜಯ ನಟ್ಟಿಬೈಲು, ಸುಜಾತ ಕೃಷ್ಣ ಆಚಾರ್ಯ, ಕೈಲಾರ್ ರಾಜಗೋಪಾಲ ಭಟ್, ಜಯಂತ ಅಂಬರ್ಜೆ, ಮಹಾಲಿಂಗ, ಉಷಾ ಮುಳಿಯ, ಶೋಭಾ ದಯಾನಂದ್, ಶ್ಯಾಮಲಾ ಶೆಣೈ, ಸುಗಂಧಿ, ಪುಷ್ಪಲತಾ, ಮೋಹಿನಿ, ಶಶಿಕಲಾ ಭಾಸ್ಕರ್, ಅಕ್ಷಯ್ ಕುಮಾರ್, ಕಿರಣ್, ರಾಮಚಂದ್ರ ನಾಯಕ್, ನಿಖಿಲ್, ಧನುಷ್, ಗೌತಮ್ , ಶಿವಪ್ರಸಾದ್, ನಿತೇಶ್ , ಶಶಿಧರ್ ಶೆಟ್ಟಿ, ಸುನೀಲ್ ಸಂಗಮ್, ಜಯಶ್ರೀ ಜನಾರ್ದನ್, ಪ್ರಪುಲ್ಲಾ ಆರ್. ನಾಯಕ್, ಶರತ್ ಕೋಟೆ, ಮಾಧವ ಆಚಾರ್ಯ, ಸುಧಾಕರ ಶೆಟ್ಟಿ, ಪ್ರಶಾಂತ್ ನೆಕ್ಕಿಲಾಡಿ, ಹರಿಪ್ರಸಾದ್, ರಾಧಾಕೃಷ್ಣ ಬೊಳ್ಳಾವು, ರಾಕೇಶ್ ಶೆಟ್ಟಿ, ವೆಂಕಪ್ಪ ಗೌಡ ಮೊದಲಾದವರು ಭಾಗವಹಿಸಿದ್ದರು.


ಮಾತೃ ಭೋಜನ: ಶಿಶು ಮಂದಿರದ ಮಕ್ಕಳ ಪೋಷಕರ ಪೈಕಿ 35 ಮನೆಗಳಿಂದ ಭಕ್ಷ್ಯಗಳನ್ನು ತಯಾರಿಸಿ ತಂದಿರಿಸಲಾಗಿತ್ತು. ಎಲ್ಲಾ 35 ಮನೆಗಳಿಗೂ ಸಂಖ್ಯೆಗಳನ್ನು ನೀಡಿ, ಸದ್ರಿ ಸಂಖ್ಯೆಗಳನ್ನು ಮನೆ ಎಂದು ಪರಿಗಣಿಸಲಾಗಿತ್ತು. ಈ ಎಲ್ಲಾ 35 ಮನೆಗಳಿಂದ ಭಾಗವಹಿಸಿದವರಿಗೆ 387 ಮಂದಿಯನ್ನು ಅತಿಥಿಗಳನ್ನಾಗಿ ಹಂಚಿ ಏಕ ಭಾವದಿಂದ ಭೋಜನಾ ಮಂತ್ರ ಪಠಿಸುತ್ತಾ ಭೋಜನವನ್ನು ಸವಿಯಲಾಯಿತು.

LEAVE A REPLY

Please enter your comment!
Please enter your name here