ಪುತ್ತೂರು: ’ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಜಗನ್ನಿಯಾಮಕನಾದ ಭಗವಂತನೊಬ್ಬನೇ ಆದರೂ ಅಕಾರ ಸ್ವರೂಪ ಶಕ್ತಿಗಳ ಭೇದದಿಂದ ಬಹುಪ್ರಕಾರವಾಗಿ ವಿವಿಧ ರೂಪಗಳಲ್ಲಿ ಭಗವಂತನನ್ನು ನಾವು ಆರಾಧಿಸುತ್ತೇವೆ. ವಿಘ್ನ ನಿವಾರಕನಾಗಿ, ಆಕಾಶ ತತ್ವಕ್ಕೆ ಅಭಿಮಾನಿಯಾಗಿ ಗಣಪತಿಯ ಆರಾಧನೆ ಬಹು ಪ್ರಸಿದ್ಧ. ಗಣಪತಿಯ ಆರಾಧನೆಯ ಪ್ರಕಾರಗಳಲ್ಲಿ ಅತ್ಯಂತ ವಿಶಿಷ್ಟವೂ ಮಹತ್ವ ಪೂರ್ಣವಾದುದೂ ಅಗಿರುವ ಮೂಡಪ್ಪ ಸೇವೆಯು ಒಂದು ಪ್ರಸಿದ್ಧವಾದ ಆರಾಧನೆಯ ಪ್ರಕಾರವಾಗಿದೆ. ಅತ್ಯಂತ ಪ್ರಾಚೀನವಾದ ಆಗಮ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವಂತೆ ಇಡೀ ವಿಶ್ವವನ್ನೇ ತನ್ನೊಳಗೆ ಹೊಂದಿರುವ ಮಹಾಕಾಯನಾದ ಗಣಪತಿಯನ್ನು ತನಗೆ ಅತ್ಯಂತ ಪ್ರಿಯವಾದ ಅಪೂಪ ಭಕ್ಷ್ಯಗಳಿಂದ ಪೂರಣೆ ಮಾಡಿ ಅಪೂಪದ ರಾಶಿಯಲ್ಲಿ ಮೂಡಿ ಬರುವ ಗಣಪತಿಯ ದರ್ಶನ ಮಾಡುವುದರಿಂದ ಸಕಲ ಇಷ್ಟಾರ್ಥಗಳೂ ಸಿದ್ದಿಸುವುದು.
ಜಗನ್ಮಾತೆ, ಶಕ್ತಿ ಸ್ವರೂಪಿಣಿ, ಇಷ್ಟಪ್ರದಾಯಿನಿ ತಾಯಿ ದುರ್ಗಾ ದೇವಿಯ ಆರಾಧನೆಯಿಂದ ಸಕಲೈಶ್ವರ್ಯವೂ ಒಲಿದು ಬರಲಿ ಎನ್ನುವ ಸಂಕಲ್ಪದೊಂದಿಗೆ ಶ್ರೀವನದುರ್ಗಾದೇವಿಗೆ ದುರ್ಗಾನಮಸ್ಕಾರ ಪೂಜೆ, ಜಗತ್ತಿಗೆ ಪಾಲಕನಾದ ಜಗದೊಡೆಯನು, ಅಭಿಷೇಕಪ್ರಿಯನು, ಬಿಲ್ವಾರ್ಚನಪ್ರಿಯನೂ ಆಗಿರುವ ಶ್ರೀಮಹಾಲಿಂಗೇಶ್ವರನಿಗೆ ರುದ್ರಪಾರಾಯಣ, ಲಕ್ಷ ಬಿಲ್ವಾರ್ಚನೆಯೂ ನಡೆಯಲಿರುವುದರಿಂದ ಮಹೇಶ್ವರನ ಅನುಗ್ರಹವೂ ಪ್ರಾಪ್ತಿಯಾಗಲಿದೆ.
ಇದೇ ಮೊದಲ ಬಾರಿ ಇಂತಹ ವಿಶಿಷ್ಟವಾದ ಆರಾಧನೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ನಡೆಯುತ್ತಿರುವುದು ಭಕ್ತಾದಿಗಳಿಗೆ ದೊರಕಿರುವ ಭಾಗ್ಯವೇ ಸರಿ. ಈ ಅಪೂರ್ವವಾದ ಕ್ಷಣ ಡಿ.30 ಮತ್ತು 31ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಲಿದೆ. ಇದರೊಂದಿಗೆ ಶಿವಪಂಚಾಕ್ಷರಿ ಹವನ, ವರದಶಂಕರ ಪೂಜೆ ಹಾಗೂ ದುರ್ಗಾಹೋಮ ನಡೆಯಲಿದೆ.
ಡಿ.30ರಂದು ಬೆಳಿಗ್ಗೆ ದ್ವಾದಶ ನಾಲಿಕೇರ ಗಣಪತಿ ಹವನ, ಸಂಜೆ 5ರಿಂದ ಶ್ರೀಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ, ಶ್ರೀವನದುರ್ಗೆಗೆ ದುರ್ಗಾನಮಸ್ಕಾರ ಪೂಜೆ, ರಾತ್ರಿ 7ರಿಂದ ಸಾಮೂಹಿಕ ಭಜನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಡಿ.31ರಂದು ಬೆಳಿಗ್ಗೆ 7ರಿಂದ ಶ್ರೀಮಹಾಲಿಂಗೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ, ಶಿವಪಂಚಾಕ್ಷರಿ ಹವನ, ವರದಶಂಕರ ಪೂಜೆ ಹಾಗೂ ದುರ್ಗಾಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಹಾಗೂ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ತಿಳಿಸಿದ್ದಾರೆ.