ರಾಮ ಮಂದಿರದ ಜೊತೆ ರಾಮರಾಜ್ಯವೂ ಆಗಬೇಕು – ರಾಮಕುಂಜೇಶ್ವರ ಸಂಸ್ಕೃತ ಶಾಲಾ ವಾರ್ಷಿಕೋತ್ಸವದಲ್ಲಿ ಪೇಜಾವರ ಶ್ರೀ

0

ರಾಮಕುಂಜ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುವುದರೊಂದಿಗೆ ಶತ ಶತಮಾನಗಳ ಕನಸು ನನಸು ಆಗುತ್ತಿದೆ. ಆದರೆ ನಾವು ರಾಮಮಂದಿರದಲ್ಲಿಯೇ ಸಾರ್ಥಕತೆ ಪಡೆಯುವುದು ಅಲ್ಲ. ರಾಮಮಂದಿರದಿಂದ ರಾಮರಾಜ್ಯದ ಕಡೆಗೆ ಸಾಗಬೇಕು. ರಾಮಮಂದಿರವನ್ನು ಮಂದಿರವನ್ನಾಗಿ ಉಳಿಸಿಕೊಳ್ಳುವುದರ ಜೊತೆಗೆ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ವಿಶ್ವಸ್ಥ ಮಂಡಳಿಯ ದಕ್ಷಿಣ ಭಾರತದ ಏಕೈಕ ಸದಸ್ಯರಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಡಿ.೨೯ರಂದು ನಡೆದ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆ ಹಾಗೂ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠಶಾಲೆಯ ವಾರ್ಷಿಕೋತ್ಸವ, ಶ್ರೀ ವಿಶ್ವೇಶತೀರ್ಥರ ಪುಣ್ಯ ಸ್ಮರಣೆ, ಗುರುವಂದನೆ, ಶ್ರೀ ವಿಶ್ವೇಶಾನುಗ್ರಹ ಪುರಸ್ಕಾರ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು. ರಾಮನ ಭಕ್ತಿ ಬೇರೆ ಅಲ್ಲ, ದೇಶ ಭಕ್ತಿ ಬೇರೆ ಅಲ್ಲ. ಹಾಗಾಗಿ ದೇಶ ಸೇವೆ ಬೇರೆ ಅಲ್ಲ, ರಾಮನ ಸೇವೆ ಬೇರೆ ಅಲ್ಲ. ಸಮಗ್ರ ಭಾರತವೇ ಶ್ರೀರಾಮ ಜನ್ಮಭೂಮಿ. ರಾಮನಿಗೆ ಮನೆ ಆಯಿತು. ರಾಮ ರಾಜ್ಯದಲ್ಲಿ ಇನ್ಯಾರಿಗೋ ಮನೆ ಇಲ್ಲ ಎಂಬ ಕೊರಗು ಇರಬಾರದು. ಮನೆ ನಿರ್ಮಾಣಕ್ಕೆ, ಶಿಕ್ಷಣ, ಆರೋಗ್ಯಕ್ಕೆ ನೆರವು ನೀಡುವುದೇ ಶ್ರೀರಾಮನಿಗೆ ನೇರವಾಗಿ ಸಲ್ಲುವ ಸೇವೆಯಾಗಿದೆ. ಇದರಿಂದ ರಾಮರಾಜ್ಯವೂ ನಿರ್ಮಾಣ ಆಗಲಿದೆ. ಅಯೋಧ್ಯೆಯ ಭವ್ಯವಾದ ಶ್ರೀರಾಮನ ಮಂದಿರದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ರಾಮಮಂದಿರದ ವಿಚಾರದಲ್ಲಿ ಅಪಸ್ವರವನ್ನೂ ಕೇಳುತ್ತಿದ್ದೇವೆ. ಮಂದಿರವನ್ನು ಕಿತ್ತೊಗೆಯ್ಯುತ್ತೇವೆ ಎಂಬ ಮಾತು ಕೇಳಿಬರುತ್ತಿದೆ. ರಾಮಮಂದಿರ ಇನ್ನೊಮ್ಮೆ ಪರಭಾರೆ ಆಗಬಾರದು. ಮಂದಿರವನ್ನು ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಪ್ರಜೆಗಳೆಲ್ಲರೂ ರಾಮನಾಗಬೇಕು. ರಾಮನ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇದೂ ಶ್ರೀ ವಿಶ್ವೇಶತೀರ್ಥರ ಕರೆಯೂ ಆಗಿತ್ತು ಎಂದು ಶ್ರೀ ವಿಶ್ವಪ್ರಸನ್ನ ಶ್ರೀ ಹೇಳಿದರು. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು ವಿದ್ಯೆಯ ಜೊತೆಗೆ ಉದಾತ್ತವಾದ ಸಂಸ್ಕಾರ ನೀಡುತ್ತಿವೆ. ಗುರುವಿನ ಸ್ಥಾನದಲ್ಲಿ ನಿಂತು ವಿದ್ಯೆ ನೀಡಿದ ಶಾಲೆಗೆ ಪ್ರತಿ ಗೌರವ ಸಲ್ಲಿಸುವುದು ವಿದ್ಯಾರ್ಥಿಯ ಕರ್ತವ್ಯವೂ ಆಗಿದೆ. ಮಗುವಿಗೆ ಕಿಂಚಿತ್ತೂ ಸಂಸ್ಕಾರ ನೀಡದೇ ಶಿಕ್ಷಣ ಮಾತ್ರ ನೀಡಿದಲ್ಲಿ ಮುಂದೆ ಆತ ವಿದೇಶಕ್ಕೆ ಹೋಗಿ ಇತ್ತ ತಿರುಗಿಯೂ ನೋಡುವುದಿಲ್ಲ. ಸತ್ತ ಮೇಲೆ ಹೆಣ ಎತ್ತಲೂ ಬರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕೆಂದು ಸ್ವಾಮೀಜಿ ಹೇಳಿದರು.



ಷಷ್ಠ್ಯಬ್ದಿ ಆಚರಿಸುತ್ತಿರುವ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರಿಗೆ ಅಭಿನಂದನಾ ಭಾಷಣ ಮಾಡಿದ ವಿದ್ವಾನ್ ಪಂಜ ಭಾಸ್ಕರ ಭಟ್ ಅವರು, ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥರು ಅವತಾರ ಪುರುಷ. ಅವರಿಂದ ಮಂತ್ರಾಕ್ಷತೆ ಪಡೆಯುವುದೇ ಸಾಧನೆಯ ಶಿಖರ. ಅವರ ಧರ್ಮಕಾರ್ಯಗಳ ಉತ್ತರಾಧಿಕಾರಿಯಾಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥರೂ ಅವರ ದಾರಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ ಎಂದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ರಾಮಕೃಷ್ಣ ಅಸ್ರಣ್ಣ, ಕಸಾಪ ದ.ಕ.ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರದೀಪ್ ಕಲ್ಕೂರ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ, ಕೋಶಾಧಿಕಾರಿ ಕೆ.ಸೇಸಪ್ಪ ರೈ, ಶ್ರೀ ರಾಮಕುಂಜೇಶ್ವರ ಕ.ಮಾ.ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠ ಶಾಲಾ ಮುಖ್ಯಶಿಕ್ಷಕಿ ಜ್ಯೋತಿಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಳೆದ ಸಾಲಿನ 7ನೇ ತರಗತಿ ಪರೀಕ್ಷೆಯಲ್ಲಿ ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರತಿಸಲಾಯಿತು. ನಿವೃತ್ತ ಶಿಕ್ಷಕರಾದ ಸಂಧ್ಯಾನಾರಾಯನ ಭಟ್, ಜನಾರ್ದನ ಕೆ.ಜೆ.ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕರಾದ ಟಿ.ನಾರಾಯಣ ಭಟ್ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಶಿಕ್ಷಕಿ ಸುಶೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಗುರುವಂದನೆ ಕಾಣಿಕೆ- ಮನೆ ನಿರ್ಮಾಣಕ್ಕೆ ಸಮರ್ಪಣೆ:
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಷಷ್ಟ್ಯಬ್ದಿ ಪ್ರಯುಕ್ತ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಗಳು, ಊರ ನಾಗರಿಕರು, ಸಂಘ ಸಂಸ್ಥೆಗಳಿಂದ ಗುರುವಂದನೆ ಸಲ್ಲಿಸಲಾಯಿತು. ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯು 105ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯೆ ಕಲಿತು ಬದುಕು ಕಟ್ಟಿಕೊಂಡ 119 ಪ್ರತಿಭಾನ್ವಿತ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಗುರು ಸೇವಾನಿರತರಿಗೆ ಶ್ರೀ ವಿಶ್ವೇಶಾನುಗ್ರಹ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಅಂದಾಜು 4 ಲಕ್ಷ ರೂ. ಕಾಣಿಕೆ ಸಮರ್ಪಣೆಯಾಗಿದೆ. ಇದನ್ನು ರಾಮನ ಸೇವೆ, ರಾಮಕುಂಜೇಶ್ವರನ ಸೇವೆ ಎಂದು ತಿಳಿದು ಈ ಊರಿನ ದುರ್ಬಲರಿಗೆ ಮನೆ ನಿರ್ಮಾಣಕ್ಕೆ ಸಮರ್ಪಣೆ ಮಾಡುವುದಾಗಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

LEAVE A REPLY

Please enter your comment!
Please enter your name here