ಉಪ್ಪಿನಂಗಡಿ: ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೈಗೊಂಡ ನಿರ್ಣಯಗಳನ್ನು ನಿರ್ಣಯ ಪುಸ್ತಕಗಳಲ್ಲಿ ದಾಖಲಿಸಿಕೊಳ್ಳಲಾಗುತ್ತಿಲ್ಲ. ನನ್ನ ಈ ಆರೋಪ ಸುಳ್ಳಾದರೆ ನಾನು ರಾಜೀನಾಮೆಯನ್ನು ಬೇಕಾದರೂ ನೀಡುತ್ತೇನೆ ಎಂದು ಸದಸ್ಯರೋರ್ವರು ಸಭೆಯಲ್ಲಿ ಗುಡುಗಿದ ಘಟನೆ ಉಪ್ಪಿನಂಗಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುರ್ರಹ್ಮಾನ್ ಕೆ., ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸ ವಾಣಿಜ್ಯ ಮತ್ತು ವಸತಿ ಸಮುಚ್ಛಯಗಳನ್ನು ಕಟ್ಟುವಾಗ ನಿರ್ಮಿಸುವ ಇಂಗು ಗುಂಡಿಗಳನ್ನು ನೈರ್ಮಲ್ಯ ಸಮಿತಿಯ ಪರಿಶೀಲನೆ ಬಳಿಕವೇ ಅಂಗೀಕಾರ ಮಾಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ನಿರ್ಣಯ ಪುಸ್ತಕದಲ್ಲಿ ಇದು ದಾಖಲಾಗಿಲ್ಲ. ನನ್ನ ಆರೋಪ ಸುಳ್ಳಾದರೆ ನಾನು ರಾಜೀನಾಮೆ ಕೊಡಲು ಸಿದ್ಧ. ನಿರ್ಣಯಗಳನ್ನು ನಿಮಗೆ ಮನಬಂದಂತೆ ಬರೆಯುವುದಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಚರ್ಚೆಯಾಗಿ ಸಭೆಯ ಕೊನೆಯಲ್ಲಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಓದಿ ಹೇಳಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ಯು.ಟಿ. ತೌಸೀಫ್ ಮಾತನಾಡಿ, ಗ್ರಾ.ಪಂ. ಅಧೀನದ ಹೊಟೇಲ್ ಹಾಗೂ ಇತರ ಅಂಗಡಿಗಳ ತ್ಯಾಜ್ಯ ನೀರನ್ನು ನದಿಗೆ ಬಿಡುವುದಲ್ಲ. ಅದನ್ನು ಇಂಗು ಗುಂಡಿ ರಚಸಿ, ಅದಕ್ಕೆ ಬಿಡಬೇಕು. ಇನ್ನುಳಿದ ಕಟ್ಟಡಗಳ ತ್ಯಾಜ್ಯ ನೀರನ್ನು ಕೂಡಾ ಅದಕ್ಕೆ ಸೇರಿಸಿಕೊಳ್ಳಬೇಕು ಎಂದರು. ಸದಸ್ಯೆ ಉಷಾ ಮುಳಿಯ ಮಾತನಾಡಿ, ಉಪ್ಪಿನಂಗಡಿಯಲ್ಲಿ ಒಳಚರಂಡಿ ರಚನೆಗೆ ಆದ್ಯತೆ ನೀಡಿ ಎಂದರು. ಸದಸ್ಯ ಲೋಕೇಶ್ ಬೆತ್ತೋಡಿ ಮಾತನಾಡಿ, ಆದಾಯದಲ್ಲಿ ತಾಲೂಕಿನಲ್ಲೇ ಅತೀ ದೊಡ್ಡ ಎರಡನೇ ಗ್ರಾ.ಪಂ. ಇದಾಗಿದ್ದು, ಇಲ್ಲಿನ ಪಿಡಿಒ ಅವರನ್ನು ಹೆಚ್ಚುವರಿ ಕರ್ತವ್ಯಕ್ಕೆ ಕೋಡಿಂಬಾಡಿಗೂ ಹಾಕಲಾಗಿದೆ. ಆದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅವರನ್ನು ಖಾಯಂ ಆಗಿ ಇಲ್ಲೇ ನಿಯೋಜಿಸಬೇಕು ಎಂದರು.
ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಸದಸ್ಯರಾದ ಸುರೇಶ ಅತ್ರೆಮಜಲು, ಸಂಜೀವ, ಅಬ್ದುಲ್ ರಶೀದ್, ಇಬ್ರಾಹೀಂ, ವನಿತಾ, ಜಯಂತಿ, ಶೋಭಾ, ರುಕ್ಷಿಣಿ, ವಿನಾಯ ಪೈ, ಮೈಸಿದಿ ಇಬ್ರಾಹೀಂ, ಧನಂಜಯ, ನೆಬಿಸ, ಸೌಧ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಗೀತಾ ಶೇಖರ್ ವಂದಿಸಿದರು. ಸಿಬ್ಬಂದಿ ಜ್ಯೋತಿ ಸಹಕರಿಸಿದರು.
ಸಾಮಾನ್ಯ ಸಭೆ ನಡೆಯುವಲ್ಲಿಗೆ ದಿಢೀರ್ ಬಂದ ಆರ್ತಿಲ ಪರಿಸರದ ವೃದ್ಧೆಯೋರ್ವರು ಇಲ್ಲಿನ ಗ್ರಾ.ಪಂ. ಸದಸ್ಯರೋರ್ವರು ತನಗೆ ಮನೆ ಕಟ್ಟಿಕೊಡುತ್ತೇನೆಂದು ತನ್ನಿಂದ 1.70 ಲಕ್ಷ ರೂಪಾಯಿ ಪಡೆದು ಮನೆ ಕಾಮಗಾರಿ ಪೂರ್ತಿಗೊಳಿಸದೇ ನನ್ನನ್ನು ಸತಾಯಿಸುತ್ತಿದ್ದಾರೆ. ನನಗೆ ನ್ಯಾಯ ಒದಗಿಸಿ ಎಂದು ಅಂಗಲಾಚಿದರು. ಆಗ ತೀವೃ ಮುಜುಗರಕ್ಕೊಳಗಾದ ಆಪಾದಿತ ಸದಸ್ಯ ಸಬೂಬು ನೀಡಲು ಯತ್ನಿಸಿದರು. ಪರಿಸ್ಥಿತಿ ವಿಲಕ್ಷಣ ಸ್ವರೂಪ ಪಡೆಯುವುದನ್ನು ಅರಿತ ಸದಸ್ಯ ಅಬ್ದುರ್ರಹ್ಮಾನ್ ಕೆ. ವೃದ್ಧೆಯನ್ನು ಸಂತೈಸಿ, ನಿಮಗೆ ಅನ್ಯಾಯವಾಗಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ನೀವು ಕಚೇರಿಗೆ ಬರುವ ಅವಶ್ಯಕತೆ ಇಲ್ಲ. ಪಂಚಾಯತ್ ಸದಸ್ಯರ ನಿಯೋಗವೇ ನಿಮ್ಮ ಮನೆಗೆ ಬಂದು ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿ, ವೃದ್ಧೆಯನ್ನು ಕಳುಹಿಸಿಕೊಟ್ಟರು.