ಪುತ್ತೂರು : ವಿದ್ಯುತ್ ತಂತಿಗಳಿಗೆ ತಾಗುವ ಮರದ ಗೆಲ್ಲುಗಳನ್ನು ಕಡಿದು ರಸ್ತೆ ಬದಿಗಳಲ್ಲಿ ಮಳೆ ನೀರಿನ ಚರಂಡಿಗಳಲ್ಲಿ ಬೇಕಾ ಬಿಟ್ಟಿ ಹಾಕುತ್ತಿರುವುದಾಗಿ ಮೆಸ್ಕಾಂ ವಿರುದ್ಧ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಶಾಸಕರಿಗೆ ಹಾಗೂ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರಿಗೆ ದೂರು ನೀಡಲಾಗಿದೆ.
ವಿದ್ಯುತ್ ತಂತಿಗಳಿಗೆ ತಾಗುವ ಗೆಲ್ಲುಗಳನ್ನು ಕಡಿದು ಸೂಕ್ತ ನಿರ್ವಹಣೆ ಮಾಡಬೇಕು. ಸಾರ್ವಜನಿಕ ರಸ್ತೆ ನೀರಿನ ಚರಂಡಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಲು ಈಗಾಗಲೇ ಮೇಲಾಧಿಕಾರಿಗಳು ಮೆಸ್ಕಾಂ ಕಿರಿಯ ಇಂಜಿನಿಯರ್‌ಗಳಿಗೆ ಬರಹದ ಮೂಲಕ ಸೂಚನೆ ನೀಡಲಾಗಿದ್ದರೂ ಇದನ್ನು ಪಾಲಿಸಲಾಗುತ್ತಿಲ್ಲ. ಇತ್ತೀಚೆಗೆ ಕೆಮ್ಮಾಯಿ ಬೀರ‍್ನಹಿತ್ಲು ರಸ್ತೆಯಲ್ಲಿ ಕಡಿದು ಹಾಕಿದ ಗೆಲ್ಲುಗಳ ಭಾವಚಿತ್ರ ಲಗತ್ತೀಕರಿಸಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ಮಳೆ ನೀರು ಹರಿಯಲು ಅಡ್ಡಿಯಾಗುವ ರೀತಿಯಲ್ಲಿ ಕಡಿದ ಗೆಲ್ಲುಗಳನ್ನು ರಸ್ತೆ ಚರಂಡಿಗಳಲ್ಲಿ ಎಸೆಯುತ್ತಿದ್ದಾರೆ. ರಸ್ತೆಗೆ ಬೀಳದ ಹಾಗೆ ಕಡಿಯಲು ಅವಕಾಶ ಇದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನಕ್ಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.