ಬೆಟ್ಟಂಪಾಡಿ: ಪರಸರದಲ್ಲಿ ಬೀದಿ ಜಾನುವಾರುಗಳ ಸವಾರಿಯಿಂದ ಸಾರ್ವಜನಿಕರಿಗೆ ತೊಂದರೆ – ಸೂಕ್ತ ಕ್ರಮಕ್ಕೆ ಪಂಚಾಯತ್ ನಿರ್ಣಯ

0

ನಿಡ್ಪಳ್ಳಿ: ಬೆಟ್ಟಂಪಾಡಿ ಪರಿಸರದ ಮುಖ್ಯ ರಸ್ತೆಯಲ್ಲಿ ಜಾನುವಾರುಗಳು ತಿರುಗಾಡುತ್ತಿದ್ದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪ ಕೇಳಿ ಬರುತ್ತಿದೆ. ಬೆಟ್ಟಂಪಾಡಿ ಗ್ರಾಮದ ರೆಂಜ, ಉಪ್ಪಳಿಗೆ ಮತ್ತಿತರ ಕಡೆಗಳಲ್ಲಿ ಮುಖ್ಯ ರಸ್ತೆಯಲ್ಲಿ ಜಾನುವಾರುಗಳು ಅಡ್ಡಾದಿಡ್ಡಿ ಓಡಾಡುತ್ತವೆ. ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಚಲಿಸುತ್ತಿರುವ ವಾಹನಗಳಿಗೆ ಪಕ್ಕನೆ ಅಡ್ಡ ಬಂದರೆ ಅಪಘಾತ, ಅನಾಹುತ ಸಂಭವಿಸುವ ಪ್ರಮೇಯ ಒದಗಿ ಬರಬಹುದು. ಅಲ್ಲದೆ ಶಾಲಾ ಮಕ್ಕಳು ಭಯಭೀತರಾಗುವ ಪ್ರಸಂಗಗಳು ನಡೆಯುತ್ತವೆ. ಜಾನುವಾರು ಮಾಲಕರು ಈ ಬಗ್ಗೆ ಜಾಗ್ರತೆ ವಹಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಿಗೆ, ರಸ್ತೆಗಳಿಗೆ ಬಿಡಬಾರದು ಎಂದು ಸಾರ್ವಜನಿಕರು ಹೇಳುತ್ತಾರೆ. ಜಾನುವಾರುಗಳನ್ನು ಹಾಗೆ ಬಿಟ್ಟರೆ ಪಂಚಾಯತ್ ಸೂಕ್ತ ಕ್ರಮ ಕೈಗೊಂಡು ಕಾನೂನು ಕ್ರಮ ಕೈಗೊಳ್ಳ ಬೇಕು ಎಂಬ ಮಾತು ಕೇಳಿ ಬರುತ್ತಿದೆ. ಉಪ್ಪಳಿಗೆ ಪರಿಸರದಲ್ಲಿಯೂ ಜಾನುವಾರುಗಳು ಕೆಲವರ ಕೃಷಿ ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ ಸಸಿಗಳನ್ನು ತಿಂದು ತೊಂದರೆ ಕೊಡುತ್ತಿದೆ ಮಾತ್ರವಲ್ಲ ನೀರು ಹಾಕುವ ಸ್ಪ್ರಿಂಕ್ಲರ್ ಗಳನ್ನು ತುಂಡು ಮಾಡಿ ನಷ್ಟ ಉಂಟು ಮಾಡುತ್ತಿದೆ ಎಂದು ಅಲ್ಲಿಯ ಜನರು ಆರೋಪಿಸುತ್ತಿದ್ದಾರೆ. 

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ  ಹಿಂದೆ ಈ ಬಗ್ಗೆ ಚರ್ಚೆ ನಡೆದು ಸಾರ್ವಜನಿಕ ಸ್ಥಳಗಳಿಗೆ ಜಾನುವಾರುಗಳನ್ನು ಬಿಟ್ಟರೆ ಅದರ ಮಾಲಕರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. 

ಎಷ್ಟು ಹೇಳಿದರೂ ಜನರಿಗೆ ಬುದ್ದಿ ಬರುತ್ತಿಲ್ಲ- ಪ್ರಕಾಶ್ ರೈ ಬೈಲಾಡಿ

ಜಾನುವಾರುಗಳನ್ನು ಸಾರ್ವಜನಿಕ ಸ್ಥಳಗಳಿಗೆ ಬಿಡಬಾರದು ಎಂದು ಅವುಗಳ ಮಾಲಕರಿಗೆ ಹೇಳಿ ಹೇಳಿ ಸಾಕಾಗಿದೆ. ಪಾಪ ಬಾಯಿ ಬಾರದ ದನಗಳಿಗೆ ಶಿಕ್ಷೆ ನೀಡಿದರೆ ಏನೂ ಪ್ರಯೋಜನ ಇಲ್ಲ. ಅದನ್ನು ಹೊರಗೆ ಬಿಡುವವರಿಗೆ ಸ್ವಲ್ಪ ಬುದ್ದಿ ಬೇಕು. ಕಾನೂನು ಕ್ರಮ ಜರುಗಿಸುವ ಬಗ್ಗೆ ಹಿಂದೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇನ್ನು ಅವರ ಮೇಲೆ ಮೊಕದ್ದಮೆ ಹೂಡುವುದೇ ಸೂಕ್ತ. ಇಲ್ಲದಿದ್ದರೆ ಅವುಗಳನ್ನು ಹಿಡಿದು ದನದ ದೊಡ್ಡಿಗೆ ಸೇರಿಸಬೇಕು ಆಗ ಜನರಿಗೆ ಬುದ್ದಿ ಬರುತ್ತದೆ. ಇಲ್ಲದಿದ್ದರೆ ಜನರಿಗೆ ಎಷ್ಟು ಹೇಳಿದರೂ ಬುದ್ದಿ ಬರುವುದಿಲ್ಲ.

LEAVE A REPLY

Please enter your comment!
Please enter your name here