





ನೆಲ್ಯಾಡಿ: ಪೆರಿಯಶಾಂತಿಯಿಂದ ಅಡ್ಡಹೊಳೆ ತನಕ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಎಸ್.ಎಂ.ಔತಾಡ್ ಕಂಪನಿಯವರಿಗೆ ಸೇರಿದ ಅಂದಾಜು 1.10 ಲಕ್ಷ ರೂ.ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಪಿಕಪ್ ವಾಹನವೊಂದರಲ್ಲಿ ತುಂಬಿಸಿ ಕಳವಿಗೆ ಮುಂದಾಗಿದ್ದ ಯಾರೋ ಕಳ್ಳರು ಸಂಸ್ಥೆಯ ಸಿಬ್ಬಂದಿ ಬರುತ್ತಿದ್ದಂತೆ ವಾಹನ ಹಾಗೂ ಸೊತ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಜ.2ರಂದು ಬೆಳಗ್ಗಿನ ಜಾವ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ನಡೆದಿದೆ.


ಈ ಬಗ್ಗೆ ಎಸ್.ಎಂ.ಔತಾಡ್ ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ ಆಗಿರುವ ತೆಲಂಗಾಣ ನಿವಾಸಿ ಸಾಯಿರಾಮ್ ಎಂ.ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಜ.2ರಂದು ಬೆಳಗಿನ ಜಾವ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಸಂಸ್ಥೆಯು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸುಮಾರು 1,10,750 ರೂಪಾಯಿ ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಸುಮಾರು 3-4 ಜನ ಕಳ್ಳರು ಕಳವು ಮಾಡಿ ಕೆಎ 46-7045 ಸಂಖ್ಯೆಯ ಪಿಕ್ ವಾಹನಕ್ಕೆ ಲೋಡ್ ಮಾಡಿ ಕಳವು ಮಾಡುತ್ತಿದ್ದು, ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ, ಕಳವು ಮಾಡಿದ ಸ್ವತ್ತುಗಳು, 3 ಮೊಬೈಲ್ ಫೋನ್‌ಗಳನ್ನು ಮತ್ತು ಕೆಎ21 ಇಎ 4076 ಸಂಖ್ಯೆಯ ದ್ವಿಚಕ್ರ ವಾಹನವನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಸಾಯಿರಾಮ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಕಲಂ: 379 ಭಾ.ದಂ.ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.













