ರಸ್ತೆ ಕಾಮಗಾರಿಯಲ್ಲಿ ಶಾಸಕರಿಂದ ಜನರ ದಾರಿ ತಪ್ಪಿಸುವ ಪ್ರಯತ್ನ ಸರಿಯಲ್ಲ-ನೀವು ಅನುದಾನ ತಂದಿದ್ದರೆ ದಾಖಲೆ ಕೊಡಿ ನಾವು ಒಪ್ಪಿಕೊಳ್ಳುತ್ತೇವೆ – ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಆರೋಪ

0

ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆ ಬೇರಿಕೆಯಿಂದ ನೆಕ್ಕಿಲಾಡಿ ತನಕ ರೂ. 10 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ವಿಧಾನಸಭಾ ಚುನಾವಣೆಯ ಮೊದಲು ಆಗಿನ ಶಾಸಕ ಸಂಜೀವ ಮಠಂದೂರು ಅವರು ಗುದ್ದಲಿ ಪೂಜೆ ನೆರವೇರಿಸಿದ್ದು, ಇದೀಗ ಕಾಮಗಾರಿ ಮುಗಿಯುವ ಹಂತದಲ್ಲಿದ್ದಾಗ ಪುತ್ತೂರು ಶಾಸಕರು ಮತ್ತೊಮ್ಮೆ ಗುದ್ದಲಿ ಪೂಜೆ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅನುದಾನ ತಂದಿರುವುದಕ್ಕೆ ನಮ್ಮಲ್ಲಿ ದಾಖಲೆ ಇದೆ. ಅದೇ ರೀತಿ ಶಾಸಕ ಅಶೋಕ್ ಕುಮಾರ್ ರೈ ಅವರು ಅನುದಾನ ತಂದಿದ್ದರೆ ದಾಖಲೆ ಕೊಡಲಿ. ನಾವು ಇದನ್ನು ಒಪ್ಪಿಕೊಳ್ಳಲು ಸಿದ್ದರಿದ್ದೇವೆ ಎಂದು ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಅತ್ರಮಜಲು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ಸುರೇಶ್ ಅತ್ರಮಜಲು ಅವರು ಮಾತನಾಡಿ
ಪುತ್ತೂರು ಉಪ್ಪಿನಂಗಡಿ ರಸ್ತೆ ಬೇರಿಕೆಯಿಂದ ನೆಕ್ಕಿಲಾಡಿ ತನಕ ರಸ್ತೆ ಅಗಲೀಕರಣ ಕಾಮಗಾರಿಗೆ ರೂ.10 ಕೋಟಿ ಅನುದಾನ ಒದಿಗಸುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ ಅಭಿನಂದನೆಗಳು ಎಂಬ ಬ್ಯಾನರ್ ಅಲ್ಲಲ್ಲಿ ಅಳವಡಿಸಲಾಗಿದೆ. ಆದರೆ ಈ ಅನುದಾನ ತಂದಿರುವುದು ಮಾಜಿ ಶಾಸಕರಾಗಿರುವ ಸಂಜೀವ ಮಠಂದೂರು ಎಂದು ಎಲ್ಲರಿಗೂ ತಿಳಿದಿದ್ದು, ಹಿಂದಿನ ಅವಧಿಯಲ್ಲಿ ಒಮ್ಮೆ ಗುದ್ದಲಿ ಪೂಜೆ ಆಗಿ ಪುನಃ ಈಗಿನ ಶಾಸಕರು ಮತ್ತೊಮ್ಮೆ ಗುದ್ದಲಿ ಪೂಜೆ ಮಾಡುವುದು ಯಾಕೆ ಎಂದು ಇದನ್ನು ಜನರು ನಮ್ಮಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ಸ್ಪಷ್ಟ ಉತ್ತರ ನೀಡುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ಮಾಡುತ್ತಿದ್ದೇವೆ ಎಂದ ಅವರು ಪುತ್ತೂರು ಉಪ್ಪಿನಂಗಡಿ ರಸ್ತೆ ಈ ಹಿಂದೆ ಜಿಲ್ಲಾ ಮುಖ್ಯರಸ್ತೆಯಾಗಿತ್ತು. ಹಿಂದಿನ ಶಾಸಕ ಸಂಜೀವ ಮಠಂದೂರು ಅವರು ತಮ್ಮ ದೂರದೃಷ್ಟಿತ್ವದಿಂದ ಪುತ್ತೂರು ಉಪ್ಪಿನಂಗಡಿ ರಸ್ತೆಯನ್ನು ಚುತುಷ್ಪತ ಮಾಡಬೇಕೆಂದು 2022ರಲ್ಲಿ ಗುರುವಾಯಕೆರೆ ಉಪ್ಪಿನಂಗಡಿ ಮತ್ತು ಪುತ್ತೂರನ್ನು ಸೇರಿಸಿ ರಾಜ್ಯ ಹೈವೆಯನ್ನಾಗಿ ಅಪ್‌ಗ್ರೇಡ್ ಮಾಡಿಸಿದರು. ಆ ಸಂದರ್ಭ ಅದಕ್ಕೆ ದೊಡ್ಡ ಮಟ್ಟದ ಅನುದಾನ ರಸ್ತೆಗೆ ಬಂತು. ಆಗ ಅವರು ಕೃಷ್ಣಗರ ಬೇರಿಕೆಗೆ ರೂ. 5 ಕೋಟಿ ಅನುದಾನ ಇಟ್ಟಿದ್ದರು. ಆನಂತರ ರೂ.22.50 ಕೋಟಿ ಅನುದಾನ ರಸ್ತೆ ಅಭಿವೃದ್ಧಿಗೆ ಇಟ್ಟಿದ್ದರು. ಈ ಅನುದಾನದಲ್ಲಿ ವಿಟ್ಲ ಸಾರಡ್ಕ ರಸ್ತೆಗೆ ರೂ. 10 ಕೋಟಿ, ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆಗೆ ರೂ. 2.50 ಕೋಟಿ, ಬೇರಿಕೆಯಿಂದ ನೆಕ್ಕಿಲಾಡಿ ತನಕ ರೂ. 10 ಕೋಟಿ ಅನುದಾನ ಇಡಲಾಗಿತ್ತು. ಅದೇ ರೀತಿ ಈ ಕಾಮಗಾರಿಗೆ 2022ರ ಜ.3ಕ್ಕೆ ಆಡಳಿತ ಮಂಜೂರಾತಿಯೂ ಸಿಕ್ಕಿತ್ತು. ಗುತ್ತಿಗೆದಾರ ಕುಂದಾಪುರದ ಮಂಜುಶ್ರೀ ಕನ್‌ಸ್ಟ್ರಕ್ಷನ್‌ನ ದಯಾನಂದ ಶೆಟ್ಟಿಯವರಿಗೆ ಒಟ್ಟು ಕಾಮಗಾರಿಗಳ ಟೆಂಡರ್ ಆಗಿದ್ದು, 2022ರ ಜ.30ಕ್ಕೆ ಅವರಿಗೆ ವರ್ಕ್ ಆರ್ಡರ್ ಕೂಡಾ ಸಿಕ್ಕಿತ್ತು. ಅವರು ವಿಟ್ಲ ಸಾರಡ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದು, ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆ ಮತ್ತು ಬೇರಿಕೆಯಿಂದ ನೆಕ್ಕಿಲಾಡಿ ತನಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗೆ ಒಬ್ಬರೇ ಗುತ್ತಿಗೆದಾರರಾಗಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆಯೇ ಆಗಿನ ಶಾಸಕ ಸಂಜೀವ ಮಠಂದೂರು ಅವರು ಈ ರಸ್ತೆಗೆ ನೆಕ್ಕಿಲಾಡಿಯಲ್ಲಿ 2023ರ ಫೆಬ್ರವರಿ ತಿಂಗಳಲ್ಲಿ ಗುದ್ದಲಿಪೂಜೆ ಮಾಡಿದ್ದಾರೆ. ಆ ಸಂದರ್ಭ ಎಲ್ಲಾ ಜನಪ್ರತಿನಿಧಿಗಳು, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಮ್ ಅವರು ಕೂಡಾ ಇದ್ದರು. ಈ ಕುರಿತು ಪತ್ರಿಕೆಯಲ್ಲಿ ವರದಿಗಳು ಬಂದಿವೆ. ಒಟ್ಟು 18 ತಿಂಗಳ ಕಾಮಗಾರಿ ವರ್ಕ್ ಆರ್ಡರ್ ಪ್ರಕಾರ ಗುತ್ತಿಗೆದಾರರು ಕಾಮಗಾರಿಯನ್ನು 2024ನೇ ಜ.29ರ ಕೊನೆಗೆ ಮುಗಿಸಬೇಕಾಗಿತ್ತು. ಆದರೆ ಕಾರಣಂತರದಿಂದ ಒಬ್ಬರೇ ಮೂರು ಕಡೆಯ ಗುತ್ತಿಗೆ ಪಡೆದಿದ್ದರಿಂದ ತಡವಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಇಲ್ಲಿ ಒಮ್ಮೆ ಆಗಿನ ನಮ್ಮ ಶಾಸಕರಾದ ಸಂಜೀವ ಮಠಂದೂರು ಅವರು ಗುದ್ದಲಿ ಪೂಜೆ ಮಾಡಿದ ಬಳಿಕ ಈಗಿನ ಶಾಸಕರು ಇತ್ತೀಚೆಗೆ ಬೇರಿಕೆಯಲ್ಲಿ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಕುರಿತು ಒಂದು ಕೆಲಸ ಮುಗಿಯಲು ಎರಡು ತಿಂಗಳು ಇರುವಾಗ ಪುನಃ ಇನ್ನೊಮ್ಮೆ ಯಾವ ಪುರುಷಾರ್ಥಕ್ಕೆ ಗುದ್ದಲಿ ಪೂಜೆ ಮಾಡುತ್ತಾರೆಂದು ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಕೆಲಸ ಮುಗಿಯುವ ಸಮಯದಲ್ಲಿ ಗುದ್ದಲಿಪೂಜೆ ಮಾಡುವ ಅನಿವಾರ್ಯತೆ ಯಾಕೆ. ಇಲ್ಲಿನ ಜನರು ಅಪ್ರಬುದ್ದರಲ್ಲ. ಶಾಸಕರು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದ್ದಲ್ಲದೆ ಅಲ್ಲಲ್ಲಿ ಬ್ಯಾನರ್ ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಒಂದು ವೇಳೆ ಈಗಿನ ಶಾಸಕರು ಅನುದಾನ ತಂದಿದ್ದರೆ ಅವರು ದಾಖಲೆ ಕೊಡಲಿ. ನಮ್ಮಲ್ಲಿರುವ ದಾಖಲೆ ನಾವು ಕೊಡುತ್ತೇವೆ. ಸುಮ್ಮನೆ ದಾಖಲೆ ಇಲ್ಲದೆ ಪ್ರಚಾರ ತೆಗೆದು ಕೊಳ್ಳುವುದು ಅವಶ್ಯಕತೆಯಿಲ್ಲ. ಒಟ್ಟಿನಲ್ಲಿ ಇದಾವುದು ಈಗಿನ ಶಾಸಕರ ಕೊಡಗೆಯಲ್ಲ. ಜನರಿಗೆ ಮೋಸ ಮಾಡುವ ದಾರಿ ತಪ್ಪಿಸುವ ವ್ಯವಸ್ಥೆ ಮಾಡುದು ಬೇಡ. ಜನರಿಗೆ ಸತ್ಯವಿಚಾರ ತಿಳಿದಿದೆ. ಅನುದಾನ ತಂದಿದ್ದರೆ ದಾಖಲೆ ಕೊಟ್ಟರೆ ನಾವು ಒಪ್ಪಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.


ಈಗಿನ ಶಾಸಕರದ್ದು ಕನಿಷ್ಠ ಅನುದಾನ ಮಾತ್ರ:
ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಅವರು ಮಾತನಾಡಿ ಮಾಜಿ ಶಾಸಕರು ತಂದಿರುವ ಅನುದಾನವನ್ನು ಅದನ್ನು ನಮ್ಮದು ಅನ್ನುವ ರೀತಿಯಲ್ಲಿ ಮಾಡುವಾಗ ನಾವೆನು ಗೊತ್ತಿಲ್ಲದವರಲ್ಲ. ಸಾಹಿತಿಗಳ ಕೃತಿಯನ್ನು ಇನ್ನೊಬ್ಬ ಬರೆದರೆ ಅದು ಕೃತಿಚೌಕಿ ಎಂದು ಹೇಳುತ್ತಾರೆ. ಅದೇ ರೀತಿ ಈಗಿನ ಶಾಸಕರು ಮಾಡುತ್ತಿದ್ದಾರೆ. ನಮ್ಮ ಮಾಜಿ ಶಾಸಕರ ಅವಧಿಯಲ್ಲಿ ಶಿಲಾನ್ಯಾಸ ಉದ್ಘಾಟನೆ ನಿರಂತರವಾಗುತ್ತಿತ್ತು. ಇವತ್ತು ಅಂತಹದ್ದು ಕಾಣುತ್ತಿಲ್ಲ. ಕಳೆದ ಅವಧಿಯಲ್ಲಿ ಅನುದಾನ ಇತಿಹಾಸದಲ್ಲೇ ದಾಖಲೆ ಅನುದಾನವಾಗಿದೆ. ಈಗಿನ ಶಾಸಕರಿಂದ ಪುತ್ತೂರಿನ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಅನುದಾನ ಕಾಣುತ್ತಿದೆ. ಹಿಂದಿನ ಶಾಸಕರು ತಂದ ಅನುದಾನದ್ದೇ ಬಹುತೇಕ ಈಗ ಶಿಲಾನ್ಯಾಸ ಆಗುತ್ತಿದೆ ಎಂದು ಹೇಳಿದರು.
ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಚಂದ್ರ ಪೂಜಾರಿ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, 34 ನೆಕ್ಕಿಲಾಡಿ ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here