ಕೋಮು ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರೂ.25ಲಕ್ಷ ನೀಡಿದಂತೆ ರೈತರ ಆತ್ಮಹತ್ಯೆ ಸಂದರ್ಭದಲ್ಲೂ ಅಷ್ಟೇ ಪರಿಹಾರ ನೀಡುವಂತೆ ರೈತ ಸಂಘದಿಂದ ಸರಕಾರಕ್ಕೆ ಒತ್ತಾಯ

0

ಪುತ್ತೂರು: ಸುಳ್ಯದಲ್ಲಿ ಅಡಿಕೆಗೆ ಹಳದಿ ರೋಗ ಬಂದಿದೆ ಎಂದು ಮನನೊಂದು ಆಲೆಟ್ಟಿ ಗ್ರಾಮದ ಬಡ್ಡಡ್ಕದ ಜಗೀಶ್ ಚಳಗಾರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಸರಕಾರ ಮತ್ತು ಕೃಷಿ ವಿಜ್ಞಾನಿಗಳೆ ನೇರ ಹೊಣೆಯಾಗಿದ್ದಾರೆ. ಹಾಗಾಗಿ ಸರಕಾರ ಮೃತ ಕುಟುಂಬಕ್ಕೆ ರೂ.25ಲಕ್ಷ ಪರಿಹಾರ ನೀಡಬೇಕೆಂದು ಕೆ.ಎಸ್ ಪುಟ್ಟಣ್ಣಯ್ಯ ಅವರ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮತ್ತು ಸುಳ್ಯ ತಾಲೂಕು ಸಮಿತಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಒಸ್‌ವರ್ಲ್ಡ್ ಪ್ರಕಾಶ್ ಫೆರ್ನಾಂಡೀಸ್ ಅವರು ಮಾತನಾಡಿ ಎಷ್ಟೋ ವರ್ಷದ ಮೊದಲೇ ಕಾಣಿಸಿಕೊಂಡ ಅಡಿಕೆ ಹಳದಿ ರೋಗವನ್ನು ನಿಯಂತ್ರಿಸುವಲ್ಲಿ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಹಳದಿ ರೋಗದಿಂದಾಗಿ ಕೃಷಿಯನ್ನು ಕಳೆದು ಕೊಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಜಗದೀಶ್ ಕುಟುಂಬಕ್ಕೆ ಕೋಮು ಘರ್ಷಣೆಗಳಲ್ಲಿ ಮೃತಪಟ್ಟ ಕುಟುಂಬಳಿಗೆ ನೀಡಿದ ಪರಿಹಾರ ಮಾದರಿಯಲ್ಲಿ ಈ ಕುಟುಂಬಕ್ಕೂ ರೂ.25ಲಕ್ಷ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಸಿದ್ದಾರೆ. 9 ತಿಂಗಳ ಹಿಂದೆ ಇಡ್ಕಿದು ಗ್ರಾಮದ ರೈತ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಆ ಕುಟುಂಬಕ್ಕೆ ಸರಕಾರ ರೂ.5ಲಕ್ಷ ಮಾತ್ರ ಪರಿಹಾರ ನೀಡಿದೆ. ಅವರಿಗೂ ರೂ.25ಲಕ್ಷ ಪರಿಹಾರ ನೀಡಬೇಕು. ಈ ಕುರಿತು ನಾವು ಸರಕಾರವನ್ನು ಒತ್ತಾಯಿಸಲಿದ್ದೇವೆ ಎಂದರು.

ಪರ್ಯಾಯ ಬೆಳಿಗೆ ಸರಕಾರ ಹಣಕೊಡಲಿ:
ರೈತ ಸಂಘದ ರಾಜ್ಯ ಖಾಯಂ ಆಹ್ವಾನಿತರಾಗಿರುವ ಸನ್ನಿ ಡಿ ಸೋಜ ಅವರು ಮಾತನಾಡಿ ಸರಕಾರ ಸಂಶೋಧನೆಗೆಂದು ಕೋಟಿ ಕೋಟಿ ಹಣ ಖರ್ಚುಮಾಡುತ್ತಿದೆ. ಅದರ ಬದಲು ಮಾದರಿ ತೋಟಗಳನ್ನು ನಿರ್ಮಾಣ ಮಾಡಲು ಮತ್ತು ಪರ್ಯಾಯ ಬೆಳೆ ಬೆಳೆಸಲು ಎಕ್ರೆಗೆ ರೂ.25ಸಾವಿರದಂತೆ ರೈತರಿಗೆ ಕೊಡಲಿ. ಇದರ ಜೊತೆಗೆ ಬರ ಪರಿಹಾರದ ವಿಚಾರದಲ್ಲಿ ರೈತಕುಲವನ್ನು ಅವಮಾನ ಮಾಡಿರುವ ಹೇಳಿಕೆಯನ್ನು ನೀಡಿದ ಸಕ್ಕೆ ಸಚಿವ ಶಿವಾನಂದ ಪಾಟೀಲ್ ಅವರು ಅವರನ್ನು ಸರಕಾರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ನಾವೆನು ಗುಲಾಮರಲ್ಲ. ನಾವು ಸ್ವಾಭಿಮಾನಿಗಳು. ಸರಕಾರದ ಕೃಷಿ ನೀತಿಯಿಂದ ನಮ್ಮ ಸಾಲ ಹೆಚ್ಚಾಗಿದೆ. ಹಸಿರು ಕ್ರಾಂತಿ ಎಂದು ನಮ್ಮನ್ನು ಮೋಸ ಮಾಡಿದ್ದಾರೆ. ಒಟ್ಟಿನಲ್ಲಿ ಬಹುರಾಷ್ಟ್ರ ಕಂಪೆನಿಗಳನ್ನು ಉದ್ದಾರ ಮಾಡಲು ರೈತರನ್ನು ಬಲಿಕೊಡುತ್ತಿದ್ದಾರೆ ಎಂದರು.


ಪುತ್ತೂರು ಶಾಸಕರಿಗೆ ಅಭಿನಂದನೆ:
ರೈತರ ಪರ ವಿಧಾನಸಭೆಯಲ್ಲಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಧಿವೇಶನ ಸಂದರ್ಭವೇ ನಾನು ಅವರಿಗೆ ಕರೆ ಮಾಡಿ ರೈತರ ಸಮಸ್ಯೆಗಳನ್ನು ತಿಳಿಸಿದ್ದೆ. ಈ ಕುರಿತು ಅವರು ಸದನದಲ್ಲಿ ಮಾತನಾಡಿದ್ದಾರೆ ಎಂದು ಸುಳ್ಯ ತಾಲೂಕು ರೈತ ಸಂಘದ ಲೋಲಾಕ್ಷ ಭೂತಕಲ್ಲು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಂಜಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here