ಕಡಬ: ಬೈಕ್ ಪಾರ್ಕಿಂಗ್ ವಿಚಾರದಲ್ಲಿ ಚಕಮಕಿ-ಐಡಿಯಲ್ ಕಾಂಪ್ಲೆಕ್ಸ್‌ನ ಲಕ್ಷ್ಮಣ ರೈ ಆಸ್ಪತ್ರೆಗೆ ದಾಖಲು-ದೂರು

0

ಕಡಬ: ಬೈಕ್ ಪಾರ್ಕಿಂಗ್ ವಿಚಾರದಲ್ಲಿ ಎರಡು ಕಾಂಪ್ಲೆಕ್ಸ್‌ನ ಮಾಲಕರ ನಡುವೆ ವಾಗ್ವಾದ, ಘರ್ಷಣೆ ನಡೆದಿರುವ ಘಟನೆ ಎರಡು ದಿನಗಳ ಹಿಂದೆ ಕಡಬದಲ್ಲಿ ನಡೆದಿದ್ದು ಇದರ ವಿಡೀಯೋ ವೈರಲ್ ಆಗಿದೆ. ಈ ವೇಳೆ ದೂಡಿ ಹಾಕಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಐಡಿಯಲ್ ಕಾಂಪ್ಲೆಕ್ಸ್‌ನ ಲಕ್ಷ್ಮಣ ರೈ ಅವರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ವಿವರ:
ಕಡಬ ಐಡಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಐಡಿಯಲ್ ವಾಚ್ ವರ್ಕ್ಸ್‌ನ ಕೆಲಸಗಾರ ಕುಂತೂರು ಗ್ರಾಮದ ಅಡೀಲು ನಿವಾಸಿ ಪದ್ಮನಾಭ ರೈಯವರು ಜ.3ರಂದು ಬೆಳಿಗ್ಗೆ ಅವರ ಬೈಕನ್ನು ಅವರು ಕೆಲಸ ಮಾಡುವ ಐಡಿಯಲ್ ವಾಚ್ ವರ್ಕ್ಸ್‌ನ ಎದುರುಗಡೆ ಪಾರ್ಕಿಂಗ್ ಮಾಡಿದ್ದರು. ಆ ಬಳಿಕ ಐಡಿಯಲ್ ಕಾಂಪ್ಲೆಕ್ಸ್‌ನ ಎದುರುಗಡೆಯಲ್ಲಿರುವ ಟೋಮ್ ಬಜಾರ್ ವಾಣಿಜ್ಯ ಸಂಕೀರ್ಣದ ಮಾಲಕರಾದ ಕೆ.ಜೆ.ತೋಮಸ್‌ರವರ ಮಗ ಅಜೇಶ್‌ರವರು ಅವರ ಬೈಕನ್ನು ಪದ್ಮನಾಭ ರೈಯವರು ನಿಲ್ಲಿಸಿದ್ದ ಬೈಕ್‌ನ ಹತ್ತಿರವೇ ಹ್ಯಾಂಡ್‌ಲಾಕ್ ಮಾಡಿ ನಿಲ್ಲಿಸಿದ್ದಾರೆ. ಇದಕ್ಕೆ ಐಡಿಯಲ್ ಕಾಂಪ್ಲೆಕ್ಸ್ ಹಾಗೂ ಐಡಿಯಲ್ ವಾಚ್ ವರ್ಕ್ಸ್‌ನ ಮಾಲಕರಾದ ಲಕ್ಷ್ಮಣ್ ರೈಯವರು ಬೈಕ್‌ಗೆ ಹ್ಯಾಂಡ್‌ಲಾಕ್ ಹಾಕಿ ನಿಲ್ಲಿಸಿದರೆ ನಮಗೆ ತೊಂದರೆಯಾಗುತ್ತದೆ ಎಂದಿದ್ದಾರೆ. ಬಳಿಕ ಈ ವಿಚಾರಕ್ಕೆ ಸಂಬಂಧಿಸಿ ಅಜೇಶ್, ಅವರ ಸಹೋದರರು ಮತ್ತು ಇನ್ನೊಂದು ತಂಡದ ಐಡಿಯಲ್ ಕಾಂಪ್ಲೆಕ್ಸ್‌ನ ಮಾಲಕ ಲಕ್ಷ್ಮಣ್ ರೈ, ಸಿಬ್ಬಂದಿ ಪದ್ಮನಾಭ ರೈಯವರ ನಡುವೆ ಮಾತಿನ ಚಕಮಕಿ, ಅವಾಚ್ಯ ಪದಗಳ ಬಳಕೆಯಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಲಕ್ಷ್ಮಣ ರೈಯವರನ್ನು ದೂಡಿ ಹಾಕಲಾಗಿದೆ ಎಂದು ಹೇಳಲಾಗಿದೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಲಕ್ಷ್ಮಣ ರೈ ಆಸ್ಪತ್ರೆಗೆ ದಾಖಲು:
ಘಟನೆ ಬಳಿಕ ಐಡಿಯಲ್ ಕಾಂಪ್ಲೆಕ್ಸ್‌ನ ಮಾಲಕ ಲಕ್ಷ್ಮಣ ರೈ ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ, ಟೋಮ್ ಬಜಾರ್ ವಾಣಿಜ್ಯ ಸಂಕೀರ್ಣದ ಮಾಲಕರಾದ ಕೆ.ಜೆ.ತೋಮಸ್ ಅವರ ಮಗ ಅಜೇಶ್ ಹಾಗೂ ಆತನ ಸಹೋದರರು ದೂಡಿಹಾಕಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಕಡಬ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಿಕೊಂಡಿರುವ ಕಡಬ ಪೊಲೀಸರು ಇದೊಂದು ಅಸಂಜ್ಞೆಯ ಅಪರಾಧವಾಗಿದೆ. ಈ ಬಗ್ಗೆ ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಬಂದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಬಿ.ಲಕ್ಷ್ಮಣ ರೈಯವರಿಗೆ ಹಿಂಬರಹ ನೀಡಿದ್ದಾರೆ.

LEAVE A REPLY

Please enter your comment!
Please enter your name here