ಜ.15ರೊಳಗೆ ಅನುಷ್ಠಾನಿಸದಿದ್ದರೆ ಯೋಜನೆ ಕೈತಪ್ಪುವ ಭೀತಿ
ಉಪ್ಪಿನಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆಯ್ದ ಗ್ರಾ.ಪಂ.ನಲ್ಲಿ ನರೇಗಾ ಉದ್ಯೋಗ ಕಾರ್ಡ್‌ಗಳನ್ನು ಹೊಂದಿರುವ ಕುಟುಂಬದ ಮೂರು ವರ್ಷದೊಳಗಿನ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರಗಳನ್ನು ‘ಕೂಸಿನ ಮನೆ’ಯನ್ನು ತೆರೆಯಲು ಸರಕಾರ ಆದೇಶ ಹೊರಡಿಸಿದ್ದು, ಇದಕ್ಕೆ 34 ನೆಕ್ಕಿಲಾಡಿ ಗ್ರಾ.ಪಂ. ಕೂಡಾ ಆಯ್ಕೆಯಾಗಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಈಗ ಪ್ರಸ್ತಾಪಿಸಿರುವ ಕಟ್ಟಡದ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಅವರ ಅಧ್ಯಕ್ಷತೆಯಲ್ಲಿ ಜ.4ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಶಿಶುಪಾಲನ ಕೇಂದ್ರದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪುತ್ತೂರು ತಾ.ಪಂ.ನ ಸಹಾಯಕ ನಿರ್ದೇಶಕಿ ಶ್ರೀಮತಿ ಶೈಲಜಾ ಭಟ್, ದುಡಿಯಲು ಹೋಗುವ ಸಣ್ಣ ಮಕ್ಕಳಿರುವ ತಾಯಂದಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದೊಂದು ಉತ್ತಮ ಯೋಜನೆಯಾಗಿದೆ. ನರೇಗಾ ಉದ್ಯೋಗ ಚೀಟಿ ಇದ್ದ ಕುಟುಂಬದವರು ಈ ಕೂಸಿನ ಮನೆಯಲ್ಲಿ 6 ತಿಂಗಳಿನಿಂದ ಮೂರು ವರ್ಷದವರೆಗಿನ ಮಕ್ಕಳನ್ನು ಬಿಟ್ಟು ಹೋಗಬಹುದು. ಇದಕ್ಕಾಗಿ ೩೪ ನೆಕ್ಕಿಲಾಡಿಯ ಆದರ್ಶನಗರದಲ್ಲಿ ಗ್ರಾ.ಪಂ. ವಸತಿ ಗೃಹವನ್ನು ಆಯ್ಕೆ ಮಾಡಲಾಗಿದ್ದು, ವಿದ್ಯುತ್ ದೀಪಗಳ ವ್ಯವಸ್ಥೆ, ಗೋಡೆಗೆ ಪೈಟಿಂಗ್ ಮಾಡಲಾಗಿದೆ. ಆಟಿಕೆ ಸಾಮನುಗಳನ್ನು ಖರೀದಿಸಲಾಗಿದೆ. ದಿನದಲ್ಲಿ ಆರು ಗಂಟೆ ಮೂವತ್ತು ನಿಮಿಷಗಳ ಕಾಲ ಇದು ಕಾರ್ಯಾಚರಿಸಲಿದ್ದು, ಇಬ್ಬರು ಕೇರ್‌ಟೇಕರ್‌ಗಳು ಮಕ್ಕಳನ್ನು ನೋಡಿಕೊಳ್ಳಲಿದ್ದಾರೆ. 34 ನೆಕ್ಕಿಲಾಡಿ ಗ್ರಾಮದಲ್ಲಿ ಈಗಾಗಲೇ ಆರು ಮಂದಿಗೆ ಕೇರ್ ಟೇಕರ್ ತರಬೇತಿ ನೀಡಲಾಗಿದೆ. ಒಬ್ಬರಿಗೆ 100 ದಿನಗಳ ಕೆಲಸದಂತೆ ಈ ಆರು ಮಂದಿಗೆ ಇದರಲ್ಲಿ ಕೆಲಸ ನೀಡಲಾಗುವುದು. ಕೇಂದ್ರದಲ್ಲಿ ಇಬ್ಬರು ಕೇರ್‌ಟೇಕರ್ ಇರಲೇ ಬೇಕು ಎಂದು ವಿವರಿಸಿದರು.
ಆಗ ಗ್ರಾ.ಪಂ. ಸದಸ್ಯ ಪ್ರಶಾಂತ್ ನೆಕ್ಕಿಲಾಡಿ ಮಾತನಾಡಿ, ಈ ಆಯ್ಕೆ ಮಾಡಿರುವ ಕಟ್ಟಡ ಹಳೆಯ ಕಟ್ಟಡ. ಇದು ಸುಸ್ಥಿತಿಯಲ್ಲಿಲ್ಲ. ಅಲ್ಲಿ ಹಾವು ಬರುತ್ತಂತೆ ಈಗ ಅಲ್ಲಿರುವ ಗ್ರಂಥಾಲಯದ ಗ್ರಂಥಪಾಲಕಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ಶೌಚಾಲಯದ ಗುಂಡಿ ತುಂಬುತ್ತಿದೆ. ಓರ್ವ ಮಗುವಿನ ತಂದೆಯಾಗಿ ನಾನು ನನ್ನ ಮಗನನ್ನು ಇಲ್ಲಿಗೆ ಕಳುಹಿಸಲಾರೆ ಎಂದರು. ಕಟ್ಟಡ ಸುಸ್ಥಿತಿಯಲ್ಲಿ ಇರದ ಬಗ್ಗೆ ಗ್ರಾ.ಪಂ. ಸದಸ್ಯರಾದ ಸ್ವಪ್ನ ಜೀವನ್, ವಿಜಯಕುಮಾರ್, ಆಶಾ ಕಾರ್ಯಕರ್ತೆ ಅಮಿತಾ ಹರೀಶ್ ಧ್ವನಿಗೂಡಿಸಿದರು.
ಆಗ ಪಿಡಿಒ ಸತೀಶ ಬಂಗೇರ ಮಾತನಾಡಿ, ಹಲವು ವರ್ಷಗಳಿಂದ ಅದೇ ವಸತಿ ಸಂಕೀರ್ಣದಲ್ಲಿ ಕುಟುಂಬವೊಂದು ವಾಸ ಮಾಡುತ್ತಿದೆ. ಅಲ್ಲದೇ, ಗ್ರಂಥಾಲಯ, ಸಂಜೀವಿನಿ ಒಕ್ಕೂಟದವರ ಕಚೇರಿ ಇದೆ. ಕೂಸಿನ ಮನೆಗೆ ಬೇಕಾದಂತಹ ಕಟ್ಟಡ ಇರುವುದು ಅಲ್ಲೇ ಎಂದರು. ಆಗ ಬೀತಲಪ್ಪುವಿನಲ್ಲಿ ಕಟ್ಟಡವೊಂದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ, ಕೂಸಿನ ಮನೆಗೆ ಒಂದು ಅಡುಗೆ ಕೋಣೆ, ಇನ್ನೊಂದು ಹಾಲ್ ಹೀಗೆ ಎರಡು ಕೊಠಡಿಗಳಿದ್ದ ಕಟ್ಟಡ ಬೇಕು. ಮತ್ತೆ ಶೌಚಾಲಯ ಇರಬೇಕು. ಆದರೆ ಅಲ್ಲಿ ಅದೆಲ್ಲಾ ಇಲ್ಲ. ಇದನ್ನು ಜ.೧೫ರೊಳಗೆ ಪ್ರಾರಂಭಿಸಬೇಕು ಅಂತ ಇದೆ. ಅಷ್ಟರೊಳಗೆ ಬೇರೆ ಕಟ್ಟಡ ನಿರ್ಮಿಸಲೂ ಸಾಧ್ಯವಿಲ್ಲ. ಏನಿದ್ದರೂ, ಇನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿಟ್ಟೇ ಅದನ್ನೆಲ್ಲಾ ಮಾಡಬೇಕಷ್ಟೆ. ಅದು ಮಾರ್ಚ್‌ನಲ್ಲಷ್ಟೇ ಸಾಧ್ಯ. ಆದ್ದರಿಂದ ಈಗ ಸದ್ಯಕ್ಕೆ ಅದೇ ಕಟ್ಟಡದಲ್ಲಿ ಮಾಡಲು ನಿರ್ಧರಿಸಿದ್ದು ಎಂದರು.
ಗ್ರಾ.ಪಂ. ಸದಸ್ಯ ಪ್ರಶಾಂತ್ ಎನ್. ಮಾತನಾಡಿ, ಅಲ್ಲಿ ಮಕ್ಕಳಿಗೆ ತೊಟ್ಟಿಲಿನ ವ್ಯವಸ್ಥೆ ಇದೆಯಾ? ನಾವು ಕೊಡುವ ಆಹಾರವನ್ನು ಅಲ್ಲಿ ಕೊಡಲಾಗುತ್ತಿದೆಯಾ ಎಂದು ಪ್ರಶ್ನಿಸಿದರಲ್ಲದೆ, ಈ ಯೋಜನೆ ಗ್ರಾ.ಪಂ.ನ ಸಹಕಾರದಲ್ಲಿ ನಡೆಯುವಂತದ್ದು, ಆದ್ದರಿಂದ ಇದಕ್ಕೆ ರಾಜ್ಯ ಸರಕಾರದ ಯೋಜನೆ ಅಂತ ಹೇಳುವುದು ಯಾಕೆ? ಗ್ರಾ.ಪಂ.ನ ಯೋಜನೆ ಅಂತ ಹೇಳಬಹುದಲ್ಲವೇ ಎಂದರು. ಅದಕ್ಕೆ ಶೈಲಜಾ ಭಟ್ ಉತ್ತರಿಸಿ, ಇಲ್ಲಿ ತೊಟ್ಟಿಲಿನ ವ್ಯವಸ್ಥೆ ಇದೆ. ಕೇಂದ್ರದ ಮೇಲ್ವಿಚಾರಣಾ ಸಮಿತಿಯು ಸಲ್ಲಿಸುವ ಬೇಡಿಕೆಯನ್ನಾಧರಿಸಿ, ಆಹಾರದ ಮೆನು ತಯಾರಿಸಲಾಗುತ್ತದೆ. ಅದರಂತೆ ಆಹಾರ ನೀಡಲಾಗುತ್ತದೆ. ನೀವು ಮನೆಯಲ್ಲಿ ಕೊಡುವ ಆಹಾರ ಇಲ್ಲದಿದ್ದರೂ, ಉತ್ತಮ ಪ್ರೋಟೀನ್, ಕ್ಯಾಲೋರಿಯುಕ್ತವಾದ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ. ಶುಚಿತ್ವಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪ್ಯಾಂಪರ‍್ಸ್‌ಗಳ ಬದಲಾವಣೆಯನ್ನು ಮಾಡಲಾಗುತ್ತದೆ. ಇದನ್ನೆಲ್ಲ ಸರಕಾರವೇ ಒದಗಿಸುತ್ತದೆ. ಮಧ್ಯಾಹ್ನ ತಾಯಿ ಬಂದು ಹಾಲುಣಿಸಲು ಅವಕಾಶ ಇದೆ ಎಂದರು. ಆಗ ಪ್ರಶಾಂತ್ ಎನ್. ಮಾತನಾಡಿ, ಕೂಲಿ ಕೆಲಸಕ್ಕೆ ಎಲ್ಲೋ ದೂರ ಹೋದವರು ಮಧ್ಯಾಹ್ನ ಬಂದು ಮಗುವಿಗೆ ಹಾಲುಣಿಸಲು ಸಾಧ್ಯವಾಗುವ ಮಾತಲ್ಲ. ಮತ್ತೆ ಈಗ ಮಾಡಿರುವ ಕೇಂದ್ರಕ್ಕೆ ಮಕ್ಕಳನ್ನು ಕರೆತರಲು ದೂರದವರು ರಿಕ್ಷಾ ಬಾಡಿಗೆ ಮಾಡಿಕೊಂಡು ಬರಬೇಕಾಗುತ್ತದೆ. ಇಲ್ಲಿ ಅವರು ದುಡಿದು ಗಳಿಸುವ ಹಣಕ್ಕಿಂತ ಜಾಸ್ತಿ ಖರ್ಚು ಬರುತ್ತದೆ. ಆದ್ದರಿಂದ ನೆಕ್ಕಿಲಾಡಿ ಪೇಟೆ ಸಮೀಪವೇ ಇದನ್ನು ಆರಂಭಿಸಬೇಕು ಎಂದರು.
ಆಗ ಶೈಲಜಾ ಭಟ್ ಮಾತನಾಡಿ, ಇದೊಂದು ಉತ್ತಮ ಯೋಜನೆ. ಜ.15ರೊಳಗೆ ಇದನ್ನು ಅನುಷ್ಠಾನಿಸದೇ ಹೋದರೆ ಮತ್ತೆ ಅದು ಇಲ್ಲಿಗೆ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸೋಣ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಜಾತ ಮಾತನಾಡಿ, ಯಾವುದೇ ಒಂದು ಯೋಜನೆಯನ್ನು ಪ್ರಥಮವಾಗಿ ಅನುಷ್ಠಾನ ಮಾಡುವಾಗ ಎಲ್ಲಾ ಸಮರ್ಪಕವಾಗಿ ಇರಲು ಸಾಧ್ಯವಿಲ್ಲ. ಹಂತ ಹಂತವಾಗಿ ಅದು ಅಭಿವೃದ್ಧಿ ಹೊಂದುತ್ತದೆ. ಅಂಗನವಾಡಿಗಳು ಕೂಡಾ ಅಂಗಳಗಳಿಂದ ಆರಂಭವಾದಂತದ್ದು, 34 ನೆಕ್ಕಿಲಾಡಿ ಗ್ರಾಮಕ್ಕೆ ಸಿಕ್ಕಿರುವ ಈ ಯೋಜನೆಯನ್ನು ಈಗ ಬೇಡವೆಂದು ಕೈಬಿಟ್ಟರೆ, ಮತ್ತದು ಬೇಕು ಅಂತ ಹೇಳಿದಾಗ ಅಷ್ಟು ಸುಲಭದಲ್ಲಿ ಸಿಗಲು ಸಾಧ್ಯವಿಲ್ಲ ಎಂದರಲ್ಲದೇ, ಪುತ್ತೂರು ತಾಲೂಕಿನ ಗ್ರಾಮವೊಂದರಲ್ಲಿ ಅಂದು ಬೇಡ ಅಂತ ಅಂಗನವಾಡಿಯನ್ನು ಕೈಬಿಟ್ಟವರು ಈಗ ಬೇಕು ಅಂಗನವಾಡಿ ಬೇಕು ಅಂತ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಲ್ಲಿಗೆ ಇನ್ನೂ ಅಂಗನವಾಡಿ ಲಭಿಸಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು.
ಆಗ್ ಪ್ರಶಾಂತ್ ಎನ್. ಮಾತನಾಡಿ, ಕಾಟಾಚಾರಕ್ಕೆ ಶಿಶು ಪಾಲನಾ ಕೇಂದ್ರವನ್ನು ಮಾಡುವುದು ಬೇಡ. ಸೂಕ್ತ ವ್ಯವಸ್ಥೆ ಕಲ್ಪಿಸಿ ಮಾಡಿ ಎಂದರು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಮಾತನಾಡಿ, ಇದಕ್ಕಾಗಿ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸೋಣ. ಬಾಡಿಗೆಗೆ ಎಲ್ಲಿಯಾದರೂ ಕಟ್ಟಡ ಸಿಗುತ್ತದೋ ನೋಡೋಣ. ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡು ಮುಂದುವರಿಯೋಣ ಎಂದು ಚರ್ಚೆಗಳಿಗೆ ತೆರೆ ಎಳೆದರು.
ಒಟ್ಟಿನಲ್ಲಿ ಈ ಯೋಜನೆಯ ಅನುಷ್ಠಾನದ ಬಗ್ಗೆ ಸರಿಯಾದ ನಿರ್ಧಾರಕ್ಕೆ ಬರಲಾಗದೇ ಸಭೆಯು ಕೊನೆಗೊಂಡಿತು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ತುಳಸಿ, ವೇದಾವತಿ, ಗೀತಾ, ರತ್ನಾವತಿ, ನೆಕ್ಕಿಲಾಡಿಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕಾವೇರಿ, ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಆನ್ಸಿ ಮಿನೇಜಸ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೇಖಾ, ಸಂಜೀವಿನಿ ಒಕ್ಕೂಟದ ಪಾವನ, ಜಮೀಳಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕೇರ್‌ಟೇಕರ‍್ಸ್‌ಗಳು ಉಪಸ್ಥಿತರಿದ್ದರು.