ಉಪ್ಪಿನಂಗಡಿ : 30 ಲೀ ಸೀಮೆಎಣ್ಣೆ ಇದೆ. 900 ಕೊಟ್ಟರೆ ಈಗ ತಂದು ಕೊಡುವೆನೆಂದು ಹೇಳಿ ಹಣ ಪಡೆದುಕೊಂಡು ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ಬ್ಯಾಂಕ್ ರಸ್ತೆಯಲ್ಲಿ ಕತ್ತರಿ ಸಾಣೆ ಮಾಡುವ ಸಾದಿಕ್ ಎಂಬವರ ಬಳಿಗೆ ಮಂಗಳವಾರದಂದು ಬಂದ ವ್ಯಕ್ತಿಯೋರ್ವ ತಾನು ಖಾಸಗಿ ಬಸ್ಸಿನ ಡ್ರೈವರ್ . ತನ್ನ ಮನೆ ಬೆಳ್ತಂಗಡಿ ತಾಲೂಕಿನ ನಾಳ ಎಂಬಲ್ಲಿ. ನನ್ನ ಪರಿಚಿತರ ಬಳಿ 30ಲೀ ಸೀಮೆ ಎಣ್ಣೆ ಇದೆ. ಲೀಟರ್ ವೊಂದಕ್ಕೆ 30 ರೂಪಾಯಿಯಂತೆ 900 ರೂಪಾಯಿ ಕೊಟ್ಟರೆ ಈಗಲೇ ಸೀಮೆಎಣ್ಣೆ ತಂದುಕೊಡುವೆನೆಂದು ನಂಬಿಸಿ ಸಾದಿಕ್ ರವರಿಂದ 900 ರೂಪಾಯಿ ಪಡೆದುಕೊಂಡು ಹೋದಾತ ಗುರುವಾರವಾದರೂ ಸೀಮೆಎಣ್ಣೆ ತಂದುಕೊಡಲಿಲ್ಲ.
ತಾನು ವಂಚನೆಗೆ ಒಳಗಾದೆನೆಂದು ಅರಿವಾದೊಡನೆ ಪರಿಸರದ ಹೂವಿನ ಅಂಗಡಿಯ ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ಪರಿಶೀಲಿಸಿದ ಅವರು, ತನ್ನನ್ನು ವಂಚಿಸಿದ ವ್ಯಕ್ತಿಯ ಪೋಟೋವನ್ನು ಸಂಗ್ರಹಿಸಿ ಆತನಿಂದ ಇನ್ನಷ್ಟು ಮಂದಿ ವಂಚನೆಗೆ ಒಳಗಾಗದಿರಲಿ ಎಂಬ ಆಶಯದೊಂದಿಗೆ ಘಟನೆಯನ್ನು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.
ಮಾತಿನ ಮೋಡಿಯಲ್ಲಿ ವಂಚನೆ
ಅದೇ ದಿನ ಉಪ್ಪಿನಂಗಡಿಯ ಬೇಕರಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ 200 ಬೆಲೆಯ ತಿಂಡಿತಿನಸು ಖರೀದಿಸಿ, ಬಿಲ್ ಪಾವತಿಸುವ ಮುನ್ನಾ , ಇಳಂತಿಲ ತಿರುವಿನಲ್ಲಿ ಭೀಕರ ಅಪಘಾತವಾಗಿದೆ.. ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳ ಭೀಕರತೆಯಿಂದ ಕೂಡಿದೆ. ಅದನ್ನು ನೋಡಿಯೇ ನನ್ನ ಮನಸ್ಸು ಕೆಟ್ಟಿದೆ ಎಂದೆಲ್ಲಾ ವರ್ಣಿಸಿ , ಸರಿ ನನಗೆ ಉಳಿದ ಮೊತ್ತ ಕೊಡಿ ಎಂದು ಕೈ ಚಾಚಿದ. ನೀವು ಹಣ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದಾಗ , ಹೌದು 500 ರೂಪಾಯಿ ಕೊಟ್ಟಿದ್ದೆನಲ್ಲಾ. ಉಳಿಕೆ ಹಣ 300 ರೂಪಾಯಿ ನೀವು ನನಗೆ ಕೊಡಬೇಕಾಗಿದೆ ಎಂದು ವಾದಿಸುತ್ತಾನೆ. ಅಪಘಾತದ ಮಾಹಿತಿ ಪಡೆಯುವ ಸಮಯದಲ್ಲಿ ಹಣಪಡೆದಿರುವುದನ್ನು ಮರೆತಿರಬಹುದೆಂದು ಭಾವಿಸಿ ಆತನಿಗೆ ತಿಂಡಿಯೊಂದಿಗೆ 300 ರೂ ಹಣವನ್ನು ಕೊಟ್ಟು, ಅಪಘಾತ ನಡೆದಿದೆ ಎನ್ನಲಾದ ಸ್ಥಳಕ್ಕೆ ಹೋದಾಗ ಅಲ್ಲಿ ಯಾವುದೇ ಅಪಘಾತವಾಗಿರಲಿಲ್ಲ. ತಾನು ಮೋಸ ಹೋದೆನೆಂದು ತಿಳಿದು ಅಂಗಡಿಯೊಳಗಿನ ಸಿಸಿ ಕ್ಯಾಮಾರ ಪರಿಶೀಲಿಸಿದಾಗ ಆತ ಹಣ ನೀಡದೆ ಅಪಘಾತದ ಕಲ್ಪಿತ ಘಟನೆಯ ಮೂಲಕ ಮಾತಿನ ಮೋಡಿಯಲ್ಲೇ 200 ರೂ ಮೌಲ್ಯದ ತಿಂಡಿ, 300 ರೂಪಾಯಿ ನಗದು ಸೇರಿ 500 ರೂಪಾಯಿ ವಂಚಿಸಿರುವುದು ದೃಢವಾಗಿತ್ತು.ಸಣ್ಣ ಸಣ್ಣ ವ್ಯಾಪಾರಿಗಳನ್ನು ಸಣ್ಣ ಮೊತ್ತದಲ್ಲಿ ವಂಚಿಸುವ ಘಟನಾವಳಿಯ ಬಗ್ಗೆ ವ್ಯಾಪಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.