ವೈದ್ಯಾಧಿಕಾರಿ ಎಡವಟ್ಟು : ಜ್ವರದ ಹಿನ್ನಲೆ ಆಸ್ಪತ್ರೆಗೆ ಬಂದ ಶಾಲಾ ಬಾಲಕಿ ಗರ್ಭಿಣಿ ಎಂದು ವರದಿ!

0

ಕಡಬ:ತೀವ್ರ ಜ್ವರದ ಹಿನ್ನೆಲೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಘಟನೆ ಕಡಬ ಸಮೀಪದ ಪಂಜದಲ್ಲಿ ನಡೆದಿದೆ.


ವೈದ್ಯಾಧಿಕಾರಿಯು ಈ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ ಸಾರ್ವಜನಿಕವಾಗಿ ಹರಡಿದ್ದು ನಮ್ಮ ಕುಟುಂಬಕ್ಕೆ ಭಾರೀ ಮಾನಸಿಕ ನೋವನ್ನುಂಟು ಮಾಡಿದೆ. ನನ್ನ ಮಗಳು ಈಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಬಾಲಕಿಯ ಹೆತ್ತವರು ದಾಖಲೆಯೊಂದಿಗೆ ದೂರು ನೀಡಿದ್ದಾರೆ.


ಶಾಲೆಯ ಸಹಪಾಠಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಮುದಾಯದವರು ಈ ಕುರಿತು ಮಾತು ಮಾತಿನಲ್ಲಿ ಬಾಲಕಿಯನ್ನು ಮಾನಹಾನಿ ಮಾಡುತ್ತಿದ್ದಾರೆ. ಅಪ್ರಾಪ್ತ ಮಗಳಿಗೆ ತಪ್ಪು ವೈದ್ಯಕೀಯ ಮಾಹಿತಿ ನೀಡುವುದು ಹಾಗೂ ಅವಳ ಖಾಸಗಿ ಮಾಹಿತಿಯನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು POSCO Act ಹಾಗೂ ಐ.ಪಿ.ಸಿ. ಸೆಕ್ಷನ್ ಗಳ ಅಡಿಯಲ್ಲಿ ಗಂಭೀರ ಅಪರಾಧವಾಗಿರುತ್ತದೆ. ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ ಬಾಲಕಿ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ಹಿನ್ನೆಲೆ:
ಕಡಬ ತಾಲೂಕಿಗೆ ಒಳಪಟ್ಟ ಗ್ರಾಮವೊಂದರ 13 ವರ್ಷದ ಬಾಲಕಿಯನ್ನು ಜ್ವರದ ಹಿನ್ನೆಲೆ ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜುಲೈ 1 ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ಕರ್ತವ್ಯನಿರತ ವೈದ್ಯಾಧಿಕಾರಿ ಡಾ: ಮಂಜುನಾಥ್ ಅವರು ಬಾಲಕಿಯನ್ನು ತಪಾಸಣೆ ಮಾಡಿ ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್ ಸ್ಲಿಪ್ ನೀಡಿದ್ದರು.
ತಪಾಸಣೆಯ ನಂತರ ಹೊರ ರೋಗಿಗಳ ದಾಖಲಾತಿಯಲ್ಲಿ UPT Positive (ಗರ್ಭಿಣಿ) ಎಂದು ಬರೆದಿದ್ದು ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು . ಈ ವರದಿಯಿಂದ ತಬ್ಬಿಬ್ಬುಗೊಂಡ ಹೆತ್ತವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಪರೀಕ್ಷೆ ಮಾಡಿಸಿದಾಗ ಮಗಳು ಗರ್ಭಿಣಿಯಾಗಿಲ್ಲ ಎಂಬ ವರದಿ ಲಭಿಸಿತ್ತು. ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿಯ ವೈದ್ಯರೂ ಕೂಡಾ ಗರ್ಭಧಾರಣೆಯ ಕುರಿತು ಯಾವುದೇ ದೃಢೀಕರಣ ನೀಡಿಲ್ಲ ಎಂದು ತಿಳಿದು ಬಂದಿದೆ.

ದೂರಿನ ಬೆನ್ನಲ್ಲೇ ಪರಿಶೀಲನೆಗೆ ಬಂದ ಅಧಿಕಾರಿಗಳ ತಂಡ:
ದೂರಿನ ಗಂಭೀರತೆ ಅರಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅವರು ತನಿಖೆಗಾಗಿ ತಂಡವನ್ನು ರಚಿಸಿ ಪಂಜಕ್ಕೆ ಕಳುಹಿಸಿದ್ದು, ಜುಲೈ10 ರಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರ್.ಸಿ.ಹೆಚ್ ( ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ) ಡಾ ರಾಜೇಶ್, ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ. ದಿಲ್ಷಾದ್ , ಜಿಲ್ಲಾ ಶುಶ್ರೂಷಣಾಧಿಕಾರಿ ಜೆಸಿ ಕೆವಿ , ತಾಲೂಕು ಆರೋಗ್ಯಾಧಿಕಾರಿ ತ್ರಿಮೂರ್ತಿ ತಂಡದಲ್ಲಿದ್ದರು.


ಪೊಲೀಸರಿಗೂ ದೂರು:
ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಕೇಸು ದಾಖಲಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಕೂಲಿ ಕಾರ್ಮಿಕನಾಗಿರುವ ಬಾಲಕಿಯ ತಂದೆ ವೈದ್ಯಾಧಿಕಾರಿಯ ವರದಿಯಿಂದ ತಬ್ಬಿಬ್ಬುಗೊಂಡು ಸಹಾಯಕ್ಕಾಗಿ ಕಡಬದ ಭೀಮ್ ಆರ್ಮಿ ಸಂಘಟನೆಯನ್ನು ಸಂಪರ್ಕಿಸಿದ್ದರು. ಅವರಿಗೆ ಸೂಕ್ತ ಮಾಹಿತಿ ನೀಡಿ ದೂರು ನೀಡುವ ಬಗ್ಗೆ ತಿಳಿಸಿದ್ದೇವೆ .ಅದರಂತೆ ದೂರು ನೀಡಲಾಗಿದೆ. ಸಂಘಟನೆಯ ಪ್ರಮುಖರೂ ಬಾಲಕಿ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದೇವೆ. ಸುಳ್ಳು ವರದಿ ನೀಡಿ ಬಾಲಕಿಯ ಮಾನಹಾನಿಗೆ ಕಾರಣವಾದ ವೈದ್ಯಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆ ಹೊರಾಟದ ಹಾದಿ ಹಿಡಿಯಲಿದೆ –ರಾಘವ ಕಳಾರ, ಜಿಲ್ಲಾ ಉಪಾಧ್ಯಾಕ್ಷರು,ಭೀಮ್ ಆರ್ಮಿ ಸಂಘಟನೆ

LEAVE A REPLY

Please enter your comment!
Please enter your name here