ಪೇಟೆಯಲ್ಲಿ ಪಾರ್ಕಿಂಗ್ ಸೌಲಭ್ಯ – ಗ್ರಾಮಾಂತರ ವಾರ್ಡ್‌ಗಳ ಅಭಿವೃದ್ಧಿಗೆ ಆದ್ಯತೆ

0

ನಗರಸಭೆ ಬಜೆಟ್ ತಯಾರಿ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಸಲಹೆ

ಪುತ್ತೂರು: ಪುತ್ತೂರು ಪೇಟೆಯಲ್ಲಿ ಅಗತ್ಯವಾಗಿ ಬೇಕಾಗಿರುವ ಪಾರ್ಕಿಂಗ್ ಸೌಲಭ್ಯ, ರಸ್ತೆಗಳ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯ, ನಗರಸಭೆಗೆ ಸೇರ್ಪಡೆಗೊಂಡ ಗ್ರಾಮಾಂತರ ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಪುತ್ತೂರು ನಗರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಸಲಹೆ ನೀಡಿದ್ದಾರೆ.ನಗರಸಭೆಯ 2024-25ನೇ ಸಾಲಿನ ಆಯವ್ಯಯ ತಯಾರಿಸುವ ಸಲುವಾಗಿ ಸಾರ್ವಜನಿಕರ ಸಲಹೆ,ಸೂಚನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಜ.6ರಂದು ಪೂರ್ವಭಾವಿ ಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಪಾಯಕಾರಿ ಮರ ತೆರವಿಗೆ ಸಂಬಂಧಿಸಿ ಪತ್ರಿಕಾ ಪ್ರಕಟಣೆ ನೀಡಲಾಗುವುದು. ಜೊತೆಗೆ ಮುಖ್ಯರಸ್ತೆ, ಒಳರಸ್ತೆ ಡಾಮರು ಪ್ಯಾಚ್‌ವರ್ಕ್ ಕಾಮಗಾರಿ ನಡೆಯುತ್ತಿದೆ. ನಗರದ ದೊಡ್ಡ ತೋಡುಗಳ ಹೂಳೆತ್ತುವಿಕೆಗೆ ಮಾರ್ಚ್ ತಿಂಗಳ ಒಳಗೆ ಟೆಂಡರ್ ಮುಗಿಸಿ ಮಳೆಗಾಲ ಪ್ರಾರಂಭ ಆಗುವ ಮುಂದೆಯೇ ಕೆಲಸ ಪೂರ್ಣಗೊಳ್ಳಲಿದೆ. ನಗರಭೆಗೆ ಸೇರಿದ ಗ್ರಾಮಾಂತರ ವಾರ್ಡ್‌ಗಳಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಚರಂಡಿ ಮತ್ತು ರಸ್ತೆ ವ್ಯವಸ್ಥೆ ಅಭಿವೃದ್ದಿ ಪಡಿಸಲು ಮುಂದಿನ ಅನುದಾನದ ಕುರಿತು ಚರ್ಚೆ ಮಾಡಿ ಸಭೆಯಲ್ಲಿ ಇಡಲಾಗುವುದು.ಮುಂದಿನ ಕೆಲವು ತಿಂಗಳಲ್ಲಿ ಅಧ್ಯಕ್ಷರ ಆಡಳಿತ ಬರಬಹುದು.ಆಗ ಈ ಕುರಿತು ಪ್ರಸ್ತಾಪ ಮಾಡುತ್ತೇವೆ.ನಗರಸಭೆಯ ವಾರ್ಡ್‌ಗಳಲ್ಲಿ ಸಂಗ್ರಹವಾಗಿರುವ ವೇಸ್ಟ್ ಮಣ್ಣಿನ ರಾಶಿಯನ್ನು ವಾರದ ಒಂದು ದಿನ ನಗರಸಭೆ ಜೆಸಿಬಿ ಮತ್ತು ಟಿಪ್ಪರ್ ಬಳಸಿ ತೆರವು ಮಾಡಲಾಗುವುದು ಎಂದು ಪೌರಾಯುಕ್ತರು ಹೇಳಿದರು.ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ವಿವಿಧ ಸಲಹೆ ಸೂಚನೆ ನೀಡಿದರು. ನಗರಸಭೆ ಸದಸ್ಯ ಸುಂದರ ಪೂಜಾರಿ ಬಡಾವು ಮಾತನಾಡಿ ರಾಜಕಾಲುವೆಗೆ ಎರಡು ವರ್ಷಕ್ಕೊಮ್ಮೆ ಹೂಳೆತ್ತುವ ಯೋಜನೆ ಮಾಡಿದರೆ ಉತ್ತಮ.ಇಲ್ಲವಾದರೆ ಪ್ರತಿ ವರ್ಷ ರೂ.10 ಲಕ್ಷ ಅದಕ್ಕೆ ವ್ಯಯ ಮಾಡುವುದು ಸರಿಯಲ್ಲ ಎಂದರು.ನೂತನ ಸದಸ್ಯ ರಮೇಶ್ ರೈ ಅವರು ಮಾತನಾಡಿ ಪ್ರತಿ ವರ್ಷವೂ ರಾಜಕಾಲುವೆ ಹೂಳೆತ್ತಬೇಕು. ಇಲ್ಲವಾದರೆ ನಮ್ಮ ವಾರ್ಡ್‌ಗಳಿಗೆ ಕೃತಕ ನೆರೆ ಸಮಸ್ಯೆ ಉಂಟಾಗಬಹುದು ಎಂದರು.
ರೋಟರಿ ಕ್ಲಬ್‌ನ ಎ.ಜೆ.ರೈ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಗಣೇಶ್, ನಾರಾಯಣ ನಾಯ್ಕ ಸಹಿತ ಹಲವಾರು ಮಂದಿ ಸಭೆಯಲ್ಲಿ ಸಲಹೆ ಸೂಚನೆ ನೀಡಿದರು.

ಬೋರ್‌ವೆಲ್‌ಗಳ ಸ್ಥಗಿತ-ಎಲ್ಲರಿಗೂ ಕುಮಾರಧಾರೆ ನೀರು: ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ 24/7 ಕುಡಿಯುವ ನೀರಿನ ಯೋಜನೆಯ ಎರಡು ಹಂತ ಮುಕ್ತಾಯಗೊಂಡಿದ್ದು, ಮೂರನೇ ಹಂತದಲ್ಲಿ ಶಿಪ್ಟಿಂಗ್ ಕೆಲಸ ಪ್ರಾರಂಭವಾಗಿದೆ. ನಗರದ ಒಂದೊಂದು ವಲಯದಲ್ಲಿ ಹಂತಹಂತವಾಗಿ ಕೆಲಸ ಆರಂಭಗೊಂಡಿದ್ದು, ಮುಂದೆ ಎಲ್ಲಾ ವಲಯದಲ್ಲಿ ಪೂರ್ಣಮಟ್ಟದಲ್ಲಿ ನೀರಿನ ಪ್ರೆಷರ್ ನೋಡಿಕೊಂಡು ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೋರ್‌ವೆಲ್‌ಗಳ ಸಂಪರ್ಕ ಕಡಿತಗೊಳಿಸಲಾಗುತ್ತದೆ.ಮುಂದೆ ಎಲ್ಲಾ ಮನೆಗಳಿಗೂ ಕುಮಾರಧಾರ ನದಿಯ ನೀರೇ ಬರಲಿದೆ.ಎಲ್ಲೆಲ್ಲಿ ಮೀಟರ್ ಅಳವಡಿಸಿಲ್ಲವೋ ಅಲ್ಲೆಲ್ಲ ಮುಂದಿನ ತಿಂಗಳ ಒಳಗೆ ಮೀಟರ್ ಅಳವಡಿಸುವ ಕಾರ್ಯ ನಡೆಯುತ್ತದೆ. ನೀರಿನ ಒತ್ತಡ ಜಾಸ್ತಿಯಾಗಿ ಪೈಪ್ ಡ್ಯಾಮೇಜ್ ಆದಲ್ಲಿ ಅದರ ಬದಲಾವಣೆಯೂ ನಡೆಯುತ್ತದೆ. ಮುಂದಿನ ಮೂರು ತಿಂಗಳಲ್ಲಿ ಪರಿವರ್ತನೆ ಸಮಯದಲ್ಲಿ ಅದರ ನಿರ್ವಹಣೆ ಆಗುತ್ತದೆ.ಮುಂದೆ 8 ವರ್ಷಕ್ಕೆ ನಿರ್ವಹಣೆಯನ್ನೂ ಅವರೇ ಮಾಡುತ್ತಾರೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲೇ ಪಾರ್ಕಿಂಗ್ ಸೌಲಭ್ಯ: ಪುತ್ತೂರು ಟೌನ್‌ನಲ್ಲಿ ಪಾರ್ಕಿಂಗ್ ಸಮಸ್ಯೆ ಬಹಳಷ್ಟಿದೆ.ಇಲ್ಲಿನ ರಸ್ತೆಗಳು ಕಿರಿದಾಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ.ಹಾಗಾಗಿ ನಗರಸಭೆ ಟೌನ್ ಹೊರಗಿನ ಅಭಿವೃದ್ಧಿಯಾಗುವ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಈ ಕುರಿತು ಕೆಲವೊಂದು ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ.ಡಲ್ಟ್ ಯೋಜನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುಮೋದನೆ ಸಿಕ್ಕಿದೆ.ಡಲ್ಟ್‌ನಿಂದ ಇಲ್ಲಿ ಸರ್ವೆ ಮಾಡುತ್ತಾರೆ.ಅದರಲ್ಲಿ ಪೂಟ್ ಪಾಥ್, ಸೈಕಲ್ ಟ್ರ್ಯಾಕ್, ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಆಗುತ್ತದೆ.ಇದರೊಂದಿಗೆ ಗ್ರೀನ್ ಲಿಂಕ್ ಪ್ರೊಜೆಕ್ಟ್ ಇದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ: ಬೀದಿ ಬದಿ ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆಗಾಗಿ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು.ಯಾರು ಕೂಡಾ ಭಾಗವಹಿಸಿರಲಿಲ್ಲ.ಈ ನಿಟ್ಟಿನಲ್ಲಿ ನಮ್ಮ ನಗರ ವ್ಯಾಪ್ತಿಯಲ್ಲಿ ಪಶುವೈದ್ಯರು ಮತ್ತು ಶ್ವಾನ ಪ್ರಿಯರು ಮತ್ತು ಸಂಘ ಸಂಸ್ಥೆಯವರನ್ನು ಕರೆಸಿ ಸಭೆ ಮಾಡಿದ್ದೇವೆ. ಸಂತಾನ ಹರಣ ಚಿಕಿತ್ಸೆಗೆ ಮಂಗಳೂರಿನಿಂದ 5 ಮಂದಿ ವೈದ್ಯರು ಬರಲಿದ್ದಾರೆ. ಮೊದಲನೆ ಹಂತದಲ್ಲಿ 150 ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗುವುದು. ಇದಕ್ಕೆ ರೋಟರಿ ಕ್ಲಬ್ ಸಹಕಾರ ನೀಡಲಿದೆ.ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಶೆಡ್ ಹಾಕಿ ಚಿಕಿತ್ಸಾ ಕಾರ್ಯಕ್ರಮ ಮಾಡಲಾಗುವುದು. ಆ ಬಳಿಕ ಮುಂದಿನ ಹಂತದಲ್ಲಿ ಬೇರೆ ಬೇರೆ ಪರಿಸರದಲ್ಲಿ ಸಂತಾನಹರಣ ಚಿಕಿತ್ಸಾ ಕಾರ್ಯಕ್ರಮ ನಡೆಯಲಿದೆ.ಈ ಕುರಿತು ವಾರದೊಳಗೆ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಖಾಸಗಿಯವರು ಯಾರೂ ಮುಂದೆ ಬರುತ್ತಿಲ್ಲವಾದ್ದರಿಂದ ಅಸೋಸಿಯೇಶನ್ ಮೂಲಕ ಚಿಕಿತ್ಸಾ ಕಾರ್ಯ ಮಾಡಲಿದ್ದೇವೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದರು.ನಗರಸಭೆ ಸದಸ್ಯರಾದ ಸುಂದರ ಪೂಜಾರಿ ಬಡಾವು, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ, ಶೀನಪ್ಪ ನಾಯ್ಕ, ಮನೋಹರ್ ಕಲ್ಲಾರೆ, ರಮೇಶ್ ರೈ, ದಿನೇಶ್ ಶೇವಿರೆ, ಯೂಸೂಫ್ ಡ್ರೀಮ್, ಫಾತಿಮಾತ್ ಝೋರಾ, ನಗರಸಭೆ ಆರೋಗ್ಯ, ಕಂದಾಯ, ಸಮುದಾಯ ಸಂಘಟನೆ ಅಧಿಕಾರಿಗಳು ಉಪಸ್ಥಿತರಿದ್ದರು. ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್, ಪರಿಸರ ಅಭಿಯಂತರ ಶಬರಿನಾಥ್, ಮ್ಯಾನೇಜರ್ ಸಿ.ಆರ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುಣಮಟ್ಟದ ಕುಡಿಯುವ ನೀರು ಪೂರೈಕೆ
ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿ ಗುಣಮಟ್ಟದ ನೀರನ್ನೇ ಪೂರೈಕೆ ಮಾಡುವುದು.ಹಳೆಯ ಘಟಕದ ನೀರು ಶುದ್ದೀಕರಣವನ್ನು 6.8 ಎಮ್‌ಎನ್‌ಡಿ ಘಟಕವನ್ನು 25 ವರ್ಷದ ಯೋಜನೆಯಾಗಿ ಕಟ್ಟಿದ್ದರು.ಈಗ ಜನಸಂಖ್ಯೆ ಮತ್ತು ಮನೆಗಳು ಹೆಚ್ಚಾಗಿದ್ದರಿಂದ 24/7 ಮಾಡಬೇಕೆಂದು ಮುಂದಿನ 2047ನೇ ಇಸವಿಯ ಹೊತ್ತಿಗೆ ನಮ್ಮ ನೀರಿನ ಸರಬರಾಜು ಎಷ್ಟು ಬರುತ್ತದೆ ಎಂದು ಲೆಕ್ಕಹಾಕಿ ಒಟ್ಟು ಈಗ ಇರುವ 9 ಎಮ್‌ಎನ್‌ಡಿ ಘಟಕದ ಮುಂದೆ 15 ಎಮ್‌ಎನ್‌ಡಿ ನೀರು ಅವಶ್ಯಕತೆಯನ್ನು ಗಮನಿಸಿ ಅದಕ್ಕಾಗಿ 8.5 ಎಮ್‌ಎನ್‌ಡಿಯ ಘಟಕ ನಿರ್ಮಾಣ ಮಾಡಲಾಗಿದ್ದು ಈಗಾಗಲೇ ಅದು ಚಾಲನೆಯಲ್ಲಿದೆ. ಅದರ ಮೂಲಕವೇ ಈಗ ಪುತ್ತೂರು ನಗರಕ್ಕೆ ನೀರು ಸರಬರಾಜು ಆಗುತ್ತಿದೆ. ಅಲ್ಲಿ ಉತ್ತಮ ವ್ಯವಸ್ಥೆಯಲ್ಲೇ ಶುದ್ದೀಕರಣ ಮಾಡಲಾಗುತ್ತದೆ. ಫಿಲ್ಟರ್ ಮಾಡಿದ ನೀರಿಗೆ ಬೇಕಾದ ಪ್ರಮಾಣದಲ್ಲಿ ಆಲಂ ಮತ್ತು ಕ್ಲೋರಿನ್ ಬಳಸಲಾಗುತ್ತದೆ. ಹಾಗೆ ಬಳಸಿದ ಮೇಲೆ ಅದನ್ನು ಮೂರು ಹಂತದಲ್ಲಿ ಪರೀಕ್ಷೆ ಮಾಡಲಾಗುತ್ತದೆ.ಅಲ್ಲಿಂದ ನೀರು ನೇರವಾಗಿ ಸಿಟುಗುಡ್ಡೆಯ 25 ಲಕ್ಷದ ಟ್ಯಾಂಕ್‌ಗೆ ಬರುತ್ತದೆ.ಅಲ್ಲಿಂದ ಹಳೆಯ 6 ಮತ್ತು ಹೊಸ 6 ಓವರ್ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತದೆ. ಅಲ್ಲಿಂದ ಪ್ರತಿಯೊಂದು ಮನೆಗೆ ಹೋಗುತ್ತದೆ. ನೀರಿನ ಪ್ರತಿಯೊಂದು ಹಂತದಲ್ಲೂ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಗುಣಮಟ್ಟದ ನೀರು ಪುತ್ತೂರು ನಗರಕ್ಕೆ ಕೊಡಲಾಗುತ್ತದೆ-
ಮಧು ಎಸ್ ಮನೋಹರ್,
ಪೌರಾಯುಕ್ತರು ನಗರಸಭೆ

ಬ್ರಹ್ಮನಗರದಲ್ಲಿ ಶೌಚಾಲಯ ಕಟ್ಟಿಸಿಕೊಡುವ

ಬ್ರಹ್ಮನಗರದಲ್ಲಿ ಸರಿಯಾದ ವ್ಯವಸ್ಥೆಯಲ್ಲಿ ಸ್ನಾನಗೃಹವಿಲ್ಲ. ಶೌಚಾಲಯದ ಮೇಲೆಯೇ ಮನೆಯಿದೆ ಎಂದು, ಅಲ್ಲಿನ ಸಮಸ್ಯೆ ಕುರಿತು ನಗರಸಭೆ ಸದಸ್ಯ ರಮೇಶ್ ರೈ ಪ್ರಸ್ತಾಪಿಸಿದರು. ಉತ್ತರಿಸಿದ ಪೌರಾಯುಕ್ತರು ಬ್ರಹ್ಮನಗರ ಖಾಸಗಿ ಲೇ ಔಟ್‌ನಲ್ಲಿದೆ. ಸರಕಾರಿ ಜಾಗದಲ್ಲಿ ಇಲ್ಲ. ಸರಕಾರಿ ಜಾಗದಲ್ಲಿ ಇದ್ದಿದ್ದರೆ ನಾವು ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬಹುದಿತ್ತು.ಈಗಾಗಲೇ ಕೆಮ್ಮಿಂಜೆಯಲ್ಲಿ 65 ಸೈಟ್ ಮಾಡಲಾಗಿದೆ.ಕೆಲವೊಂದು ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಪಟ್ಟಿಯನ್ನು ರಾಜೀವಗಾಂಧಿ ವಸತಿ ಇಲಾಖೆಗೆ ಕಳುಹಿಸಲಾಗಿದೆ.
ಇನ್ನು ಬಾಕಿ ಇರುವವರ ಹೆಸರನ್ನು ಆಶ್ರಯ ಸಮಿತಿಯಲ್ಲಿ ಪಾಸ್ ಮಾಡಿ ರಾಜೀವಗಾಂಧಿ ವಸತಿ ಇಲಾಖೆಗೆ ಕಳುಹಿಸಲಾಗುವುದು. ಬ್ರಹ್ಮನಗರದಲ್ಲಿರುವ ಮನೆಗಳನ್ನು ಅಭಿವೃದ್ಧಿ ಪಡಿಸಲು ದುರಸ್ತಿಗೆ ಹಣ ನೀಡಿದೆ. ಒಮ್ಮೆ ಕೊಟ್ಟರೆ ಮತ್ತೆ ಇಷ್ಟು ವರ್ಷ ಎಂಬ ನಿಯಮವಿದೆ. ಅಲ್ಲಿಯ ತನಕ ಕೊಡಲಾಗುವುದಿಲ್ಲ. ಆದರೆ ಸಾರ್ವಜನಿಕ ಶೌಚಾಲಯ ಕಟ್ಟಿಕೊಡಲಾಗಿದೆ.ಇನ್ನೂ ಬೇಕಾದರೂ ಕಟ್ಟಿಕೊಡಲಾಗುವುದು. ಆದರೆ ಅದರ ನಿರ್ವಹಣೆಯನ್ನು ಅವರೇ ಮಾಡಬೇಕು ಎಂದು ಪೌರಾಯುಕ್ತರು ಹೇಳಿದರು.

LEAVE A REPLY

Please enter your comment!
Please enter your name here