ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಣೆ 2 ತಿಂಗಳಲ್ಲಿ ಮನವಿ ಪರಿಗಣಿಸಿ – ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಖಾಸಗಿ ಬಸ್ ಆಪರೇಟರ್‌ಗಳಿಗೆ ಸಂಕಷ್ಟ ಪ್ರಾರಂಭವಾಗಿದೆ.ಹಾಗಾಗಿ, ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಅನ್ವಯಿಸಬೇಕು. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಯಾಣ ವೆಚ್ಚವನ್ನು ಸರ್ಕಾರವು ಖಾಸಗಿ ಬಸ್ ಆಪರೇಟರ್‌ಗಳಿಗೆ ಮರು ಪಾವತಿ ಮಾಡಬೇಕು.ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ 2023ರ ಜುಲೈ 26ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಆದೇಶಿಸಬೇಕು ಎಂದು ಅರ್ಜಿದಾರ ಶರತ್ ಕುಮಾರ್ ಶೆಟ್ಟಿಯವರು ಕೋರಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿದರು.

ಬೆಂಗಳೂರು: ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಲು ಆದೇಶಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿರುವ ಕರ್ನಾಟಕ ಹೈಕೋರ್ಟ್, ಈ ಮನವಿಯನ್ನು ಕಾನೂನು ಬದ್ಧ ರೀತಿಯಲ್ಲಿ ಎರಡು ತಿಂಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್ ಕುಮಾರ್ ಶೆಟ್ಟಿ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಸರಕಾರಕ್ಕೆ ನಿರ್ದೇಶನ ನೀಡಿ, ಅರ್ಜಿಯನ್ನು ವಿಲೇಗೊಳಿಸಿದೆ.
ರಾಜ್ಯದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ 65 ವರ್ಷಗಳ ಇತಿಹಾಸವಿದೆ. 16 ಜಿಲ್ಲೆಗಳಲ್ಲಿ 9 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸೇವೆ ಒದಗಿಸುತ್ತಿವೆ. 75 ಸಾವಿರ ಕಾರ್ಮಿಕರ ಜೀವನ ಇವುಗಳ ಮೇಲೆ ಅವಲಂಬಿತವಾಗಿದೆ.ಖಾಸಗಿ ಬಸ್ ಆಪರೇಟರ್‌ಗಳು ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದು, ವಾರ್ಷಿಕ ರೂ.1,620 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಶರತ್ ಕುಮಾರ್ ಶೆಟ್ಟಿಯವರ ಅರ್ಜಿಯಲ್ಲಿ ವಿವರಿಸಲಾಗಿದೆ.

LEAVE A REPLY

Please enter your comment!
Please enter your name here