ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬೊಳ್ಳಾಜೆ ಭಾಗದಲ್ಲಿ ಜ.8ರಂದು ರಾತ್ರಿ ನಡೆದ ಕಾಡಾನೆಗಳ ದಾಳಿಗೆ ಅಪಾರ ಕೃಷಿ ನಾಶಗೊಂಡಿದೆ.
ಸತ್ಯಾನಂದ ಗೌಡ ಬೊಳ್ಳಾಜೆ ಎಂಬವರ ಅಡಕೆ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು ನೂರಾರು ಅಡಕೆ ಮರಗಳನ್ನು ನಾಶಗೊಳಿಸಿವೆ. ಇವರ ಅಕ್ಕಪಕ್ಕದ ತೋಟಕ್ಕೂ ಕಾಡಾನೆ ಲಗ್ಗೆ ಇಟ್ಟಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್‌ಬಾಬು, ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ನಿತ್ಯ ಕಾಡಾನೆಗಳು ನಡೆಸುತ್ತಿರುವ ದಾಂಧಲೆಗೆ ರೈತರು ಕಣ್ಣೀರು ಹಾಕುವಂತಾಗಿದ್ದು, ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷದಿಂದ ನಿರಂತರವಾಗಿ ಅರಣ್ಯ ಪ್ರದೇಶದ ಪಕ್ಕದ ತೋಟಗಳಿಗೆ ಆನೆಗಳು ದಾಳಿ ಮಾಡುವ ಮೂಲಕ ಬೆಳೆಗಳನ್ನು ನಾಶ ಮಾಡುತ್ತಿವೆ. ಕಷ್ಟಪಟ್ಟು ಬೆಳೆದ ಅಡಕೆ, ಬಾಳೆ, ತೆಂಗು ಬೆಳೆಯನ್ನು ಕಾಡಾನೆಗಳು ನಾಶ ಮಾಡುತ್ತಿದ್ದು, ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಡಕೆ ಫಸಲು ಬಂದಿದ್ದು ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ನೆಲಕ್ಕೆ ಬೀಳಿಸುತ್ತಿವೆ. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ನಾಶವಾಗುತ್ತಿದೆ ಎಂದು ತೋಟದ ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.
‘ಗಜಪಡೆ ನಡೆದಿದ್ದೇ ಹಾದಿ. ಪದೇ ಪದೆ ಕಾಡು ಪ್ರಾಣಿಗಳ ದಾಳಿಗೆ ಬೇಸತ್ತು ಹೋದ ರೈತರು ಹತ್ತು ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ, ಕಾಡಾನೆಗಳ ಹಾವಳಿಗೆ ಬ್ರೇಕ್ ಹಾಕಬೇಕು ‘.
-ಬಾಲಕೃಷ್ಣ ಬಳ್ಳೇರಿ
‘ಕಾಡಾನೆ ಹಾವಳಿ ನಿಯಂತ್ರಣಕ್ಕೆ ನಮ್ಮ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಾನಿ ಬಗ್ಗೆ ಇಲಾಖೆಯಿಂದ ಕೃಷಿಕರಿಗೆ ಪರಿಹಾರ ಒದಗಿಸುತ್ತೇವೆ. ಜನರು ಕಾಡಾನೆ ಚಲನವಲನ ಗಳ ಬಗ್ಗೆ ಮಾಹಿತಿ ನೀಡಬೇಕು. ಇಲಾಖಾ ವ್ಯಾಪ್ತಿಯಲ್ಲಿ ಈಗಾಗಲೇ ಸಿಬ್ಬಂದಿಗಳು ಜಾಗೃತರಾಗಲು ಕರ್ತವ್ಯದಲ್ಲಿದ್ದಾರೆ’.
-ಗಿರೀಶ್
ಪಂಜ ವಲಯ ಅರಣ್ಯಾಧಿಕಾರಿ