ಶಿವಪ್ರಸಾದ್ ಆಳ್ವ, ಮಹೇಶ್ ಕಜೆ, ವೆಂಕಪ್ಪ ಗೌಡರ ಹೆಸರು ಉಲ್ಲೇಖಿಸಿ ಸರಕಾರಕ್ಕೆ ಮನವಿ ಮಾಡಿದ್ದ ಅಕ್ಷಯ್ ತಂದೆ ಚಂದ್ರಶೇಖರ್ ಗೌಡ
ಪುತ್ತೂರು:ಕಳೆದ ನವೆಂಬರ್ 6ರಂದು ನಡೆದಿರುವ,ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(26ವ)ರವರ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡುವಂತೆ ಮೃತರ ತಂದೆ ಚಂದ್ರಶೇಖರ್ ಗೌಡ ಅವರು ಸಲ್ಲಿಸಿರುವ ಮನವಿ ಕುರಿತು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.ಈ ಕುರಿತು ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳುವಂತೆ ಗೃಹ ಸಚಿವರ ಆಪ್ತ ಕಾರ್ಯದರ್ಶಿಯವರು ಒಳಾಡಳಿತ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಅಕ್ಷಯ್ ಕಲ್ಲೇಗ ಅವರ ತಂದೆ ಕಬಕ ಗ್ರಾಮದ ಶೇವಿರೆ ನಿವಾಸಿ ಚಂದ್ರಶೇಖರ ಗೌಡರವರು ರಾಜ್ಯ ಗೃಹ ಇಲಾಖೆಗೆ ಈ ಕುರಿತು ಮನವಿ ಸಲ್ಲಿಸಿದ್ದರು.ಜೊತೆಗೆ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೂ ಮನವಿ ಮಾಡಿದ್ದರು. ತನ್ನ ಪುತ್ರನನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆ ಪರ ಸಮರ್ಪಕವಾಗಿ ವಾದ ಮಂಡನೆ ಮಾಡಲು ಸರಕಾರಿ ಅಭಿಯೋಜಕರ ಜತೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದ ಚಂದ್ರಶೇಖರ್ ಗೌಡ ಅವರು,ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಮತ್ತು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಕೆ.ಶಿವಪ್ರಸಾದ್ ಆಳ್ವ, ಪುತ್ತೂರಿನ ಖ್ಯಾತ ಕ್ರಿಮಿನಲ್ ನ್ಯಾಯವಾದಿಗಳು, ಇ.ಡಿ. ಪರ ವಿಶೇಷ ಸರಕಾರಿ ಅಭಿಯೋಜಕರೂ ಆಗಿರುವ ಕಜೆ ಲಾ ಚೇಂರ‍್ಸ್ ಮುಖ್ಯಸ್ಥ ಮಹೇಶ್ ಕಜೆ ಮತ್ತು ಕಾಂಗ್ರೆಸ್ ಮುಖಂಡರೂ ಆಗಿರುವ ಸುಳ್ಯದ ನ್ಯಾಯವಾದಿ ಮಾಚಿಲ ವೆಂಕಪ್ಪ ಗೌಡರ ಹೆಸರನ್ನು ಉಲ್ಲೇಖಿಸಿ ಅಕ್ಷಯ್ ಕಲ್ಲೇಗ ಅವರ ತಂದೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಗೃಹಸಚಿವರಿಗೆ ವಿಧಾನಸಭಾಧ್ಯಕ್ಷರ ಪತ್ರ: ಅಕ್ಷಯ್ ಕಲ್ಲೇಗ ಅವರ ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಸರಕಾರವು ಕ್ರಮಕೈಗೊಳ್ಳುವುದರ ಜೊತೆಗೆ ಈ ಪ್ರಕರಣದಲ್ಲಿ ಸೂಕ್ತವಾದ ವಾದ ಮಂಡಿಸಲು ಮೇಲ್ಕಾಣಿಸಿದ ಮೂವರು ಪ್ರಮುಖ ವಕೀಲರಲ್ಲಿ ಓರ್ವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸುವಂತೆ ಅಕ್ಷಯ್ ಅವರ ತಂದೆ ಚಂದ್ರಶೇಖರ್ ಗೌಡ ಅವರು ಮನವಿ ಮಾಡಿ ಕೋರಿದ್ದಾರೆ.ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ರಾಜ್ಯ ಗೃಹ ಸಚಿವ ಡಾ|ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ.ಈ ಕುರಿತು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳುವಂತೆ ಗೃಹ ಸಚಿವರ ಆಪ್ತಕಾರ್ಯದರ್ಶಿ ಚನ್ನಬಸಪ್ಪ ಕೆ.ಅವರು ಸರಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದ್ದಾರೆ.ಇದರಿಂದಾಗಿ ಈ ಪ್ರಕರಣದಲ್ಲಿ ಶಿವಪ್ರಸಾದ್ ಆಳ್ವ,ಮಹೇಶ್ ಕಜೆ ಮತ್ತು ವೆಂಕಪ್ಪ ಗೌಡರ ಪೈಕಿ ಓರ್ವರು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ: ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಗುರುತಿಸಿಕೊಂಡಿದ್ದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(24ವ.)ಅವರನ್ನು ಕಳೆದ ನ.6ರಂದು ರಾತ್ರಿ ನೆಹರೂನಗರದಲ್ಲಿ ಮಾರಕಾಸ್ತçಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಪಡೀಲು ನಿವಾಸಿ ಮನೀಶ್, ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿ ಮಂಜುನಾಥ್ ಯಾನೆ ಹರಿ ಮತ್ತು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷರಾಗಿದ್ದ ಕೇಶವ ಪಡೀಲ್ ಎಂಬವರು ಆರೋಪಿಗಳಾಗಿದ್ದು ನಾಲ್ವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.