ವಿವೇಕ ಆನಂದದ ಬೆಳಕು ಸ್ವಾಮಿ ವಿವೇಕಾನಂದ

0

ಯುವ ಸಮೂಹ ಭಾರತಮಾತೆಯ ಜೀವಂತ ಸಂಪನ್ಮೂಲ.ಜನಸಂಖ್ಯೆಯ ಶೇ60-65ರಷ್ಟಿರುವ ಯುವಜನತೆ ರಾಷ್ಟ್ರನಿರ್ಮಾಪಕರು.ಇಂದು ಶಿಕ್ಷಣ,ಕಲೆ,ಸಾಹಿತ್ಯ, ಕ್ರೀಡೆ,ಸಮಾಜ ಸೇವೆ,ಅನ್ನದಾತ,ಯೋಧ,ಶಾಸಕ,ಸಚಿವ,ನಾಯಕ,ಕೃಷಿ-ಉದ್ಯಮ..ಪರಿಸರ..ಮೊದಲಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರ ಕನಸ ರೆಕ್ಕೆಗಳಿಗೆ ಶಕ್ತಿ ತುಂಬುವ,ಬಣ್ಣ ಹಚ್ಚುವ ಕಾರ್ಯಗಳಾಗಬೇಕು. ಯುವ ಮನಸ್ಸು-ಆತ್ಮವಿಶ್ವಾಸಗಳನ್ನು ಹೆಚ್ಚಿಸುವ ಕೆಲಸ ಕಾರ್ಯಗಳಾಗಬೇಕಾದ ಅಗತ್ಯವಿದೆ.


ನಮ್ಮ ಆಡಳಿತ ವ್ಯವಸ್ಥೆ ಅವರ ಬದುಕಿಗೆ ಬೇಕಾದ ಶಿಕ್ಷಣ ಹಾಗೂ ಉದ್ಯೋಗ ನೀಡುವ ಕೆಲಸವಾದಾಗ ಯುವಕರು ಈ ರಾಷ್ಟ್ರದ ಶಕ್ತಿಗಳಾಗುವರು.ಭವಿಷ್ಯದ ಬೆಳಕುಗಳಾಗುವರು. ಇಂದು ನಮ್ಮ ಯುವ ಶಕ್ತಿಗಳು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವುದು,ಖಿನ್ನತೆಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ.ಅವರಲ್ಲಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ,ಆತ್ಮವಿಶ್ವಾಸ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆದಾಗ ಸುಸಂಸ್ಕೃತ ಸಮಾಜದ ನಿರ್ಮಾಣವಾಗುವುದು.
ಸಾಮಾಜಿಕ ಸಾಮರಸ್ಯಗಳು ಇಂದಿನ ಅನಿವಾರ್ಯತೆಯಾಗಿದೆ.ಈ ನಿಟ್ಟಿನಲ್ಲಿ ನಮ್ಮ ಯುವ ಶಕ್ತಿಗಳನ್ನು ನಾವು, ಹಿರಿಯರು ಆಡಳಿತ ವ್ಯವಸ್ಥೆಯವರು ಕ್ರಿಯಾತ್ಮಕವಾಗಿ,ಭಾವನಾತ್ಮಕವಾಗಿ ಬಳಸಿಕೊಳ್ಳುವಂತಾಗಬೇಕು.ಜಾತಿ,ಮತ,ಧರ್ಮ,ಪಕ್ಷ-ಪಂಗಡಗಳ ವಿಷ ವರ್ತುಲದೊಳಗೆ ಸಿಲುಕಬಾರದು.ದುರ್ವ್ಯಸನಗಳಿಗೆ ಬಲಿಯಾಗ ಬಾರದು.


ಸಾಮಾಜಿಕ ಸಾಮರಸ್ಯ,ಹಾಗೂ ಸೌಹಾರ್ದ ಭಾವ ಮೂಡುವ ಯೋಚನೆ-ಯೋಜನೆಗಳೊಂದಿಗೆ ನಮ್ಮ ಯುವಜನತೆಗೆ ಸತ್ಪಥ ತೋರಿಸುವ ಕಾರ್ಯಗಳಾಗಬೇಕು.
ವಿವೇಕ ಆನಂದದ ಬೆಳಕಾಗಿರುವ ಸ್ವಾಮಿ ವಿವೇಕಾನಂದರು ಬಾಳಿ ಬೆಳಗಿದ ಯುವ ಭಾರತ ಇಂದು ವಿಶ್ವದ ಗಮನ ಸೆಳೆಯುತ್ತಿದೆ.ಭಾರತ ಮಾತೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಪನ್ನವಾದ ಕ್ಷಣಗಳನ್ನು ಕಂಡ ನಾವು ಶತಸಂಭ್ರಮದ ಕಡೆಗೆ ಹೆಜ್ಜೆಯಿಡುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕಾಗಿದೆ.


ಜನವರಿ 12 ಯುವಕರದಿನ ಅರ್ಥಾತ್ ಸ್ವಾಮಿ ವಿವೇಕಾನಂದರ ಜನುಮ ದಿನ.161ವರ್ಷಗಳ ಹಿಂದೆ 1863 ಜನವರಿ 12ರಂದು,ಕಲ್ಕತ್ತೆಯ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರೀ ದೇವಿ ದಂಪತಿಯ ಪುತ್ರರತ್ನನ ಜನನವಾಯಿತು. ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರ.ತುಂಬಾ ತುಂಟನಾಗಿ,ಬುದ್ಧಿವಂತರಾಗಿ ಬೆಳೆದ ಇವರು ಶ್ರೀ ರಾಮಕೃಷ್ಣ ಪರಮಹಂಸರ ಸಾಮಿಪ್ಯದಿಂದ ಮುಂದೆ ವಿವೇಕಾನಂದರಾದರು.ಅಪ್ಪಟ ದೇಶಪ್ರೇಮಿಗಳು,ಯುವಕರ ಮೇಲೆ ತುಂಬು ಭರವಸೆ ಹೊಂದಿದ್ದ ಸ್ವಾಮಿ ವಿವೇಕಾನಂದರು,ಗುಡುಗಿನಂಥ ಶಕ್ತಿಯಿರುವ,ಮಿಂಚಿನಂಥ ಚಲನೆಯುಳ್ಳ ನೂರುಮಂದಿ ಯುವಕರನ್ನು ಕೊಡಿ,ನಾನು ಈ ದೇಶವನ್ನೇ ಪುನರ್ ನಿರ್ಮಾಣ ಮಾಡುವೆನು…ಎಂದು ಶತಮಾನಗಳ ಹಿಂದೆಯೇ ಗುಡುಗಿದರು.ಅನ್ಯಾಯ ತಾರತಮ್ಯಗಳನ್ನು ವಿರೋಧಿಸತೊಡಗಿದರು.ಸಾಮರಸ್ಯ ಬಾಂಧವ್ಯವನ್ನು ಬೆಸೆಯುವ,ಸರ್ವಧರ್ಮಗಳ ಮಹತ್ವ ಸಾರುವ ಕಾರ್ಯಕ್ಕೆ ಮುಂದಾದರು.


1893 ಸಪ್ಟೆಂಬರ 11ರಂದು,ಅಮೇರಿಕಾದ ಚಿಕಾಗೋ ನಗರದಲ್ಲಿ ಜರುಗಿದ ವಿಶ್ವಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧೀಯಾಗಿ ಭಾಗವಹಿಸಿ,ಅಮೇರಿಕಾದ ನನ್ನ ಸಹೋದರ-ಸಹೋದರಿಯರೇ..ಎಂದು ಸಂಬೋಧಿಸುವ ಮೂಲಕ ದೇಶದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಬೆಳಗಿದ ವಿವೇಕ-ಆನಂದದಾ ಬೆಳಕಾದರು.ಹೀಗೇ ಸ್ವಾಮಿ ವಿವೇಕಾನಂದರು ಹಚ್ಚಿದ ಧಾರ್ಮಿಕ,ಸಾಂಸ್ಕೃತಿಕ, ರಾಷ್ಟ್ರೀಯತೆಯ ನಂದಾದೀಪ ಸ್ವಾತಂತ್ರ್ಯ ಚಳವಳಿಗೂ ನಾಂದಿಯಾಯಿತು.ಲೋಕಮಾನ್ಯ ಬಾಲಗಂಗಾಧರ ತಿಲಕ್,ರಾಷ್ಟ್ರಪಿತ ಮಹಾತ್ಮಾ ಗಾಂಽಜಿಯವರು ಸೇರಿದಂತೆ ಅನೇಕ ರಾಷ್ಟ್ರನಾಯಕರು ಸ್ವಾಮಿ ವಿವೇಕಾನಂದರ ಬದುಕು,ಆದರ್ಶ,ಚಿಂತನೆಗಳಿಂದ ಪ್ರಭಾವಿತರಾದರು.ಆಂಗ್ಲರ ವಿರುದ್ಧ ದೊಡ್ಡ ಹೋರಾಟವೇ ನಡೆದು,ಸ್ವಾತಂತ್ರ್ಯದ ಕಹಳೆ ಮೊಳಗಿತು.


ತಮ್ಮ ವಿರಾಮವಿಲ್ಲದ ದುಡಿತ,ಯುವ ಜಾಗೃತಿ,ಸಂಘಟನೆ,ದೇಶ ಸೇವಾ ಕಾರ್ಯಗಳಿಂದ ಸ್ವಾಮಿ ವಿವೇಕಾನಂದರು ತಮ್ಮ ಯುವ ವಯಸ್ಸು 39ವರ್ಷ6ತಿಂಗಳ ಜೀವಿತಾವಽಯಲ್ಲೇ ಭಗವಂತನಲ್ಲಿ ಐಕ್ಯರಾದರು.
ಸಕಲ ಶಾಸಗಳನ್ನು ಬಲ್ಲವರಾಗಿ,ಅಪ್ರತಿಮ ದೇಶಭಕ್ತರಾಗಿ,ವಿಶ್ವಪ್ರೇಮಿ,ದಿವ್ಯಜ್ಞಾನಿಯಾಗಿ ಗಗನ ಸದೃಶ ವ್ಯಕ್ತಿತ್ವ ಹೊಂದಿದ್ದ ಸ್ವಾಮಿ ವಿವೇಕಾನಂದರು ಯುವ ಜನಾಂಗದ ಆಶಾಕಿರಣವಾಗಿ ಇಂದೂ ಬೆಳಗುತ್ತಿರುವರು.ಈ ಎಲ್ಲಾ ಕಾರಣಗಳಿಂದಾಗಿ ಜನವರಿ 12ನ್ನುರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.
ಯುವಜನರ ಗುರಿ ಸತ್ಯದ ಅನ್ವೇಷಣೆಯ ಕಡೆಗಿರಬೇಕು.ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಹೆಜ್ಜೆಯಿಡಬೇಕು..ಜನರನ್ನು ಪ್ರೀತಿಸುವುದರೊಂದಿಗೆ ಸರ್ವಧರ್ಮಸಮನ್ವಯತೆ ಬಾಂಧವ್ಯವನ್ನು ಬೆಸೆಯುವ ಕಾರ್ಯವಾಗಬೇಕು..ಏಳಿ..ಎದ್ದೇಳಿ…ಪುರುಷಸಿಂಹರಾಗಿ…ಗುರಿಮುಟ್ಟುವ ತನಕ ವಿಶ್ರಮಿಸದಿರಿ…ಎಂದು ದೇಶವಾಸಿಗಳನ್ನು,ವಿಶೇಷವಾಗಿ ಯುವಜನತೆಯಲ್ಲಿ ಆತ್ಮನಿರ್ಭರ ಭಾವನೆಯನ್ನು ಬಡಿದೆಚ್ಚರಿಸಿದ ಸ್ವಾಮಿ ವಿವೇಕಾನಂದರಿಗೆ ನಮ್ಮೆಲ್ಲರ ಗೌರವದ ನಮನಗಳು.
ಜೈ ಹಿಂದ್..ಸರ್ವೇಜನಾ:ಸುಖಿನೋಭವಂತು..!!

LEAVE A REPLY

Please enter your comment!
Please enter your name here