ಮಂಜೇಶ್ವರದ ಹೊಸಂಗಡಿಯ ಅಯ್ಯಪ್ಪ ಕ್ಷೇತ್ರದಲ್ಲಿ ಪ್ರವೀಣ್ ನೆಟ್ಟಾರ್ ಅವರ ಹರಕೆ ತೀರಿಸಿದ ಪತ್ನಿ‌ ನೂತನ

0

ಪುತ್ತೂರು: ಕಾಸರಗೋಡು ಮಂಜೇಶ್ವರದ ಹೊಸಂಗಡಿಯಲ್ಲಿರುವ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನರವರು ಜ.12ರಂದು ತುಪ್ಪಕಾಯಿ ಹರಕೆ ತೀರಿಸಿದರು.


ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳ‌ ಇರುಮುಡಿ ಕಟ್ಟುವ ಕಾರ್ಯಕ್ರಮ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯುವ ವೇಳೆ ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ ಹಾಗೂ ಪ್ರಧಾನ ಅರ್ಚಕ ತಿರುಮಲೇಶ್ ಆಚಾರ್ಯರವರ ಮಾರ್ಗದರ್ಶನದಲ್ಲಿ ನೂತನ ಅವರು ಪತಿಯ ಹರಕೆ ನೆರವೇರಿಸಿದರು. ಪ್ರವೀಣ್ ನೆಟ್ಟಾರ್ ಅವರ ಹರಕೆಯ ತುಪ್ಪವನ್ನು ನೂತನರವರ ಕೈಯಿಂದಲೇ ಹರಕೆಕಾಯಿಗೆ ತುಂಬಿಸಿದ ಗುರುಸ್ವಾಮಿಗಳು ಆಶೀರ್ವದಿಸಿದರು.

ಪತಿ ಹೊಸಂಗಡಿಯಲ್ಲಿ ಮಾಲೆ ಹಾಕಿ ಶಬರಿಮಲೆಗೆ ತೆರಳಿದ್ದರು-ನೂತನ:

ನನ್ನ ಪತಿ ಪ್ರವೀಣ್ ನೆಟ್ಟಾರ್ ಅವರು ತಮ್ಮ 17 ಮತ್ತು 18ನೇ ವರ್ಷದಲ್ಲಿ ಹೊಸಂಗಡಿಯಲ್ಲಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಮಾಡಿದ್ದರು.‌ ಪ್ರತೀ ವರ್ಷ ತಮ್ಮ ಊರಾದ ನೆಟ್ಟಾರಿನಿಂದ ಶಬರಿಮಲೆಗೆ ಯಾತ್ರೆಗೈಯುವ ಅಯ್ಯಪ್ಪ ಭಕ್ತರಲ್ಲಿ ಹರಕೆ ತುಪ್ಪ ಕಾಯಿ ತುಂಬಿಸಿ ಕಳುಹಿಸುತ್ತಿದ್ದರು. ಅವರ ಅಗಲುವಿಕೆಯ ಬಳಿಕ ನನಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ದೊರಕಿದೆ. ನಮ್ಮ ಕಚೇರಿಯ ಸಹೋದ್ಯೋಗಿಯಾಗಿರುವ ಹೊಸಂಗಡಿ ಬಳಿಯ ಬೆಜ್ಜ ನಿವಾಸಿ ಜೀತ್ ಅವರು ಹಲವು ವರ್ಷಗಳಿಂದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಮಾಡುವ ವಿಚಾರ ತಿಳಿಯಿತು. ಅವರ ಹಾಗೂ ಕ್ಷೇತ್ರದ ಗುರುಸ್ವಾಮಿಗಳ ಸಲಹೆಯಂತೆ ಹಲವು ದಿನಗಳಿಂದ ವೃತ ಕೈಗೊಂಡು ನನ್ನ ಪತಿಯ ಹರಕೆ ತುಪ್ಪಕಾಯಿಯನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಿದೆ ಎಂದು ನೂತನ ಅವರು ಹರಕೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here