
ಬೆಂಗಳೂರು:
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂಬ ಕವಿ ಸರ್ವಜ್ಞನನ ತ್ರಿಪದಿಯನ್ನು ತೆರೆದ ಕಲಾಪದಲ್ಲಿ ಉದ್ದರಿಸಿದ ಹೈಕೋರ್ಟ್, ಕೃಷಿ ಉದ್ಯೋಗದ ಬಗ್ಗೆ ನಮಗೆ ಹೆಮ್ಮೆ ಇರಬೇಕು' ಎಂದು, ಕೌಕ್ರಾಡಿಯ ಪ್ರಕರಣವೊಂದರ ವಿಚಾರಣೆ ಸಂದರ್ಭ ಅರ್ಜಿದಾರರ ವಕೀಲರಿಗೆ ಕಿವಿಮಾತು ಹೇಳಿತು. ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.ಅರ್ಜಿಯ
ಕಾರಣ ಶೀರ್ಷಿಕೆ’ಯಲ್ಲಿ ಅರ್ಜಿದಾರರ ಉದ್ಯೋಗದ ಬಗ್ಗೆ ನಮೂದಾಗದೇ ಇರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು, ಅರ್ಜಿದಾರರು ಏನು ಉದ್ಯೋಗ ಮಾಡುತ್ತಾರೆ' ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿದರು.ಇದಕ್ಕೆ ಅರ್ಜಿದಾರರ ಪರ ವಕೀಲರು,
ಕೃಷಿಕ’ ಎಂದು ತುಂಬಾ ಹಿಂಜರಿಕೆಯ ಸ್ತರದಲ್ಲಿ ನುಡಿದರಲ್ಲದೆ, ವಿವರವನ್ನು ಕೈಫಿಯತ್ತಿನಲ್ಲಿ ವಿವರಿಸಲಾಗಿದೆ ಎಂದರು. ಇದಕ್ಕೆ ಮುಖ್ಯನ್ಯಾಯಮೂರ್ತಿ ವರಾಳೆ ಅವರು, ನಿಮ್ಮ ಅರ್ಜಿದಾರರ ಉದ್ಯೋಗದ ಬಗ್ಗೆ ನಾಚಿಕೆ ಏಕೆ? ಕೃಷಿಕನಾಗುವುದು ತಪ್ಪಲ್ಲ. ವಿಶ್ವದ ಅತ್ಯಂತ ಪುರಾತನ ಉದ್ಯೋಗ ಕೃಷಿ, ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು' ಎಂದರು. ತಕ್ಷಣವೇ ಈ ಮಾತಿಗೆ ನ್ಯಾಯಮೂರ್ತಿ ದೀಕ್ಷಿತ್ ಅವರು, ಸರ್ವಜ್ಞನ ತ್ರಿಪದಿಯನ್ನು ಉಲ್ಲೇಖಿಸಿದರು.ಆಗ ಮುಖ್ಯ ನ್ಯಾಯಮೂರ್ತಿಗಳು,
ಅದನ್ನು ಜೋರಾಗಿ ಅರ್ಜಿದಾರರಿಗೆ ಹೇಳಿಬಿಡಿ’ ಎಂದು ದೀಕ್ಷಿತ್ ಅವರಿಗೆ ಹೇಳಿದರು. ಕೂಡಲೇ ನ್ಯಾಯಮೂರ್ತಿ ದೀಕ್ಷಿತ್ ಅವರು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಂ ರಾಟಿ ನಡೆದುದಲ್ಲವೇ ಲೋಕಕ್ಕೆ, ಮೇಟಿಯೇ ಶ್ರೇಷ್ಠ ಸರ್ವಜ್ಞ' ಎಂಬ ಸಾಲುಗಳನ್ನು ಅಸ್ಖಲಿತವಾಗಿ ಉಲ್ಲೇಖಿಸಿದರಲ್ಲದೆ, ಅಲ್ಲೇ ಇದ್ದ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರನ್ನು,
ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆಯೇ ಮೇಲಲ್ಲವೇ?’ ಎಂದು ಪ್ರಶ್ನಿಸಿದರು.ಇದಕ್ಕೆ ನಾಗಾನಂದ ಅವರು,ಹೌದು ಅದು ಅತ್ಯುತ್ತಮ ಮಾತ್ರವಲ್ಲ, ಅದಕ್ಕೆ ತೆರಿಗೆಯೂ ಇಲ್ಲ. ಆದಾಯ ತೆರಿಗೆ ಅಽಕಾರಿಗಳ ದಾಳಿಯೂ ಇರುವುದಿಲ್ಲ' ಎಂದು ಲಘು ದಾಟಿಯಲ್ಲಿ ಉತ್ತರಿಸಿದರು.
ಮಂಗಳಸೂತ್ರವನ್ನು ಕೊರಳಿಗೇ ಕಟ್ಟಬೇಕು: ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿದ ನ್ಯಾಯಮೂರ್ತಿ ದೀಕ್ಷಿತ್ ಅವರು,
ನೀವು ಉದ್ಯೋಗವನ್ನು ಕೈಫಿಯತ್ತಿನಲ್ಲಿ ಉಲ್ಲೇಖಿಸಿದರೆ ಸಾಲದು. ಮಂಗಳಸೂತ್ರವನ್ನು ಕೊರಳಿಗೇ ಕಟ್ಟಬೇಕು. ಬೇರೆಲ್ಲಿಯೂ ಕಟ್ಟಿದರೆ ಆಗದು’ ಎಂದರು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.