ರಾಮಕುಂಜ: ವೇದವ್ಯಾಸ ಆಚಾರ್ಯ ಅವರಿಗೆ ಶ್ರದ್ದಾಂಜಲಿ ಸಭೆ

0

ವೇದವ್ಯಾಸ ಆಚಾರ್ಯರದ್ದು ಸ್ವಾರ್ಥ ರಹಿತ, ಪ್ರಾಮಾಣಿಕ, ಪ್ರಾಂಜಲ ಮನಸ್ಸಿನ ಸೇವೆ: ಕೃಷ್ಣಪ್ಪ ಪೂಜಾರಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಉಪಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಎನ್.ವೇದವ್ಯಾಸ ಆಚಾರ್ಯ ನೀರಾಜೆ ಅವರಿಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಶ್ರದ್ದಾಂಜಲಿ ಸಲ್ಲಿಕೆ ಕಾರ್ಯಕ್ರಮ ಜ.13ರಂದು ಸಂಜೆ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ನಿವೃತ್ತ ಪ್ರಾಂಶುಪಾಲರಾದ ಕೃಷ್ಣಪ್ಪ ಪೂಜಾರಿ ಅವರು ಮಾತನಾಡಿ, ವೇದವ್ಯಾಸ ಆಚಾರ್ ಅವರದ್ದು ಘನತೆಯ ವ್ಯಕ್ತಿತ್ವ. ತನ್ನ ಘನತೆಗೆ ಎಳ್ಳಷ್ಟೂ ಕೊರತೆಯಾಗದಂತೆ ಬದುಕಿದವರು. ಸಾರ್ವಜನಿಕ ಜೀವನದಲ್ಲಿ ಗೌರವಕ್ಕೆ ಪಾತ್ರರಾದವರು. ಅವರದ್ದು ಇತರರು ಅನುಸರಿಸಬೇಕಾದ ವ್ಯಕ್ತಿತ್ವವಾಗಿತ್ತು ಎಂದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ರಾಮಕುಂಜದಲ್ಲಿ ವಿದ್ಯಾಸಂಸ್ಥೆ ಆರಂಭಿಸಿದಾಗ ಅದಕ್ಕೆ ಪೂರಕವಾಗಿ ಎಲ್ಲಾ ರೀತಿಯ ಸಹಕಾರ ನೀಡಿದವರು ಎನ್.ವೇದವ್ಯಾಸ ಆಚಾರ್ ಅವರು. ಅವರದ್ದು ಸ್ವಾರ್ಥ ರಹಿತವಾದ ಸೇವೆ. ಪ್ರಾಮಾಣಿಕ ಹಾಗೂ ಪ್ರಾಂಜಲ ಮನಸ್ಸಿನಿಂದ ಸಲ್ಲಿಸಿದ ಸೇವೆಯಾಗಿದೆ. ಅವರು ಸಮಾಜದಿಂದ ಮರೆಯಾಗಿರುವುದು ತುಂಬಲಾರದ ನಷ್ಟವಾಗಿದೆ. ಅವರ ಆತ್ಮ ಭಗವಂತನ ಪಾದದಲ್ಲಿ ಲೀನವಾಗಲಿ ಎಂದು ಹೇಳಿದರು.

ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ: ರಾಧಾಕೃಷ್ಣ
ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ಮಾತನಾಡಿ, ಎನ್.ವೇದವ್ಯಾಸ ಆಚಾರ್ಯ ಅವರು ಮನೆ ಕೆಲಸಕ್ಕಿಂತಲೂ ಸಾರ್ವಜನಿಕ ಕೆಲಸಗಳಿಗೆ ಹೆಚ್ಚು ಒತ್ತುಕೊಟ್ಟು ಮಾಡಿದ್ದಾರೆ. 45ವರ್ಷ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, 25 ವರ್ಷ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಯಾಗಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.

ಸಮರ್ಥ ಬದುಕು ಸಾಗಿಸಿದ್ದಾರೆ: ನಾರಾಯಣ ಭಟ್
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕರಾದ ಟಿ.ನಾರಾಯಣ ಭಟ್ ಅವರು ಮಾತನಾಡಿ, ವೇದವ್ಯಾಸ ಆಚಾರ್ಯ ಅವರು 45ವರ್ಷ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿದು ದೇವಸ್ಥಾನ ಹಾಗೂ ಊರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 25ವರ್ಷ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ ಪ್ರಾಥಮಿಕ, ಪ್ರೌಢಶಾಲೆಯ ಅಭಿವೃದ್ಧಿಯೊಂದಿಗೆ ಪ.ಪೂ.ಕಾಲೇಜು ಆರಂಭಕ್ಕೂ ಕಾರಣರಾಗಿದ್ದಾರೆ. ವಿದ್ಯೆ ಇಲ್ಲದೇ ಇದ್ದರೂ ಸಮರ್ಥವಾಗಿ ಬದುಕು ಸಾಗಿಸಿದ್ದಾರೆ. ಕಲಾಪೋಷಕರೂ ಆಗಿದ್ದ ವೇದವ್ಯಾಸ ಆಚಾರ್ಯ ಅವರದ್ದು ಬಹುಮುಖ ಪ್ರತಿಭೆ ಎಂದರು.

ಪ್ರಥಮ ಆತಿಥ್ಯ ಸಿಗುತಿತ್ತು: ಸೇಸಪ್ಪ ರೈ
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ವೇದವ್ಯಾಸ ಆಚಾರ್ಯ ಅವರದ್ದು ರಾಜಕಲೆ, ಎಲ್ಲಾ ಕಾರ್ಯಕ್ರಮದಲ್ಲೂ ಅವರಿಗೆ ಪ್ರಥಮ ಆತಿಥ್ಯ ಸಿಗುತಿತ್ತು. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದಾರೆ. ಕ್ಷೀಣಾವಸ್ಥೆಯಲ್ಲಿದ್ದ ವಿದ್ಯಾಸಂಸ್ಥೆಯನ್ನು ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಸತೀಶ್ ಭಟ್ ಅವರು ಮಾತನಾಡಿ, ಎನ್.ವೇದವ್ಯಾಸ ಆಚಾರ್ಯ ಅವರು ನನ್ನ ವೃತ್ತಿ ಜೀವನಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಶಿಕ್ಷಕರಿಗೆ ಸಹಕಾರ ನೀಡಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ನಿವೃತ್ತ ಶಿಕ್ಷಕ ರಾಮಭಟ್ ಅವರು ಮಾತನಾಡಿ, ವೇದವ್ಯಾಸ ಆಚಾರ್ಯ ಅವರು ಹೋರಾಟಗಾರ, ಹಠವಾದಿಯಾಗಿದ್ದರು. ದಿ.ಇಜ್ಜಾವು ಸುಬ್ರಾಯ ಹಾಗೂ ವೇದವ್ಯಾಸ ಆಚಾರ್ ಅವರು ರಾಮ, ಕೃಷ್ಣರಂತೆ ಕೆಲಸ ಮಾಡಿದ್ದಾರೆ. ಅವರಿಬ್ಬರ ಆದರ್ಶವನ್ನು ನಾವು ಪಾಲಿಸಬೇಕು. ವೇದವ್ಯಾಸ ಆಚಾರ್ಯರದ್ದು ಆನೆಯ ನಡಿಗೆ. ಅವರನ್ನು ಈ ಸಂಸ್ಥೆ ಸದಾ ಜ್ಞಾಪಿಸಲೇಬೇಕಾಗಿದೆ ಎಂದರು. ನಿವೃತ್ತ ಶಿಕ್ಷಕ ಬಾಲಚಂದ್ರ ಮುಚ್ಚಿಂತಾಯ ಅವರು ಮಾತನಾಡಿ, ವೇದವ್ಯಾಸ ಆಚಾರ್ಯ ಅವರು ಯಾವುದೇ ಪಕ್ಷ, ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದರೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನಿಂದನೆಯಾದಾಗ ಅದರ ವಿರುದ್ಧ ದಿಟ್ಟವಾಗಿ ಹೋರಾಟ ಮಾಡುತ್ತಿದ್ದರು. ಅವರ ಜ್ಞಾಪಕಶಕ್ತಿ, ರಾಜಕೀಯ ಜ್ಞಾನ, ಪರೋಪಕಾರ ಗುಣ ಅನುಕರಣೀಯ ಎಂದರು. ಪ್ರಾಂಶುಪಾಲ ಚಂದ್ರಶೇಖರ ಕೆ.ಅವರು ಮಾತನಾಡಿ, ಎನ್.ವೇದವ್ಯಾಸ ಆಚಾರ್ಯ ಅವರು ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಆತ್ಮೀಯತೆ, ಅನ್ಯೋನ್ಯತೆಯಿಂದ ಬೆರೆಯುತ್ತಿದ್ದು ಪ್ರತಿಯೊಬ್ಬ ಸಿಬ್ಬಂದಿಯೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತಿದ್ದರು ಎಂದರು.

ಎನ್.ವೇದವ್ಯಾಸ ಆಚಾರ್ಯರ ಒಡನಾಡಿ ಕೆ.ಎಸ್.ಚಂದ್ರಶೇಖರ ಪೂಜಾರಿ ನರಿಮೊಗರು, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಿಂಗಪ್ಪ ಗೌಡ ಕಡೆಂಬ್ಯಾಳ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರು, ಉಪನ್ಯಾಸಕರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಎನ್.ವೇದವ್ಯಾಸ ಆಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯ ಕೊನೆಯಲ್ಲಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here