ಕೆಯ್ಯೂರು ಗ್ರಾಪಂ ಗ್ರಾಮಸಭೆ, ವಿಶೇಷ ಚೇತನರ ಸಮನ್ವಯ ಗ್ರಾಮಸಭೆ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನ 2023-24 ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಹಾಗೂ 2023-24 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮಸಭೆಯು ಜ.16 ರಂದು ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್‌ರವರು ನೋಡೆಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಪ್ರಾರಂಭದಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ನಡೆಯಿತು.

ವಿಶೇಷ ಚೇತನರ ತಾಲೂಕು ಸಮನ್ವಯಾಧಿಕಾರಿ ನವೀನ್‌ರವರು ಮಾಹಿತಿ ನೀಡುತ್ತಾ, ವಿಶೇಷ ಚೇತನರಿಗೆ ಇಲಾಖೆಯಿಂದ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಈಗ ಹೊಸತಾಗಿ ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ವೀಲ್‌ಚೆಯರ್ ಲಭ್ಯವಿದ್ದು ಇದು ಒಂದು ಸಲ ಚಾರ್ಜ್ ಮಾಡಿದರೆ 5 ಕಿ.ಮೀ ಓಡುತ್ತದೆ. ಇದಕ್ಕೆ ವಿಶೇಷ ಚೇತನರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮೂವರಿಗೆ ಸ್ಮರಣಿಕೆ ನೀಡಲಾಯಿತು. ಚಿತ್ರಕಲೆಯಲ್ಲಿ ಮಹಮ್ಮದ್ ಸಹೀಮ್, ಬಾಲ್‌ಪಾಸಿಂಗ್‌ನಲ್ಲಿ ಪ್ರಕಾಶ್ ಎಮ್ ಹಾಗೂ ಸಂಗೀತ ಕುರ್ಚಿಯಲ್ಲಿ ಬಿಲಾಲ್‌ರವರು ಪ್ರಶಸ್ತಿ ಪಡೆದುಕೊಂಡರು.


ಯುಡಿಐಡಿ ಕಾರ್ಡ್/ ಚೆಕ್ ವಿತರಣೆ
ವಿಶೇಷ ಚೇತನರಿಗೆ ಔಷಧಿ ವೆಚ್ಚಕ್ಕಾಗಿ ಗ್ರಾಪಂನ ಶೇ.5 ಅನುದಾನದಲ್ಲಿ ಶುಭ ಮತ್ತು ಸುಮಿತ್ರ ಮಾಡಾವುರವರಿಗೆ ಚೆಕ್ ವಿತರಿಸಲಾಯಿತು. ಮಹಮ್ಮದ್ ಹುಸೈನ್, ಕೃಷ್ಣಪ್ಪ ಕುಲಾಲ್ ಹಾಗೂ ಯುವರಾಜ್‌ರವರಿಗೆ ಯುಡಿಐಡಿ ಕಾರ್ಡ್‌ಗಳನ್ನು ವಿತರಿಸಲಾಯಿತು. ವಿಶೇಷ ಚೇತನರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಇರುವ ಮಾಹಿತಿಯನ್ನು ಗ್ರಾಪಂನ ನೋಟೀಸ್ ಬೋರ್ಡ್‌ನಲ್ಲಿ ಅಳವಡಿಸಲಾಗುವುದು ಎಂದು ಅಧ್ಯಕ್ಷ ಶರತ್ ಕುಮಾರ್‌ರವರು ಸಭೆಗೆ ತಿಳಿಸಿದರು.


ಅಂಗನವಾಡಿಗಳಿಗೆ ಹಾಲಿನ ಹುಡಿ ಬರ‍್ತಾ ಇಲ್ಲ
ಕಳೆದ ಕೆಲವು ತಿಂಗಳುಗಳಿಂದ ಅಂಗನವಾಡಿಗಳಿಗೆ ಹಾಲಿನ ಹುಡಿ ಬರ‍್ತಾ ಇಲ್ಲ ಎಂದು ಖಾದರ್ ದೇವಿನಗರರವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿಯವರು, ಕೆಎಂಎಫ್‌ನಿಂದ ಹಾಲಿನ ಹುಡಿ ಸರಬರಾಜು ಆಗ್ತಾ ಇಲ್ಲ ಆದ್ದರಿಂದ ಅಂಗನವಾಡಿಗಳಿಗೆ ಹಾಲಿನ ಹುಡಿ ಬರ‍್ತಾ ಇಲ್ಲ ಎಂದು ತಿಳಿಸಿದರು. ಕೈಕಂಬ ಅಂಗನವಾಡಿ ದುರಸ್ತಿ ಕಳಪೆಯಾಗಿದೆ. ನೆಲಕ್ಕೆ ಸರಿಯಾದ ರೀತಿಯಲ್ಲಿ ಟೈಲ್ಸ್ ಹಾಕದೆ ಅದು ಒಡೆಯುವ ರೀತಿಯಲ್ಲಿದೆ ಇದರಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಖಾದರ್‌ರವರು ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಆರತಿಯವರು ತಿಳಿಸಿದರು.


ಮರ ಕಡಿದರೆ ತಕ್ಷಣ ತಿಳಿಸಿ
ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ರಚನೆಗೊಂಡ ನೆಡುತೋಪುಗಳಿಂದ ಯಾರೇ ಮರ ಕಡಿದರೂ ತಕ್ಷಣವೇ ಇಲಾಖೆಗೆ ಅಥವಾ ಪಂಚಾಯತ್‌ಗೆ ತಿಳಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಇದಲ್ಲದೆ ಅಕ್ರಮವಾಗಿ ಮರ ಸಾಗಾಟ ಮಾಡುವುದು ಕಂಡು ಬಂದರೂ ನಮಗೆ ತಿಳಿಸಿ, ಸಾರ್ವಜನಿಕರೇ ನಮ್ಮ ಮಾಹಿತಿದಾರರಾಗಬೇಕು ಎಂದು ಸಾಮಾಜಿಕ ಅರಣ್ಯ ಇಲಾಖಾಧಿಕಾರಿ ಕೃಷ್ಣ ಜೋಗಿಯವರು ತಿಳಿಸಿದರು. ಮಾಹಿತಿ ನೀಡಿದವರ ಹೆಸರನ್ನು ಯಾವುದೇ ರೀತಿಯಲ್ಲೂ ಬಹಿರಂಗ ಪಡಿಸುವುದಿಲ್ಲ ಎಂದ ಅವರು ಮರ ಅಕ್ರಮ ಸಾಗಾಟ, ಮರ ಕಳ್ಳಸಾಗಾಣೆ, ಮರ ಕಡಿಯುವುದು ಇತ್ಯಾದಿಗಳು ಕಂಡು ಬಂದಲ್ಲಿ ಟೋಲ್‌ಫ್ರೀ ನಂಬರ್ 1912ಗೆ ಅಥವಾ ನನ್ನ ಮೊಬೈಲ್ ಸಂಖ್ಯೆ 9590621306 ಗೆ ತಿಳಿಸುವಂತೆ ಕೇಳಿಕೊಂಡರು.


ಗ್ರಾಮ ಆರೋಗ್ಯ ಸಹಾಯಕಿಯರೇ ಇಲ್ಲ…!?
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಟ್ಟು 10 ಉಪಕೇಂದ್ರಗಳಿದ್ದು ಒಟ್ಟು 10 ಮಂದಿ ಗ್ರಾಮ ಆರೋಗ್ಯ ಸಹಾಯಕಿಯರು ಇರಬೇಕಿತ್ತು ಆದರೆ ಕೇವಲ 4 ಮಂದಿ ಮಾತ್ರ ಗ್ರಾಮ ಆರೋಗ್ಯ ಸಹಾಯಕಿಯರು ಇದ್ದಾರೆ. ಕೆಯ್ಯೂರು ಗ್ರಾಮಕ್ಕೆ ಆರೋಗ್ಯ ಸಹಾಯಕಿ ಕೂಡ ಇಲ್ಲ ಇದರಿಂದ ತೊಂದರೆಯಾಗುತ್ತಿದೆ ಈ ಬಗ್ಗೆ ಆರೋಗ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು.


ಸಭೆಯಿಂದ ಕೇಳಿಬಂದ ಬೇಡಿಕೆಗಳು
ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಳಕ್ಕೆ ಹೋಗುವ ರಸ್ತೆಯು ಹೊಂಡಗುಂಡಿಗಳಿಂದ ಕೂಡಿದ್ದು ರಸ್ತೆ ದುರಸ್ತಿಯಾಗಬೇಕು ಎಂದು ಪ್ರಮಿತ್‌ರಾಜ್ ಹಾಗೂ ಖಾದರ್ ತಿಳಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅಧ್ಯಕ್ಷ ಶರತ್ ಕುಮಾರ್‌ರವರು ಅನುದಾನಕ್ಕಾಗಿ ಈ ಬಗ್ಗೆ ಶಾಸಕರಿಗೆ ಹಾಗೂ ಸಂಸದರಿಗೆ ಪತ್ರ ಬರೆಯಲಾಗಿದೆ ಎಂದರು. ಎಟ್ಯಡ್ಕ ಶಾಲಾ ರಂಗಮಂದಿರದ ಸಾರಣೆ ಕೆಲಸಕ್ಕೆ ಅನುದಾನ ಕೊಡುವಂತೆ ಸದಸ್ಯ ಬಟ್ಯಪ್ಪ ರೈಯವರು ಕೇಳಿಕೊಂಡರು. ಅರಿಕ್ಕಿಲ ಮಸೀದಿ ಹತ್ತಿರ ದಾರಿದೀಪ ಅಳವಡಿಸುವಂತೆ ಖಾದರ್ ಕೇಳಿಕೊಂಡರು. ತೆಗ್ಗು ಶಾಲಾ ಕಟ್ಟಡದ ಮಾಡು ಬೀಳುವ ಹಂತದಲ್ಲಿದೆ. ಮಕ್ಕಳನ್ನು ಶಾಲಾ ಕಟ್ಟಡದಿಂದ ಸ್ಥಳಾಂತರ ಮಾಡಲಾಗಿದೆ. ಶಾಲಾ ಕಟ್ಟಡ ದುರಸ್ತಿಗೆ ಅನುದಾನದ ಅವಶ್ಯಕತೆ ಇದೆ, ಪಂಚಾಯತ್ ಕಛೇರಿ ಎದುರು ಬಸ್ಸು ನಿಲ್ದಾಣ ಆಗಬೇಕು, ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದ್ದು ದಾರಿಹೋಕರಿಗೆ ನಾಯಿಗಳು ಕಚ್ಚಲು ಬರುತ್ತಿವೆ ಈ ಬಗ್ಗೆ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶರತ್ ಕುಮಾರ್‌ರವರು ನಾಯಿ ಒಂದು ಸಾಕು ಪ್ರಾಣಿಯಾಗಿರುವುದರಿಂದ ಇವುಗಳನ್ನು ರಸ್ತೆ ಬದಿಗೆ ಬಿಡುವುದು ಅಪರಾಧವಾಗಿದೆ. ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ ಆದ್ದರಿಂದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ನಾಯಿಗಳ ಸಂತಾನವನ್ನು ಕಡಿಮೆ ಮಾಡಬಹುದು ಇದಕ್ಕೆ ಪಂಚಾಯತ್‌ನಿಂದ ಈಗಾಗಲೇ ಅನುದಾನ ಇಡಲಾಗಿದೆ ಎಂದರು.


ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರ ಪಲ್ಲತ್ತಡ್ಕ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ವಿಜಯ ಕುಮಾರ್, ಜಯಂತಿ ಎಸ್ ಭಂಡಾರಿ, ಮೀನಾಕ್ಷಿ ವಿ.ರೈ, ಜಯಂತ ಪೂಜಾರಿ ಕೆಂಗುಡೇಲು, ಗಿರಿಜಾ ಕೆ, ಡಿ.ಶೇಷಪ್ಪ, ನೆಬಿಸಾ, ಮಮತಾ ರೈ, ಬಟ್ಯಪ್ಪ ರೈ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಗ್ರಾಮ ಸಭಾ ವರದಿ ಮಂಡಿಸಿದರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ ರೈ, ಧರ್ಮಣ್ಣ, ರಫೀಕ್ ತಿಂಗಳಾಡಿ ಸಹಕರಿಸಿದ್ದರು.


‘ ಗ್ರಾಮದ ಅಭಿವೃದ್ಧಿಗಾಗಿ ಪಂಚಾಯತ್ ಎಲ್ಲಾ ವಿಧದಲ್ಲೂ ಪ್ರಯತ್ನ ಮಾಡುತ್ತಿದೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ. ಗ್ರಾಮಸಭೆಯಲ್ಲಿ ಬಂದ ಬೇಡಿಕೆ, ಸಮಸ್ಯೆ ಹಾಗೂ ಅರ್ಜಿಗಳ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಸರಕಾರದ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಗ್ರಾಮದ ಅಭಿವೃದ್ಧಿಗೆ ತೊಡಗಿಸಿಕೊಳ್ಳಲಾಗುವುದು. ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗಾಗಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here