ಸವಣೂರು: ಫಲಾನುಭವಿಯ ಖಾತೆಗೆ ನೇರ ಪಾವತಿ ಮಾಡಿದ ಮೊದಲ ಸರಕಾರ ನರೇಂದ್ರ ಮೋದಿ ನೇತೃತ್ವದ ಸರಕಾರ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಸವಣೂರು ಪ್ರಾ.ಕೃ.ಪ.ಸ.ಸಂಘದ ವಠಾರದಲ್ಲಿ ಸವಣೂರು ಗ್ರಾಮ ಪಂಚಾಯತ್, ಕೆನರಾ ಬ್ಯಾಂಕ್ ಶಾಖೆ ಸವಣೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಇವರ ಸಹಕಾರದೊಂದಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆ-2023-24 ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಿಂದಾಗಿ 3 ಲಕ್ಷ ಮಂದಿ ಉದ್ಯಮಿಗಳಾಗಿದ್ದಾರೆ. 20 ಸಾವಿರ ಜನರಿಗೆ ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಸಿಕ್ಕಿದ್ದು,ಜಿಲ್ಲೆಯಲ್ಲಿ 83,000 ಕೋಟಿ ರೂ. ಗಳ ವಿವಿಧ ಕಾಮಗಾರಿ ಕೇಂದ್ರ ಸರಕಾರದ ಮೂಲಕ ಮಾಡಲಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.
ಈಗ ಭಾರತ ವಿಶ್ವ ಗುರುವಾಗಿದೆ.ಆಮೇರಿಕದ ದೊಡ್ಡ ಪತ್ರಿಕೆಯ ಸರ್ವೆ ಪ್ರಕಾರ ನರೇಂದ್ರ ಮೋದಿ ಜಗತ್ತಿನ ಜನಪ್ರಿಯ ನಾಯಕ. ಈ ಮೂಲಕ ಭಾರತದ ಕೀರ್ತಿ ಎತ್ತರಕ್ಕೆ ಏರಿದೆ. ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ಮನೆ, ನೀರು,ಶೌಚಾಲಯ, ವಿದ್ಯುತ್, ಗ್ಯಾಸ್, ಅಕ್ಕಿ, ವೃದ್ಧಾಪ್ಯ ವೇತನ,ಕಿಸನ್ ಸಮ್ಮಾನ್, ಜನ್ ಧನ್,ಫಸಲ್ ವಿಮೆ, ಆಯುಷ್ಮಾನ್, ಮುದ್ರಾ ಯೋಜನೆ, ವಿಶ್ವ ಕರ್ಮ ಯೋಜನೆ ಹೀಗೆ ಅನೇಕ ಅದ್ಭುತ ಯೋಜನೆಗಳು ಬಡವರ ಸಂರಕ್ಷಣೆ, ಕೃಷಿಕರಿಗೆ ನೆರವಾಗಿದೆ ಜತೆಗೆ ಎಲ್ಲಾ ಜನರ ಅಭಿವೃದ್ಧಿಗಾಗಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ ಆಡಳಿತವನ್ನು ಮೋದಿ ಸರಕಾರ ನಡೆಸಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಮೂರು ಲಸಿಕೆ ಉಚಿತವಾಗಿ ನೀಡಿರುವ ಜಗತ್ತಿನಲ್ಲಿ ಏಕೈಕ ರಾಷ್ಟ್ರ ನಮ್ಮದು. ಪ್ರತಿಯೊಬ್ಬನಿಗೆ ಯೋಜನೆಗಳು ತಲುಪಬೇಕೆಂದು, ಮನೆ ಬಾಗಿಲಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಗ್ರಾ.ಪಂ.ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ” ಭಾರತ ದೇಶ ಪ್ರಕಾಶಮಾನ ಆಗಿ ಹೊಳೆಯಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರಣ. ಸರಕಾರದ ಯೋಜನೆಗಳು ಕಟ್ಟ ಕಡೆಯ ಜನರಿಗೂ ತಲುಪಬೇಕು ಮತ್ತು ಯೋಜನೆಗಳ ಸಂಪೂರ್ಣ ಅರಿವು ಮೂಡಿಸುವ ಕಾರ್ಯಕ್ರಮ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಗಿದೆ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಭೂತಪೂರ್ವ ಅಭಿವೃದ್ಧಿಯಾಗಿದೆ ಎಂದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ, ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ., ಕೆನರಾ ಬ್ಯಾಂಕ್‌ನ ಎಜಿಎಂ ನರೇಂದ್ರ ರೆಡ್ಡಿ, ಕೆನರಾ ಬ್ಯಾಂಕಿನ ಸವಣೂರು ಶಾಖಾಧಿಕಾರಿ ರಘುನಾಥ ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಅವರು ಉಪಸ್ಥಿತರಿದ್ದರು.
ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್ ಅವರು ವಿಕಸಿತ ಭಾರತ ಸಂಕಲ್ಪ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸವಣೂರು ಪ್ರಾ. ಕೃ.ಸ.ಸಂಘದ ನೂತನ ನಿರ್ದೇಶಕರನ್ನು ಹಾಗೂ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರನ್ನು ಸಂಸದ ನಳಿನ್ ಕುಮಾರ್ ಅವರು ಅಭಿನಂದಿಸಿದರು. ಪವಿತ್ರ ರೂಪೇಶ್ ಪ್ರಾರ್ಥಿಸಿದರು.ಗ್ರಾ.ಪಂ.ಸದಸ್ಯ ರಫೀಕ್ ಎಂ.ಎ ಸ್ವಾಗತಿಸಿದರು. ಎಫ್.ಎಲ್.ಸಿ. ಗೀತಾ ಅವರು ಪ್ರಸ್ತಾವನೆಗೈದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.ಸವಣೂರು ಗ್ರಾ.ಪಂ.ಲೆಕ್ಕಾಧಿಕಾರಿ ಎ.ಮನ್ಮಥ ವಂದಿಸಿದರು. ಕಾರ್ಯಕ್ರಮದಲ್ಲಿ ಭತ್ತದ ಕೃಷಿಯಲ್ಲಿ ಸಾಧನೆ ಮಾಡಿದ ಗಣೇಶ್ ನಿಡ್ವಣ್ಣಾಯ ,ಮುದ್ರಾ ಯೋಜನೆಯ ಮೂಲಕ ಸವಲತ್ತು ಪಡೆದು ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿರುವ ರಕ್ಷಾ ಸವಣೂರು ,ಪುನೀತ್ ಅವರನ್ನು ಅಭಿನಂದಿಸಲಾಯಿತು.
ಮುದ್ರಾ ಯೋಜನೆ ಮೂಲಕ ಉದ್ಯಮ ಆರಂಭಿಸಿದ ಸತ್ಯಪ್ರಕಾಶ್ ಶೆಟ್ಟಿ ಮಂಜುನಾಥನಗರ ,ಉದ್ಯೋಗ ಖಾತರಿ ಹಾಗೂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರ ಸರಕಾರದ ಯೋಜನೆಯಿಂದ ಯಶಸ್ವಿಯಾಗಿರುವ ಪುಷ್ಪಾವತಿ ಪುರುಷೋತ್ತಮ ಪಾಲ್ತಾಡಿ ,ಪೋಷಣ್ ಅಭಿಯಾನದ ಫಲಾನುಭವಿ ಸವಿತಾ ರೈ ಪುಣ್ಚಪ್ಪಾಡಿ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಪುಣ್ಚಪ್ಪಾಡಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.ಗ್ರಾ.ಪಂ.ವ್ಯಾಪ್ತಿಯ ಸ್ವಸ್ಥ ಬಾಲ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸವಣೂರು ಗ್ರಾ.ಪಂ.ಸದಸ್ಯರು, ಸಿಬಂದಿಗಳು,ಸಿಎ ಬ್ಯಾಂಕ್ ನಿರ್ದೇಶಕರು ,ಸಿಬಂದಿಗಳು, ಕೆನರಾ ಬ್ಯಾಂಕ್ ಸಿಬಂದಿಗಳು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ, ಉಜ್ವಲ್ ಗ್ಯಾಸ್ ಯೋಜನೆ, ಗ್ರಾ.ಪಂ.25% ನಿಧಿ ಮತ್ತು 5% ನಿಧಿಯಿಂದ ಚೆಕ್ ವಿತರಣೆ, ಆರೋಗ್ಯ ತಪಾಸಣೆ, ಕಂದಾಯ ಇಲಾಖೆಯಿಂದ ದೊರೆಯುವ ಸವಲತ್ತು ವಿತರಣೆ ಮತ್ತು ಕೇಂದ್ರ ಸರಕಾರದಿಂದ ಅನುಷ್ಠಾನವಾಗುವ ಯೋಜನೆಗಳ ಮಾಹಿತಿ ನೀಡಲಾಯಿತು.