ಶಾಂತಿಮೊಗೇರು ಕುಮಾರಧಾರ ನದಿ ಕಿಂಡಿ ಅಣೆಕಟ್ಟಿಗೆ ಕೊನೆಗೂ ಹಲಗೆ ಜೋಡಣೆ

0

ಕಾಣಿಯೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸಲುವಾಗಿ ಕುಮಾರಧಾರ ನದಿಗೆ ಶಾಂತಿಮೊಗೇರು ಎಂಬಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಲು ಅಣೆಕಟ್ಟೆಗೆ ಹಲಗೆ ಜೋಡಣೆ ಕಾರ‍್ಯ ಕಳೆದರಡು ದಿನಗಳಿಂದ ನಡೆಯುತ್ತಿದೆ.


ಕಳೆದ ನಾಲ್ಕು ವರ್ಷಗಳಿಂದ ನಿಧಾನಗತಿಯಲ್ಲಿ ನಿರ್ಮಾಣವಾಗಿ ಕಳೆದ ವರ್ಷ ಲೋಕಾರ್ಪಣೆಯಾಗಿ ಹಲಗೆ ಜೋಡಣೆ ನಡೆಯಿತು. ಬೇಸಿಗೆ ಅಂತ್ಯಕ್ಕೆ ಹಲಗೆ ಜೋಡಿಸಿದ ಪರಿಣಾಮ ನೀರು ಸಂಗ್ರಹ ಅಷ್ಟಕಷ್ಟೆ, ಅಲ್ಲದೆ ಸರಿಯಾದ ರೀತಿಯಲ್ಲಿ ಹಲಗೆ ಜೋಡಣೆಯಾಗದೆ ನೀರು ಸೋರುತ್ತಿತ್ತು. ನದಿಯಲ್ಲಿ ಸಾಕಷ್ಟು ನೀರು ಇದ್ದಾಗ ಹಲಗೆ ಜೋಡಿಸಿದರೆ ನೀರು ಹೆಚ್ಚು ಸಂಗ್ರಹವಾಗುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿತ್ತು. ಆದರೆ ಈ ಬಾರಿ ಬೇಸಿಗೆ ಆರಂಭವಾದರೂ ನೀರಿನ ಒಳ ಹರಿವು ಕಡಿಮೆಯಾಗುವ ಮುನ್ನ ಹಲಗೆ ಜೋಡಣೆಯಾಗಬೇಕೆನ್ನುವುದು ಈ ಭಾಗದ ರೈತರ ಬೇಡಿಕೆಯಾಗಿತ್ತು. ಈ ಬಗ್ಗೆ ಸುದ್ದಿ ಬಿಡುಗಡೆ ವರದಿ ಪ್ರಕಟಿಸಿ ಸಂಬಂದಪಟ್ಟವರ ಗಮನ ಸೆಳೆದಿತ್ತು. ಶೀಘ್ರದಲ್ಲಿ ಹಲಗೆ ಜೋಡಿಸುವ ಕಾರ್ಯ ನಡೆಸಲಾಗುವ ಭರವಸೆಯನ್ನು ಸಂಬಂದಪಟ್ಟ ಅಧಿಕಾರಿಗಳು ನೀಡಿದ್ದರು. ಅಂತೆಯೆ ಹಲಗೆ ಜೋಡಣೆ ಕಾರ್ಯ ಇದೀಗ ನಡೆಯುತ್ತಿದೆ.


ಕಿಂಡಿ ಅಣೆಕಟ್ಟಿನಿಂದ ಉದ್ದೇಶಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರಿನ ಮೂಲ ಒದಗಿ ಬಂದಿದೆ. ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಮುಖಾಂತರ ಈ ಯೋಜನೆ ಅನುಷ್ಠಾವಾಗಿದೆ. ಕುಮಾರಧಾರ ನದಿಗೆ ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿ ಬಳಿ ಎರಡು ಕಿಂಡಿ ಅಣೆಕಟ್ಟುಗಳು ಕುಡಿಯುವ ನೀರಿನ ಬಳಕೆಗೆ ಉಪಯೋಗವಾಗುತ್ತಿದೆ. ಶಾಂತಿಮೊಗರಿನಲ್ಲಿ ನಿರ್ಮಾಣವಾದ ಮೂರನೇ ಅತೀ ದೊಡ್ಡ ಅಣೆಕಟ್ಟು ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ ನಿರ್ಮಾಣ ಮಾಡಲಾಗಿದೆ.


7.5 ಕೋಟಿ ರೂ ಯೋಜನೆ: ಕುಡಿಯುವ ನೀರಿನ ಭವಣೆ ನೀಗಿಸಲು ಈ ಹಿಂದಿನ ಸಚಿವ ಎಸ್ ಅಂಗಾರ ಅವರ ಶಿಪಾರಸ್ಸಿನಂತೆ ಶಾಂತಿಮೊಗರು ಎಂಬಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಯೋಜನೆಗೆ ಸುಮಾರು 7.5 ಕೋಟಿ ರೂ ವ್ಯಯಿಸಲಾಗಿದೆ. ನದಿಯ ತಳಮಟ್ಟದಿಂದ 4 ಮೀಟರ್ ಎತ್ತರದಲ್ಲಿ ನಿರ್ಮಾಣವಾದ ಈ ಅಣೆಕಟ್ಟು 221.4 ಮೀಟರ್ ಉದ್ದ ಹಾಗು 3.75 ಮೀ ಅಗಲವಿದೆ. 56 ಪಿಲ್ಲರ್ ಗಳ ಸ್ಲಾಬ್ ಜೋಡಿಸಲಾಗಿದೆ. ಎಲ್ಲ ಹಲಗೆ ಜೋಡಿಸಿದರೆ 18.56 ಎಂಸಿಎ-ಟಿ ನೀರು ಶೆಖರಣೆಯಾಗಲಿದೆ.


ಹಲಗೆ ಜೋಡಿಸಿರುವುದು ಮಾತ್ರ, ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ:
ಈ ನೀರು ಕುಡಿಯುವ ನೀರಿಗಾಗಿ ಬಳಕೆ ಮಾಡುವ ಉದ್ದೇಶವಿರುವುದರಿಂದ ಪೈಪು ಲೈನ್ ಮೂಲಕ ಶಾಂತಿಮೊಗೇರುವಿನ ಆಸು ಪಾಸಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಇತ್ತ ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ನೀರು ಸರಬರಾಜು ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನ ಮಾಡುವ ಉದ್ದೇಶ ಹೊಂದಲಾಗಿದೆ. ಆದರೆ ಇದೆಲ್ಲಾ ಮರೀಚಿಕೆಯಾಗಿ ಉಳಿದಿದೆ.


ಕಿಂಡಿ ಅಣೆಕಟ್ಟು ನದಿಯ ಇಕ್ಕೆಲಗಳಲ್ಲಿ ಸುಮಾರು ಎರಡರಿಂದ ಮೂರು ಕಿಲೋ ಮೀಟರ್ ಸುತ್ತಳತೆಯಲ್ಲಿ ಅಂತರ್ಜಳ ವೃದ್ಧಿಯಾಗಲಿದೆ, ಕೃಷಿಕರ ಕೊಳವೆಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಲಿದೆ. ಎನ್ನುವ ಆಶಾಭಾವ ರೈತರದ್ದಾಗಿದೆ.
ಕಳೆದ ಎರಡು ದಿನಗಳಿಂದ ಯಂತ್ರ ಹಾಗು ಮಾನವ ಶ್ರಮದ ಮೂಲಕ ಎಲ್ಲಾ ಹಲಗೆ ಜೋಡಿಸುವ ಕಾರ್ಯ ನಡೆಸಲಾಗುತ್ತಿದೆ.ಇನ್ನೆರಡು ದಿನಗಳಲ್ಲಿ ಸಂಪೂರ್ಣಗೊಳಿಸಲಾಗುವುದು. ಕಳೆದ ಬಾರಿಯಂತೆ ಪೂರ್ತಿ ಅಳವಡಿಸಲಾಗುವುದು ಎಂದು ಸುಳ್ಯ ಸಣ್ಣ ನೀರಾವರಿ ಇಲಾಖ ಸಹಾಯಕ ಇಂಜಿನಿಯರ್ ಹೇಮಂತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here