ವಿಟ್ಲ ಸರಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಸಂಚಾರಿ ನಿಯಮಗಳು ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಾಗಾರ

0

ವಿಟ್ಲ: ವಿಟ್ಲಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ NSS ವತಿಯಿಂದ ಸಂಚಾರಿ ನಿಯಮಗಳು ಮತ್ತು ಮಾದಕ ವಸ್ತುಗಳ ವಿರುದ್ದ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ವಿಟ್ಲ ಪೋಲೀಸ್ ಉಪನಿರೀಕ್ಷಕ ಗೋವಿಂದ ದೊಡ್ಡಮನಿ ಮಾತನಾಡಿ ಹದಿಹರೆಯದ ಯುವಕರು ಹೆಚ್ಚುಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿದ್ದು, ಇದರಿಂದಾಗಿ ಯುವಕರಲ್ಲಿ ಮಾನಸಿಕ ತೊಂದರೆಗಳು ಹಾಗೂ ಆತ್ಮಹತ್ಯಾ ಪ್ರವೃತ್ತಿ ಹೆಚ್ಚಾಗುತ್ತಿದೆ. ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾದ ವ್ಯಕ್ತಿಯ ವಿವೇಕ ಸಾಮರ್ಥ್ಯವನ್ನು ಕುಗ್ಗಿಸುವುದರಿಂದ ಅಪರಾಧಗಳನ್ನು ಮಾಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಅಲ್ಲದೇ ವ್ಯಕ್ತಿ ತನಗೆ ಹಾಗೂ ಸಮಾಜಕ್ಕೆ ಭಾಧಕನಾಗುತ್ತಾನೆ ಮತ್ತು ಸಂಪೂರ್ಣವಾಗಿ ಆತನ ಜೀವನವನ್ನೆ ನಾಶಪಡಿಸುತ್ತಾನೆ.
ರಸ್ತೆ ಸುರಕ್ಷತೆಯಲ್ಲಿ ಚಾಲಕನ ಕರ್ತವ್ಯ ಬಹಳ ಮುಖ್ಯ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮಗಳನ್ನು ತಿಳಿದಿರುವುದು ಅತ್ಯಗತ್ಯ. ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಲಾಯಿಸುವುದರಿಂದ ಇತ್ತೀಚೆಗೆ ಅಪಘಾತ ಪ್ರಕರಣಗಳಲ್ಲಿ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಆದ್ದರಿಂದ ಯುವಜನರು ಈ ಬಗ್ಗೆ ಎಚ್ಚರ ವಹಿಸಿ ಜಾಗೃತವಾಗಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಪ್ರಾಚಾರ್ಯ ಹರೀಶ್‌ ಮಾತನಾಡಿ ಯುವಜನರು ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗಿ, ಸಂಸ್ಥೆಯು ಮಾದಕ ವಸ್ತುಗಳ ಸೇವನಾ ಮುಕ್ತವಾಗಿ ಪರಿವರ್ತನೆಯಾಗಲು ಪ್ರತಿಯೊಬ್ಬರೂ ಪ್ರತಿಜ್ಞೆಯನ್ನು ಮಾಡಬೇಕೆಂದರು.


ಪೋಲೀಸ್ ಪೇದೆಗಳಾದ ಸತೀಶ್ ಹಾಗೂ ಚಿದಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಹಿತೇಶ್ ಪ್ರಾರ್ಥಿಸಿ. ಕಿರಿಯ ತರಬೇತಿ ಅಧಿಕಾರಿ ರತಿ ಸ್ವಾಗತಿಸಿ, ಸುಕನ್ಯರಾವ್ ವಂದಿಸಿ, ಜೋಯ್ಲಿನ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.ಕಿರಿಯ ತರಬೇತಿ ಅಧಿಕಾರಿ ಶರತ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು.

LEAVE A REPLY

Please enter your comment!
Please enter your name here