ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ-ಜನವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರು ಶಿಫಾರಸ್ಸಿಗೆ ಸೂಚನೆ

0

ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದ್ದು ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರ್ನಾಟಕ ಪ್ರದೇಶ ಚುನಾವಣಾ ಸಮಿತಿ ಸಭೆ ನಡೆದಿದ್ದು ದ.ಕ.ಸೇರಿದಂತೆ ರಾಜ್ಯದ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಹತ್ವದ ಚರ್ಚೆಗಳು ನಡೆದಿವೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಇಂದು ನಡೆದ ಸಭೆಯಲ್ಲಿ ಹಲವು ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದೆ.ಜನವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.


ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಹಲವು ಅಭ್ಯರ್ಥಿಗಳ, ಆಕಾಂಕ್ಷಿಗಳ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿದೆ.ಎಲ್ಲಾ ಸದಸ್ಯರಿಗೆ ವೈಯಕ್ತಿಕ ಅಭಿಪ್ರಾಯ ತಿಳಿಸುವಂತೆ ಹೇಳಿದ್ದೇವೆ.ಈ ತಿಂಗಳ ಅಂತ್ಯದೊಳಗೆ ಕೇಂದ್ರ ಚುನಾವಣಾ ಸಮಿತಿಗೆ ಹೆಸರುಗಳನ್ನು ಶಿಫಾರಸು ಮಾಡಬೇಕು.ಬಳಿಕ ಡಿಸಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಆಕಾಂಕ್ಷಿಗಳ ಜತೆ ವಿಸ್ತತ ಚರ್ಚೆ ನಂತರ ಅಭ್ಯರ್ಥಿ ಹೆಸರು ಅಂತಿಮಗೊಳಿಸುತ್ತೇವೆ ಎಂದು ಸುರ್ಜೇವಾಲ ಸ್ಪಷ್ಟಪಡಿಸಿದರು.ಆಕಾಂಕ್ಷಿಗಳ ಹೆಸರು ಕೆಪಿಸಿಸಿಯಿಂದ ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸು ಹೋಗುತ್ತದೆ.ಅಲ್ಲಿಂದ ಕೇಂದ್ರ ಚುನಾವಣಾ ಸಮಿತಿಗೆ ಹೋಗಿ ಬಳಿಕ ಕೇಂದ್ರ ಚುನಾವಣಾ ಸಮಿತಿ ಎಲ್ಲವನ್ನೂ ನಿರ್ಧಾರ ಮಾಡುತ್ತೆ.ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದು ಸುರ್ಜೇವಾಲ ಹೇಳಿದರು.

ದ.ಕ.ಕ್ಷೇತ್ರಕ್ಕೆ ಸೊರಕೆ,ರಮಾನಾಥ ರೈ, ಮಿಥುನ್ ರೈ,ಪದ್ಮರಾಜ್ ಹೆಸರು
ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ದ.ಕ.ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿತನಕ್ಕೆ ಮಾಜಿ ಸಚಿವ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಪುತ್ತೂರಿನ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ,ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ,ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಿಥುನ್ ರೈ ಮತ್ತು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಮತ್ತು ಮಾಜಿ ಕೇಂದ್ರ ಸಚಿವರಾಗಿರುವ ಬಿ.ಜನಾರ್ದನ ಪೂಜಾರಿಯವರ ಆಪ್ತರಾಗಿರುವ ಪದ್ಮರಾಜ್ ಆರ್.ಅವರ ಹೆಸರು ಕೇಳಿ ಬರುತ್ತಿದೆ.ಈ ಪೈಕಿ ವಿನಯ ಕುಮಾರ್ ಸೊರಕೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಮಮತಾ ಗಟ್ಟಿ ಹೆಸರು ಫೈನಲ್?
ದ.ಕ.ಜಿಲ್ಲಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ ನೇಮಕ ಶೀಘ್ರ ನಡೆಯಲಿದ್ದು ದ.ಕ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿಯವರ ಹೆಸರು ಕಾಂಗ್ರೆಸ್ ಜಿಲ್ಲಾಧ್ಯಕ್ಷತೆಗೆ ಪ್ರಬಲವಾಗಿ ಕೇಳಿ ಬರುತ್ತಿದೆ.ಹಾಲಿ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಶಾಸಕರೂ ಆಗಿರುವ ಹರೀಶ್ ಕುಮಾರ್ ಅವರ ಅಧಿಕಾರದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಮೊದಲೇ ಜಿಲ್ಲಾಧ್ಯಕ್ಷರ ನೇಮಕವಾಗಲಿದ್ದು ಮಮತಾ ಗಟ್ಟಿಯವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here