ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಅಶ್ವತ್ಥೋಪನಯನ, ವಿವಾಹ – ಧಾರ್ಮಿಕ ಸಭೆ, ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ

0

ಪುತ್ತೂರು: ಕಳೆದ ಮೂರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಸವಿ ನೆನಪಿಗಾಗಿ ಆ ದಿನವೇ ಮುಕ್ವೆ ಮಜಲುಮಾರು ಶ್ರೀಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿ ನೆಟ್ಟಿದ್ದ ಅಶ್ವತ್ಥ ಗಿಡಕ್ಕೆ ಜ.22ರಂದು ರಾಮ ಮಂದಿರ ಪ್ರತಿಷ್ಠಾಪನೆಯ ಸಂಭ್ರಮದ ದಿನವೇ ಅಶ್ವತ್ಥ ಗಿಡಕ್ಕೆ ಉಪನಯನ, ವಿವಾಹಾದಿ ಸಂಸ್ಕಾರಗಳು ಹಾಗೂ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ನರಿಮೊಗರು ಗ್ರಾಮದ ಕರಸೇವಕರನ್ನು ಸನ್ಮಾನಿಸಿ, ಗೌರವಿಸುವಂತಹ ವೈಶಿಷ್ಠ್ಯಪೂರ್ಣ ಕಾರ್ಯಕ್ರಮವು ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಅಶ್ವತ್ಥ ಉಪನಯನ, ವಿವಾಹ ಕಾರ್ಯಕ್ರಮದಲ್ಲಿ ಜ.21ರಂದು ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ ಪುಣ್ಯಾಹ ವಾಚನ, ವಾಸ್ತು ಹೋಮ ರಕ್ಷೋಘ್ನ ಹೋಮ ನೆರವೇರಿತು. ಜ.22, ಪ್ರಾತಃಕಾಲ ಶ್ರೀ ದೇವರಿಗೆ ಅಷ್ಟೋತ್ತರ ಸಂಖ್ಯೆಯಲ್ಲಿ ಸೀಯಾಳ ಅಭಿಷೇಕ ಬೆಳಿಗ್ಗಿನ ಪೂಜೆ, ನಂತರ ಅಶ್ವತ್ಥ ಪ್ರತಿಷ್ಠಾ ಕಲಷಾಭಿಷೇಕ, ಉಪನಯನ ನಡೆದು ನಂತರ ಮುಕ್ವೆಯಲ್ಲಿರುವ ಅರಣ್ಯ ಇಲಾಖೆಯ ಕೇಂದ್ರೀಯ ಸಸ್ಯ ಕ್ಷೇತ್ರದಿಂದ ವಧುವಿನ ದಿಬ್ಬನ(ನೆಲ್ಲಿಗಿಡ) ಬ್ಯಾಂಡ್, ವಾಲಗ, ವಾದ್ಯಘೋಷ, ಭಜನೆಯ ಝೇಂಕಾರ ಹಾಗೂ ಪೂರ್ಣಕುಂಬ ಸ್ವಾಗತದೊಂದಿಗೆ ಸಾಗಿಬಂದಿದೆ. ಬಳಿಕ ಪೂರ್ವ ಸಂಪ್ರದಾಯದಂತೆ ಅಶ್ವತ್ಥ ವಿವಾಹ ಮತ್ತು ಕಲ್ಪೊಕ್ತ ಪೂಜೆ, ಮಧ್ಯಾಹ್ನ ಶ್ರೀ ದೇವರ ಸನ್ನಿಧಿಯಲ್ಲಿ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭೆ, ಗೌರವಾರ್ಪಣೆ:
ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಯೋಧ್ಯ ಕರಸೇವಕರಾಗಿರುವ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಮಾತನಾಡಿ, ಅಯೋಧ್ಯಯ ಶ್ರೀರಾಮ ಮಂದಿರವು ಸಮಸ್ತ ಭಾರತೀಯರ ಅಸ್ಮಿತೆಯ ಗುರು. ಜಾತಿ, ಪಂಥಗಳ ಬದಿಗಿಟ್ಟು ಸಮಸ್ತ ಭಾರತೀಯರ ಏಕತೆಯ ಫಲವಾಗಿ ಭವ್ಯ ಮಂದಿರ ನಿರ್ಮಾಣವಾಗಿದೆ. ಭವ್ಯ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಐತಿಹಾಸಿಕ ಕ್ಷಣವನ್ನು ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವ ಕಾಲ ನಮಗೆ ಒದಗಿದೆ. ಇಂದಿನಿಂದ ಭಾರತ ಬದಲಾವಣೆಯತ್ತ ಸಾಗಲಿದೆ. ಈ ದಿನವು ಪರಮಪವಿತ್ರವಾದ ಕ್ಷಣ. ಮತ್ತೆ ಭಾರತ ವಿಕಾಸವಾದತ್ತ ಸಾಗಲಿದೆ. ನೋವು, ಬಲಿದಾನಗಳ ಐನೂರು ವರ್ಷ ಕಳೆದರೂ ರಾಮನನ್ನು ಮರೆತು ಜೀವಿಸಿಲ್ಲ. ಮಂದಿರ ನಿರ್ಮಿಸುವ ಹಂಬಲತೆ ಪ್ರತಿಯೊಬ್ಬ ಭಾರತೀಯರಲ್ಲಿತ್ತು. ಮಂದಿರ ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ಕೇರಳದಿಂದ ಕಾಶ್ಮೀರದ ತನಕ ಏಕತೆ ಮೂಡಿಸಿದೆ. ಅಯೋಧ್ಯೆಯಲ್ಲಿ ಮಸೀದಿ ಕೆಡವಿ ಅಲ್ಲಿ ತಾತ್ಕಾಲಿಕ ಮಂದಿರ ನಿರ್ಮಿಸುವ ಭಾಗ್ಯವೂ ನಮಗೂ ಲಭಿಸಿತ್ತು ಎಂದು ಹೇಳಿ ಕರಸೇವೆ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.

ಅಯೋಧ್ಯೆಯ ಕರಸೇವಕ ಹರೀಶ್ ಬೈಪಾಡಿತ್ತಾಯ ಮಾತನಾಡಿ, ಶ್ರೀರಾಮ ಮಂದಿರ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠೆಯಾಗುವ ದಿನವನ್ನು ಭಾರತದಲ್ಲಿ ಮಾತ್ರವಲ್ಲ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಸಂಭ್ರಮಿಸುತ್ತಿದ್ದು, ಅವಿಸ್ಮರಣೀಯ ದಿನವಾಗಿದೆ. 500 ವರ್ಷಗಳ ಬಳಿಕ ಭವ್ಯ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠೆಯಾಗುವ ಮೂಲಕ ಎಲ್ಲರ ಅಯೋಧ್ಯೆಯತ್ತವಾಗಿದೆ. ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ಕ್ಷಣ, ಪ್ರಧಾನಿ ನರೇಂದ್ರ ಮೋದಿಯವರಿಂದ ಆಗಿದೆ. ನಮ್ಮ ಜನ್ಮದ ಸಾರ್ಥಕತೆಯಾಗಿದೆ. ಸಂಘಟನೆಯ ಹೋರಾಟಕ್ಕೆ ಫಲ ದೊರೆತಿದೆ. ಕರಸೇವೆಯಲ್ಲಿ ಪ್ರತಿಯೊಬ್ಬರಲ್ಲಿಯೂ ಹನುಮಂತನ ಶಕ್ತಿ ಇತ್ತು. ನಮ್ಮಿಂದ ಬಲಾತ್ಕಾರವಾಗಿ ಪಡೆದದ್ದನ್ನು ನಾವು ತ್ಯಾಗದಿಂದ ಪಡೆದಿದ್ದೇವೆ. ಅಹಿಂಸೆ ಹಾಗೂ ಸತ್ಯದಿಂದ ನಡೆಸಿದ ಕರಸೇವೆ ಮೂಲಕ ನಾಂದಿ ಇಂದು ಇಂದು ಭವ್ಯ ಮಂದಿರ ನಿರ್ಮಾಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ, ಅಯೋಧ್ಯ ಕರಸೇವಕರನ್ನು ಗೌರವಿಸಿದ ಮಜಲುಮಾರು ಶ್ರೀ ಉಮಾಮಹೇಶ್ವರ ಟ್ರಸ್ಟ್‌ನ ಸದಸ್ಯ ಡಾ.ಸುಜಯ್ ತಂತ್ರಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯಾಗುವ ಮೂಲಕ ವಿಶ್ವವೇ ಆದರ್ಶ ಪುರುಷನ ಭಾವನೆಗಳಿಗೆ ಸಾಕ್ಷಿಯಾದ ದಿನವಾಗಿದೆ. ಭಾರತವು ಇನ್ನು ಭದ್ರವಾಗಿದೆ. ವಿಶ್ವಗುರುವಾಗಲು ನಾಂದಿಯಾಡಿದೆ. ಸಂವಿಧಾನ ಬದ್ಧವಾಗಿ ಮಂದಿರ ನಿರ್ಮಾಣವಾಗಿದ್ದ ವಿಶ್ವವೇ ಭಾರತದತ್ತ ನೋಡುವಂತಾಗಿದೆ. ಅಯೋಧ್ಯೆಯ ಕರೆ ಸೇವೆಯಲ್ಲಿ ತ್ಯಾಗ, ಬಲಿದಾನಗಳ ಮೂಲಕ ನರಿಮೊಗರು ಗ್ರಾಮದವರೂ ಭಾಗವಹಿಸಿದ್ದು ಅವರಿಗೆ ಪ್ರಣಾಮಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ನರಿಮೊಗರು ಗ್ರಾಮದ ಅಕ್ಷತಾ ಅಭಿಯಾನದ ಸಂಚಾಲಕ ಪ್ರವೀಣ್ ನಾಯಕ್ ಸೇರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಯೋಧ್ಯ ಕರಸೇವಕರಿಗೆ ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ನರಿಮೊಗರು ಗ್ರಾಮದಿಂದ ಅಯೋಧ್ಯೆಗೆ ಕರಸೇವೆಗೆ ತೆರಳಿದ್ದ ವಸಂತ ಗೌಡ ಸೇರಾಜೆ, ಅವಿನಾಶ್ ಕೊಡಂಕಿರಿ, ಪ್ರವೀಣ್ ನಾಕ್ ಸೇರಾಜೆ, ನಾರಾಯಣ ಬನ್ನಿಂತಾಯ, ಸೀತಾರಾಮ ಆಚಾರ್ಯ, ವಿಜಯ ಮಾಯಂಗಲ, ಕರುಣಾಕರ ಗೌಡ ಮಣಿಯ, ವಿಷ್ಣುಮೂರ್ತಿ ಕೆದಿಲಾಯ ಶಿಬರ, ಪಿ.ಜಿ ಚಂದ್ರಶೇಖರ ರಾವ್ ಹಾಗೂ ಹರೀಶ್ ಬೈಪಾಡಿತ್ತಾಯರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ಎಲ್‌ಇಡಿ ಪರದೆಯ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮಧ್ಯಾಹ್ನ ಪರದೆಯಲ್ಲಿ ಶ್ರೀರಾಮ ಪ್ರತಿಷ್ಠೆಯ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಮಂದಿ ಎದ್ದು ನಿಂತು ಗೌರವ ಸಲ್ಲಿಸಿದರು. ಶ್ರೀರಾಮ ಜಯರಾಮ ಜಯ ಜಯ ರಾಮ ಎಂದು ಜಯಕಾರ ಹಾಕಿದರು.
ಮಜಲುಮಾರು ಉಮಾಮಹೇಶ್ವರ ಸೇವಾ ಟ್ರಸ್ಸ್‌ನ ಕೋಶಾಧಿಕಾರಿ ನವೀನ್ ರೈ ಶಿಬರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದುಷಿ ಕ್ಷಮಾ ಶ್ರೀರಾಮನ ಭಕ್ತಿಗೀತೆ ಹಾಡಿದರು. ಪ್ರವೀಣ್ ಸೇರಾಜೆ ಕಾರ್ಯಕ್ರಮ ನಿರೂಪಿಸಿ, ಯಶೋಧ ಗೌಡ ವಂದಿಸಿದರು. ದೇವಸ್ಥಾನದ ಟ್ರಸ್ಟ್ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here