ದಾರಿ ತಪ್ಪಿ ಬಂದ ಒಂಟಿ ಸಲಗ-ಕೊಳ್ತಿಗೆ ಪರಿಸರದಲ್ಲಿ ಮತ್ತೆ ಕಾಡಾನೆ ರಂಪಾಟ-ಕೃಷಿ ಹಾನಿ, ಆತಂಕದಲ್ಲಿ ಗ್ರಾಮಸ್ಥರು-ಆನೆಯನ್ನು ಓಡಿಸುವಂತೆ ಮನವಿ

0

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನೆಗುಂಡಿ, ಕೋರಿಕ್ಕಾರು, ದುಗ್ಗಳ, ಕರ್ತಡ್ಕ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಸಲಗವೊಂದು ರಂಪಾಟ ಎಬ್ಬಿಸಿದ್ದು ಗ್ರಾಮಸ್ಥರ ನಿದ್ದೆಗೆಡಿಸಿದೆ. ದೂರದ ಕೇರಳದ ಕಾಡಿನಿಂದ ದಾರಿ ತಪ್ಪಿ ಬಂದಿರುವ ಒಂಟಿ ಸಲಗವೊಂದು ಕಳೆದ ಒಂದು ವಾರದಿಂದ ಆನೆಗುಂಡಿ ರಕ್ಷಿತಾರಣ್ಯಕ್ಕೆ ಸೇರಿದ ಕರ್ತಡ್ಕ, ದುಗ್ಗಳ, ಕೋರಿಕ್ಕಾರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗುತ್ತಿದ್ದು ಅಲ್ಲಿನ ರೈತರ ಕೃಷಿ ತೋಟಗಳಿಗೆ ಹಾನಿಯುಂಟು ಮಾಡುತ್ತಿದೆ. ಆನೆಯ ರಂಪಾಟದಿಂದ ಈ ಭಾಗದ ಜನರಲ್ಲಿ ಆತಂಕ ಉಂಟಾಗಿದ್ದು ಆನೆಯನ್ನು ಓಡಿಸುವ ಸಲುವಾಗಿ ಅರಣ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ. ಆನೆಗುಂಡಿ ರಕ್ಷಿತಾರಣ್ಯದಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗವನ್ನು ಮತ್ತೆ ಅದರ ಹಿಂಡಿಗೆ ಸೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.


ದಾರಿ ತಪ್ಪಿ ಬಂದಿರಬಹುದೇ ಈ ಒಂಟಿ ಸಲಗ…!?
ಹೀಗೊಂದು ಪ್ರಶ್ನೆ ಈ ಭಾಗದ ಜನರಲ್ಲಿ ಮೂಡಿದೆ. ಕೇರಳದ ಮಂಡೆಕೋಲು ಅರಣ್ಯ ಪ್ರದೇಶದಲ್ಲಿರುವ ಆನೆಯ ಗುಂಪಿಗೆ ಸೇರಿದ ಆನೆ ಇದಾಗಿದೆ ಎನ್ನಲಾಗಿದೆ. ಇದೇ ಗುಂಪಿಗೆ ಸೇರಿದ ಕಾಡಾನೆಯೊಂದು ಗುಂಪಿನಿಂದ ದಾರಿ ತಪ್ಪಿ ಕೆಮ್ಮನಬಳ್ಳಿ, ಅಕ್ಕಿಮಲೆಯಾಗಿ ಆನೆಗುಂಡಿ ರಕ್ಷಿತಾರಣ್ಯಕ್ಕೆ ಬಂದಿರಬಹುದೇ ಎಂದು ಈ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ದಾರಿ ತಪ್ಪಿ ಬಂದಿರುವ ಸಲಗವು ಇದೀಗ ಮರಳಿ ಗುಂಪನ್ನು ಸೇರಲು ಸಾಧ್ಯವಾಗದೇ ಇರುವುದರಿಂದ ಈ ಪರಿಸರದಲ್ಲಿ ರಂಪಾಟ ನಡೆಸುತ್ತಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಪೆರ್ನಾಜೆ, ನೂಜಿಬೈಲು ಪರಿಸರದಲ್ಲೂ ಇದೇ ಆನೆ ರಂಪಾಟ ನಡೆಸಿ ಕೃಷಿಗೆ ಹಾನಿ ಉಂಟು ಮಾಡಿದೆ.

ಆನೆಗೂ ಭಯ, ಗ್ರಾಮಸ್ಥರಿಗೂ ಭಯ…!?
ದೂರದ ಕೇರಳದ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಬಂದಿರುವ ಈ ಪುಂಡ ಆನೆಯೂ ಇದೀಗ ಕೊಳ್ತಿಗೆ ಪರಿಸರದಲ್ಲಿ ರಂಪಾಟ ನಡೆಸುತ್ತಿದ್ದು, ಒಂದು ಕಡೆಯಲ್ಲಿ ಜನರು ಆನೆಯನ್ನು ಓಡಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು ಇದರಿಂದ ಆನೆ ಮತ್ತಷ್ಟು ಭಯಗೊಂಡಿದೆ ಎನ್ನಲಾಗಿದೆ. ಆನೆಯು ಸುಮಾರು 8 ಕಿ.ಮೀ ದೂರದಿಂದ ತಪ್ಪಿಸಿಕೊಂಡು ಈ ಭಾಗಕ್ಕೆ ಬಂದಿರುವುದರಿಂದ ಇದನ್ನು ಮರಳಿ ಗುಂಪಿಗೆ ಸೇರಿಸುವುದು ತ್ರಾಸದ ಕೆಲಸವಾಗಿದೆ. ಒಂದು ಕಡೆಯಲ್ಲಿ ಆನೆ ಭಯಗೊಂಡು ಅತ್ತಿತ್ತ ಓಡಾಡುತ್ತಿದ್ದರೆ ಆನೆಯನ್ನು ಕಂಡು ಗ್ರಾಮಸ್ಥರು ಮತ್ತಷ್ಟು ಭಯಗೊಂಡಿದ್ದಾರೆ. ಸ್ವಲ್ಪ ದಿನಗಳಲ್ಲಿ ಮತ್ತೆ ಆನೆ ಅದರಷ್ಟಕ್ಕೆ ತನ್ನ ಗುಂಪನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಯಾರು ಕೂಡ ಭಯ ಬೀಳುವ ಅವಶ್ಯಕತೆ ಇಲ್ಲ, ಜಾಗೃತೆ ಇರಿ ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.


ಕೃಷಿ ತೋಟಗಳಿಗೆ ನುಗ್ಗಿ ದಾಂಧಲೆ
ಕಳೆದ ರಾತ್ರಿ ದುಗ್ಗಳ ಕರ್ತಡ್ಕದ ಶಶಿಧರ ಕೇಕುಣ್ಣಾಯ ಎಂಬವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಬಾಳೆ ಗಿಡಗಳನ್ನು ನಾಶ ಮಾಡಿದೆ. ಇದಲ್ಲದೆ ಕೆಲವು ಅಡಿಕೆ ಸಸಿಗಳನ್ನು ತುಂಡು ಮಾಡಿ ಕೃಷಿಗೆ ಹಾನಿ ಮಾಡಿದೆ. ಇದಲ್ಲದೆ ದುಗ್ಗಳಕ್ಕೆ ಹೋಗುವ ರಸ್ತೆಗೆ ಮರವೊಂದನ್ನು ಬುಡ ಸಮೇತ ಮಗುಚಿ ಹಾಕುವ ಮೂಲಕ ತನ್ನ ಕೋಪವನ್ನು ತೋರಿಸಿದೆ.


ಆನೆಯನ್ನು ಗುಂಪಿಗೆ ಸೇರಿಸುವುದು ತ್ರಾಸದ ಕೆಲಸ
ಗುಂಪಿನಿಂದ ದಾರಿ ತಪ್ಪಿ ಬಂದಿರುವ ಆನೆಯನ್ನು ಮತ್ತೆ ಅದೇ ಗುಂಪಿಗೆ ಸೇರಿಸುವುದು ಬಹಳ ತ್ರಾಸದ ಕೆಲಸವಾಗಿದೆ. ಒಂದು ಆನೆ ಒಂದೆರಡು ಮೈಲು ದೂರದಿಂದ ತಪ್ಪಿಸಿಕೊಂಡು ಬಂದಿದ್ದರೆ ಅದನ್ನು ಸುಲಭದಲ್ಲಿ ಗುಂಪಿಗೆ ಸೇರಿಸಬಹುದು ಆದರೆ ಸುಮಾರು 8 ಕಿ.ಮೀ ದೂರದಿಂದ ತಪ್ಪಿಸಿಕೊಂಡು ಬಂದ ಆನೆಯನ್ನು ಗುಂಪಿಗೆ ಸೇರಿಸುವುದು ಬಹಳ ತ್ರಾಸದ ಕೆಲಸವಾಗಿದೆ. ಆನೆಯನ್ನು ರಾತ್ರಿ ವೇಳೆಯೇ ಗುಂಪಿಗೆ ಸೇರಿಸುವ ಕೆಲಸ ಮಾಡಬೇಕಾಗುತ್ತದೆ. ಈ ಆನೆಯು ಸುಮಾರು 8 ಕಿ.ಮೀ ದೂರದಿಂದ ಬಂದಿರುವುದರಿಂದ ಮತ್ತೆ ಗುಂಪಿಗೆ ಸೇರಿಸುವುದು ಸ್ವಲ್ಪ ಕಷ್ಟದ ಕೆಲಸ. ಒಂದಷ್ಟು ದಿನಗಳ ಬಳಿಕ ಅದುವೇ ತನ್ನ ಗುಂಪನ್ನು ಹುಡುಕಿಕೊಂಡು ಹೋಗುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here