ಬೊಳ್ಳಾಣದಲ್ಲಿ ನವೀಕೃತ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ, ಧಾರ್ಮಿಕ ಸಭೆ

0

ಪುತ್ತೂರು: ಆರ್ಯಾಪು ಗ್ರಾಮದ ಬೊಳ್ಳಾಣ ಎಂಬಲ್ಲಿ ನವೀಕೃತಗೊಂಡಿರುವ ಶ್ರೀ ಆಂಜನೇಯ ಭಜನಾ ಮಂದಿರವು ಲೋಕಾರ್ಪಣೆಯ ಅಂಗವಾಗಿ ಜ.22ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು.


ಮುಖ್ಯ ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದ.ಕ ಜಿಲ್ಲೆಯ ಧಾರ್ಮಿಕ ಚಿಂತನೆಗಳು ಅತ್ಯಧಿಕ. ಆದರೂ ಜಿಲ್ಲೆಯಲ್ಲಿ ಬಹುತೇಕ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳು ಸರಕಾರಿ ಜಾಗದಲ್ಲಿದೆ. ಜಾಗವನ್ನು ಕೇಂದ್ರದ ಹೆಸರಿನಲ್ಲಿ ಮಾಡಿಲ್ಲ. ಧಾರ್ಮಿಕ ಶ್ರದ್ಧಾ ಕೇಂದ್ರಗಳಿರುವ ಜಾಗವನ್ನು ಅದರ ಹೆಸರಿಗೆ ದಾಖಲಿಸಿಕೊಳ್ಳುವ ಕಾನೂನನ್ನು ಜಾರಿ ಮಾಡುವ ಅಗತ್ಯತೆಯಿದ್ದು ಇದಕ್ಕಾಗಿ ನಿರಂತರ ಪ್ರಯತ್ನ ಮಾಡುವುದಾಗಿ ಹೇಳಿದರು. ನೂತನ ಭಜನಾ ಮಂದಿರ ಲೋಕಾರ್ಪಣೆಯಾಗಿ ಮಂದಿರ ಬೆಳಗಿದಂತೆ ನಮ್ಮ ಜೀವನದಲ್ಲಿಯೂ ಬದಲಾವಣೆಯಾಗಬೇಕು. ನಮ್ಮ ಬದುಕು ಬೆಳಗಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ ಸಂಭ್ರಮದ ದಿನವೇ ಬೊಳ್ಳಾಣದಲ್ಲಿ ಆಂಜನೇಯ ಮಂದಿರ ಲೋಕಾರ್ಪಣೆಯಾಗುವ ಐತಿಹಾಸಿಕ ದಿನ ಯಾರಿಗೂ ದೊರೆಯಲು ಸಾಧ್ಯವಿಲ್ಲ ಎಂದ ಅವರು ರಾಮಮಂದಿರ ಲೋಕಾರ್ಪಣೆ ದಿನ ದೇಶದಲ್ಲಿ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆಯದೇ ಇದ್ದು, ಅಹಿತಕರ ಘಟನೆ ನಡೆಯುವುದು ಯಾರಿಗೂ ಬೇಕಾಗಿಲ್ಲ, ಜನ ಪ್ರತೀ ದಿನವೂ ನೆಮ್ಮದಿಯನ್ನು ಬಯಸುತ್ತಾರೆ ಎಂದು ಹೇಳಿದರು.


ರೂ.10ಲಕ್ಷ ಅನುದಾನ:
ಮುಖ್ಯರಸ್ತೆಯಿಂದ ಬೊಳ್ಳಾಣಕ್ಕೆ ಬರುವ ಕಿರಿದಾದ ರಸ್ತೆಯನ್ನು ಅಗಲೀಕರಣಗೊಳಿಸಿಕೊಡುವಂತೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಕಾಮಗಾರಿಗೆ ಪ್ರಾರಂಭದಲ್ಲಿ ರೂ.7ಲಕ್ಷ ಅನುದಾನ ನೀಡುವುದಾಗಿ ತಿಳಿಸಿದ್ದ ಶಾಸಕರು ನಂತರ ರೂ.10ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಊರಿನ ಜನತೆ ಒಂದಾಗಿ ಭವ್ಯ ಮಂದಿರ ನಿರ್ಮಿಸುವ ಮೂಲಕ ಹಿಂದುತ್ವ ಸಂಚಲನವಾಗಿದೆ. ಮಂದಿರದ ಮೂಲಕ ಬೊಳ್ಳಾಣದ ಜನತೆ ಆದ್ಯಾತ್ಮಿಕ ಬದುಕಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿ ವಾದ ಬಿಟ್ಟು ಹಿಂದುತ್ವದ ಒಗ್ಗಟ್ಟು ಮೂಡಿಸಿದೆ. ಮಂದಿರ ನಿರ್ಮಾಣದ ಮೂಲಕ ಸಮಾನತೆ ಹಾಗೂ ಏಕತೆ ಸಂದೇಶ ಸಾರಿದೆ ಎಂದರು. ತನ್ನ ಶಾಸಕತ್ವದ ಅವಧಿಯಲ್ಲಿ ಬೊಳ್ಳಾಣದಲ್ಲಿ ರಸ್ತೆ, ಕಾಂಕ್ರಿಟೀಕರಣ, ಇಂಟರ್‌ಲಾಕ್ ಮೊದಲಾವುಗಳಿಗೆ ಅನುದಾನ ನೀಡಿದ್ದೇನೆ. ಭಜನಾ ಮಂದಿರದ ಆವರಣಕ್ಕೆ ಇಂಟರ್‌ಲಾಕ್ ಅಳವಡಿಸಲು ಬೇಡಿಕೆಯಿಟ್ಟಿದ್ದು ವಿಧಾನ ಪರಿಷತ್ ಸದಸ್ಯರು, ಸಂಸದರ ಮೂಲಕ ಅನುದಾನ ಒದಗಿಸುವ ಭರವಸೆ ನೀಡಿದರು.


ಧಾರ್ಮಿಕ ಉಪನ್ಯಾಸ ನೀಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಡಾ.ರವೀಶ್ ಪಡುಮಲೆ ಮಾತನಾಡಿ, ದೈತ್ಯ ಶಕ್ತಿ ಆಂಜನೇಯನಲ್ಲಿದ್ದರೂ ಅದರ ಅರಿವು ಅವನಿಗಿರಲಿಲ್ಲ. ಅದೇ ರೀತಿ ಬೊಳ್ಳಾಣದ ಯುವ ಜನತೆಯಲ್ಲಿ ಅವರ ಸಾಮರ್ಥ್ಯದ ಅರಿವಿರಲಿಲ್ಲ. ಭವ್ಯ ಭಜನಾ ಮಂದಿರ ನಿರ್ಮಿಸುವ ಮೂಲಕ ಅವರಲ್ಲಿರುವ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದರು. ದುಶ್ಚಟ ಮುಕ್ತ ಸಮಾಜ ನಮ್ಮದಾಗಬೇಕು. ಜಾತೀಯತೆ ವಿಚಾರದಲ್ಲಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವುದನ್ನು ಖಂಡಿಸಬೇಕು. ಧರ್ಮ ಉಳಿಸುವ ಬಹುದೊಡ್ಡ ಹೊಣೆ ನಮ್ಮ ಮೇಲಿದೆ. ರಾಷ್ಟ್ರ, ಧರ್ಮದ ವಿಚಾರದಲ್ಲಿ ಪ್ರತಿಯೊಬ್ಬರೂ ಒಂದಾಗಬೇಕು ಎಂದು ತಿಳಿಸಿದರು.


ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ಮಾತನಾಡಿ, ಭಜನೆಯನ್ನು ಕೇವಲವಗಿ ಕಾಣಬಾರದು. ಅದಕ್ಕೆ ಬಹಳಷ್ಟು ಮಹತ್ವವಿದೆ. ಋಷಿಮುಣಿಗಳೇ ಭಜನೆಗೆ ಬಹಳಷ್ಟು ಮಹತ್ವ ನೀಡಿದ್ದಾರೆ ಎಂದರು. ಅವಳಿ ಬೆಟ್ಟದಂತಿರುವ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರವಿದ್ದರೆ ಬೊಳ್ಳಾಣದಲ್ಲಿ ನೂತನ ಆಂಜನೇಯನ ಭಜನಾ ಮಂದಿರ ಅದಕ್ಕೆ ಪೂರಕವಾಗಿ ನಿರ್ಮಾಣವಾಗುವ ಮೂಲಕ ನಮ್ಮ ಕನಸುಗಳು ಸಾಕಾರಗೊಂಡಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಭಜನಾ ಮಂದಿರ ನಿರ್ಮಾಣದ ಪ್ರಾರಂಭದಲ್ಲಿ ಆಥೀಕ ಸಂಕಷ್ಟಗಳು ಎದುರಾಗಿತ್ತು. ಇದಕ್ಕಾಗಿ ಕಂಬಳ ಗದ್ದೆಯಲ್ಲಿ ಗೋಳಿ ಸೋಡ ವ್ಯಾಪಾರ ಮಾಡಿ ಧನ ಸಂಗ್ರಹಿಸಿದ್ದೇವೆ. ನಾವು ಸ್ವಾರ್ಥಕ್ಕಾಗಿ ಮಾಡಿಲ್ಲ. ಸಮಾಜಕ್ಕಾಗಿ ಕೊಡುಗೆ ನೀಡಿದ್ದೇವೆ. ಭವ್ಯ ಮಂದಿರ ಲೋಕಾರ್ಪಣೆಯಾಗುವ ಮುಖಾಂತರ ನಮ್ಮ 35 ವರ್ಷಗಳ ಕನಸು ಈಗ ನನಸಾಗಿದ್ದು ಜೀವನದ ಅವಿಸ್ಮರಣಿಯ ದಿನವಾಗಿದೆ. ಹೊಸ ಮನೆ ನಿರ್ಮಿಸಿ ಗೃಹ ಪ್ರವೇಶದ ಸಂಭ್ರಮ ಭಜನಾ ಮಂದಿರ ಲೋಕಾರ್ಪಣೆ ಮೂಲಕ ಕಂಡಿದ್ದೇನೆ. ಇದಕ್ಕಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆ ಸಲ್ಲಿಸಿದರು. ನಗರ ಸಭಾ ಸದಸ್ಯೆ ದೀಕ್ಷಾ ಪೈ, ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿಮಲೆ ಸಂದರ್ಭೋಚಿತವಾಗಿ ಮಾತನಾಡಿದರು.


ಸನ್ಮಾನ:
ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ವಿಶ್ವನಾಥ ಕುಲಾಲ್ ಮಚ್ಚಿಮಲೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಂಪತ್ ಪ್ರಾರ್ಥಿಸಿದರು. ಶೈಲಶ್ರೀ ಸ್ವಾಗತಿಸಿದರು. ಭಜನಾ ಮಂದಿರ ಜತೆ ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ವಂದಿಸಿ, ದೀಪಕ್ ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದ ನಂತರ ಪಾಂಚಜನ್ಯ ಯಕ್ಷಕಲಾ ವೃಂದ ಪುತ್ತೂರು ಇವರಿಂದ ‘ಶ್ರೀರಾಮ ದರ್ಶನ’ ಯಕ್ಷಾಗನ ನಡೆಯಿತು.


ಐತಿಹಾಸಿಕ ದಿನಕ್ಕೆ ಸಾಕ್ಷಿಯಾದ ಮಂದಿರ ಲೋಕಾರ್ಪಣೆ:
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಗೊಂಡು ಜ.22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದ ದಿನವೇ ಕಾಕತಾಳೀಯವೆಂಬಂತೆ ಆರ್ಯಾಪು ಗ್ರಾಮದ ಬೊಳ್ಳಾಣ ಎಂಬಲ್ಲಿ ನವೀಕೃತಗೊಂಡ ರಾಮನ ಪರಮ ಭಕ್ತನಾಗಿರುವ ಆಂಜನೇಯನ ಭಜನಾ ಮಂದಿರವು ಲೋಕಾರ್ಪಣೆಗೊಳ್ಳುವ ಮೂಲಕ ಬೊಳ್ಳಾಣ ಭಜನಾ ಮಂದಿರ ಲೋಕಾರ್ಪಣೆಯು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ. ಇಂತಹ ಸುದಿನ, ಸೌಭಾಗ್ಯ ಬೇರೆ ಯಾರಿಗೂ ದೊರೆಯಲಿಲ್ಲ. ಇನ್ನು ದೊರೆಯಲೂ ಸಾಧ್ಯವಿಲ್ಲ ಎಂದು ಕಾರ್ಯಕ್ರಮದಲ್ಲಿ ಅತಿಥಿ, ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here