ಉದಯಗಿರಿಯಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ-ಸೂಕ್ತ ಕ್ರಮಕ್ಕೆ ಆಗ್ರಹ
ಖಾಯಂ ಪಿಡಿಓ ನೇಮಕಕ್ಕೆ ಸದಸ್ಯರ ಒಕ್ಕೊರಳ ಒತ್ತಾಯ
ಪುತ್ತೂರು: ಮುಂಡೂರು ಗ್ರಾಮದ ಉದಯಗಿರಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡವೊಂದು ನಿರ್ಮಾಣಗೊಳ್ಳುತ್ತಿದ್ದು ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.ಸಭೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಜ.23ರಂದು ನಡೆಯಿತು.
ಉದಯಗಿರಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ವಿಚಾರವಾಗಿ ಗ್ರಾ.ಪಂಗೆ ಬಂದಿರುವ ದೂರಿನ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ಅಕ್ರಮ ಕಟ್ಟಡ ನಿರ್ಮಾಣ ವಿಚಾರ ವಿ.ಎ ಅವರ ಗಮನಕ್ಕೆ ಬಂದಿಲ್ಲವೇ? ಅದರ ಬಗ್ಗೆ ಪರಿಶೀಲಿಸಬೇಕಾದವರು ಅವರಲ್ಲವೇ ಎಂದು ಕೇಳಿದರು.
ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆಗುತ್ತಿದೆ ಎಂದಾದರೆ ಗ್ರಾಮ ಪಂಚಾಯತ್‌ಗೂ ಜವಾಬ್ದಾರಿಯಿದ್ದು ಅದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು. ಇತರ ಸದಸ್ಯರು ಧ್ವನಿಗೂಡಿಸಿದರು. ಚರ್ಚೆ ಮುಂದುವರಿಯುತ್ತಿದ್ದಂತೆ ಪಿಡಿಓ ಅಜಿತ್ ಜಿ.ಕೆ ಅವರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿಯವರಿಗೆ ಕರೆ ಮಾಡಿ ವಿಚಾರ ಬಗ್ಗೆ ಮಾತನಾಡಿದರು. ಅನಧಿಕೃತ ಕಟ್ಟಡವನ್ನು ತೆರವು ಮಾಡುವ ಬಗ್ಗೆ ಗ್ರಾಮ ಆಡಳಿತಾಧಿಕಾರಿಯವರು ತಹಶೀಲ್ದಾರ್‌ರವರಿಗೆ ಬರೆದುಕೊಂಡಿದ್ದಾರೆ ಎಂದು ಪಿಡಿಓ ಅಜಿತ್ ಜಿ.ಕೆ ಮಾಹಿತಿ ನೀಡಿದರು.
ಡಿಸ್ಕನೆಕ್ಟ್ ಮಾಡಿ ಎಂದರೂ ಮಾಡಿಲ್ಲ..!
ನಮಗೆ ನೀರು ಬೇಡ, ಡಿಸ್ಕನೆಕ್ಟ್ ಮಾಡಿ ಎಂದರೂ ಡಿಸ್ಕನೆಕ್ಟ್ ಮಾಡಿಲ್ಲ, ಅಂತವರಿಗೆ ನೀರಿನ ಬಿಲ್ ಹೋಗಿದೆ ಎಂದು ಸದಸ್ಯ ಮಹಮ್ಮದ್ ಆಲಿ ಹೇಳಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಪಿಡಿಓ ಅಜಿತ್ ಜಿ.ಕೆ ಹೇಳಿದರು.
ಕೂಡುರಸ್ತೆಯಲ್ಲಿ ಜೆಜೆಎಂ ನೀರಿನ ಕನೆಕ್ಷನ್‌ಗೆ ಪಂಪ್ ಅಳವಡಿಕೆಯಾಗಿ 6 ತಿಂಗಳು ಕಳೆದರೂ ಇದುವರೆಗೂ ಟಿ.ಸಿ ಆಗಿಲ್ಲ ಎಂದು ಮಹಮ್ಮದ್ ಆಲಿ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜಿ ಹಾಕದವರಿಗೂ ಜೆಜೆಂ ಕನೆಕ್ಷನ್..!
ಗ್ರಾಮ ಪಂಚಾಯತ್‌ಗೆ ಅರ್ಜಿ ಹಾಕದವರಿಗೂ ಜೆಜೆಎಂ ಕನೆಕ್ಷನ್ ಆಗಿದ್ದು ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಗಮನಹರಿಸುವಂತೆ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಹೇಳಿದರು.
ಖಾಯಂ ಪಿಡಿಓ ನೇಮಕಕ್ಕೆ ಆಗ್ರಹ:
ನಮ್ಮ ಪಂಚಾಯತ್‌ನಲ್ಲಿ ಪರ್ಮನೆಂಟ್ ಪಿಡಿಓ ಇಲ್ಲದೇ ಇರುವುದರಿಂದ ಭಾರೀ ಸಮಸ್ಯೆಯಾಗುತ್ತಿದೆ, ಹಿಂದಿನ ಪಿಡಿಓ ಅವರ ವರ್ಗಾವಣೆಗೆ ಬೋರ್ಕರ್ ಕಾರಣ ಎಂದು ಸದಸ್ಯ ಕಮಲೇಶ್ ಎಸ್.ವಿ ಆರೋಪಿಸಿದರು. ಹಿಂದಿನ ಪಿಡಿಓ ಅವರನ್ನು ರಿಲೀವ್ ಮಾಡಬೇಡಿ ಎಂದು ನಾವು ಇ.ಒ ಅವರಲ್ಲಿ ಮನವಿ ಮಾಡಿದ್ದೆವು, ಆದರೂ ಅವರ ವರ್ಗಾವಣೆ ಆಗಿದೆ ಎಂದು ಅವರು ಇಲ್ಲಿ ಪಿಡಿಓ ಸಮಸ್ಯೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಹೇಳಿದರು.
ಸದಸ್ಯ ಬಾಬು ಕಲ್ಲಗುಡ್ಡೆ ಮಾತನಾಡಿ ಹಿಂದಿನ ಪಿಡಿಓ ವರ್ಗಾವಣೆಗೆ ಎರಡೂ ಪಾರ್ಟಿಯವರು ಕಾರಣ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ಖಾಯಂ ಪಿಡಿಓ ಇದ್ದರೆ ಎಲ್ಲ ಕೆಲಸ ಕಾರ್ಯಗಳು ಸುಲಲಿತವಾಗಿ ಆಗುತ್ತದೆ, ಖಾಯಂ ಪಿಡಿಓ ನೇಮಕಕ್ಕೆ ನಮ್ಮಿಂದಾಗುವ ಪ್ರಯತ್ನ ಮಾಡುವ ಎಂದು ಹೇಳಿದರು.
ಪಿಡಿಓ ಅಜಿತ್ ಜಿ.ಕೆ ಇದು ದೊಡ್ಡ ಗ್ರಾ.ಪಂ ಆದ ಕಾರಣ ಇಲ್ಲಿಗೆ ಖಾಯಂ ಪಿಡಿಓ ಅಗ್ಯವಿದೆ ಎಂದು ಹೇಳಿದರು. ಇಲ್ಲಿಗೆ ಖಾಯಂ ಪಿಡಿಓ ಬೇಕೆಂದು ಶಾಸಕರಿಗೆ ಬರೆದುಕೊಳ್ಳಬೇಕು ಎಂದು ಬಾಬು ಕಲ್ಲಗುಡ್ಡೆ ಹೇಳಿದರು.
ಬೈಕ್ ಗೆದ್ದ ಸಿಬ್ಬಂದಿಗೆ ಅಭಿನಂದನೆ:
ಸರ್ವೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವತಿಯಿಂದ ನಡೆದ ಅದೃಷ್ಟ ಚೀಟಿ ಯೋಜನೆಯಲ್ಲಿ ಮುಂಡೂರು ಗ್ರಾ.ಪಂ ಸಿಬ್ಬಂದಿ ಸತೀಶ್ ಹಿಂದಾರು ಅವರು ಬಜಾಜ್ ಪಲ್ಸರ್ ಬೈಕ್ ವಿಜೇತರಾಗಿದ್ದು ಅವರಿಗೆ ಗ್ರಾ.ಪಂ ಸಿಬ್ಬಂದಿ ಶಶಿಧರ ಕೆ ಮಾವಿನಕಟ್ಟೆ ಅವರು ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು. ಬೈಕ್ ಗೆದ್ದ ಸತೀಶ್ ಅವರು ಸಭೆಯಲ್ಲಿ ಸಿಹಿತಿಂಡಿ ವಿತರಿಸಿದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಯಶೊಧ ಅಜಲಾಡಿ, ಸದಸ್ಯರಾದ ಕರುಣಾಕರ ಗೌಡ ಎಲಿಯ, ಬಾಲಕೃಷ್ಣ ಪೂಜಾರಿ, ಪುಷ್ಪಾ ಎನ್, ದುಗ್ಗಪ್ಪ ಕೆ, ಅರುಣ ಎ.ಕೆ, ಕಾವ್ಯ ಕಡ್ಯ, ಪ್ರೇಮ ಎಸ್, ಕಮಲ, ವಿಜಯ, ದೀಪಿಕಾ ಸಿ.ಕೆ, ಸುನಂದ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೂರಪ್ಪ ವರದಿ, ಅರ್ಜಿಗಳನ್ನು ವಾಚಿಸಿದರು. ಸಿಬ್ಬಂದಿಗಳಾದ ಕೊರಗಪ್ಪ, ಶಶಿಧರ ಕೆ ಮಾವಿನಕಟ್ಟೆ, ಸತೀಶ, ಮೋಕ್ಷಾ, ಕವಿತಾ ಸಹಕರಿಸಿದರು.