ಜ.27: ಪುತ್ತೂರು ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳ

0

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಜ.27 ರಂದು ತನ್ನ 31ನೇ ಸಂಭ್ರಮದೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಕೆ ಎಸ್ ಅವರ ಗೌರವ ಸಂಚಾಲಕತ್ವದಲ್ಲಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ಮಾರ್ಗದರ್ಶನದಲ್ಲಿ ಇತಿಹಾಸ ಪ್ರಸಿದ್ಧ ತುಳುನಾಡ ಜಾನಪದ ಕ್ರೀಡೆಗಳಲ್ಲೊಂದಾದ ಕೋಟಿ- ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ.


ಜ.25ರಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಕೀರ್ತಿಶೇಷ ಜಯಂತ ರೈ ಅಂದಿನ ಶಾಸಕಕರಾಗಿದ್ದ ವಿನಯ ಕುಮಾರ್ ಸೊರಕೆ ಮತ್ತು ಸರ್ವ ಕಂಬಳಾಭಿಮಾನಿಗಳ ಸಹಕಾರ ಪಡೆದು ಪ್ರಾರಂಭಿಸಿದ ಈ ಕಂಬಳವು 30 ವರ್ಷಗಳನ್ನು ಪೂರೈಸಿ 31ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಮೊದಲು ಕೂಡಾ ದೇವರ ಮಾರುಗದ್ದೆಯಲ್ಲಿ ಕಂಬಳ ನಡೆಯುತ್ತಿತ್ತು ಎಂಬುದನ್ನು ಹಿರಿಯರಿಂದ ತಿಳಿದುಕೊಂಡಿದ್ದೇವೆ. ಆಗ ಬಹುಮಾನ ಬಾಳೆಗೊನೆ, ಸೀಯಾಳ ಗೊನೆ ಇತ್ಯಾದಿ ಇತ್ತು. ಅದು ಕಾಲಕ್ರಮೇಣ ಬದಲಾಗಿ ಇವತ್ತು ದೇಶವಿದೇಶದಲ್ಲಿ ಕಂಬಳ ಜನಜನಿತವಾಗಿದೆ ಎಂದ ಅವರು ಈ ವರ್ಷ ಸುಮಾರು 175 ರಿಂದ 200 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದ ಅವರು ನಮ್ಮ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಕೂಡಾ ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ಎನಿಸಿದೆ.


ಕಂಬಳದ ಉದ್ಘಾಟನೆಯನ್ನು ಶ್ರೀಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಕಂಬಳವನ್ನು ನೆರವೇರಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಜೆ ಸಭಾ ಕಾರ್ಯಕ್ರಮ ಕೀರ್ತಿಶೇಷ ಜಯಂತ ರೈ ವೇದಿಕೆಯಲ್ಲಿ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳೀನ್ ಕುಮಾರ್ ಕಟೀಲ್, ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಸಚಿವ ಬಿ.ನಾಗೇಂದ್ರ, ಎಂ.ಆರ್.ಜಿ ಬಂಜಾರ ಗ್ರೂಪ್ಸ್ ಬೆಂಗಳೂರು ಇದರ ಚೆರ್ ಮ್ಯಾನ್ ಪ್ರಕಾಶ್ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ. ರತ್ನ ಡಾ| ಎಂ. ಎನ್.ರಾಜೇಂದ್ರ ಕುಮಾರ್, ಪ್ರದೀಪ್ ಈಶ್ವರ್, ಶಾಸಕರು ಚಿಕ್ಕಬಳ್ಳಾಪುರ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಥರ್ ಗೌಡ, ಹಾಸನದ ಶಾಸಕ ಸ್ವರೂಪ್ ಪ್ರಕಾಶ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಢಾರಿ, ಮಾಜಿ ಸಚಿವ ಬಿ ರಮಾನಾಥ ರೈ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಜಿ ಶಾಸಕ .ಜೆ.ಆರ್. ಲೋಬೋ, ಯಕ್ಷಧ್ರುವ ಪೌಂಡೇಶನ್ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದರು.


ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಭಾ ಕಾರ್ಯಕ್ರಮದಲ್ಲಿ ನಡೆಯಲಿದೆ. ಮಾಣಿಸಾಗು ಉಮೇಶ್ ಶೆಟ್ಟಿ(ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು-ಕಂಬಳ ಕ್ಷೇತ್ರ), ಕೇಶವ ಗೌಡ (ಎಸ್.ಆರ್.ಕೆ.ಲ್ಯಾಡರ್-ಉದ್ಯಮ ಕ್ಷೇತ್ರ), ರವೀಂದ್ರ ಶೆಟ್ಟಿ ನುಳಿಯಾಲು (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು-ಧಾರ್ಮಿಕ ಕ್ಷೇತ್ರ), ದೀಪಕ್ ರೈ ಪಾಣಾಜೆ (ಖ್ಯಾತ ನಟ), ಜೈ ಗುರು ಆಚಾರ್ ಹಿಂದಾರ್(ಹೈನುಗಾರಿಕೆ), ಕಡಬ ಶ್ರೀನಿವಾಸ ರೈ(ಯಕ್ಷಗಾನ ಕಲಾವಿದ) ಇವರಿಗೆ ಸನ್ಮಾನ ನಡೆಯಲಿದೆ. ಸಮಾರಂಭದ ಬಳಿಕ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದರು.


ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ:
ಸಮಾರೋಪ ಸಮಾರಂಭವು ಜ.28ರಂದು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅಧ್ಯಕ್ಷತೆ ವಹಿಸಲಿದ್ದು, ಅನೇಕ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಲಿದ್ದಾರೆ. ಕಂಬಳದ ಬಗ್ಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರು ಹಾಗೂ ಇನ್ನಿತರ ಟಿ.ವಿ. ಮಾಧ್ಯಮದವರು ಆಗಮಿಸಿ ಕಂಬಳದ ಪ್ರಸಿದ್ಧಿಯನ್ನು ಹೆಚ್ಚಿಸಲಿದ್ದಾರೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.


ಚಲನಚಿತ್ರ ನಟ ನಟಿಯರು ವಿಶೇಷ ಆಕರ್ಷಣೆ:
ಅನೇಕ ಗಣ್ಯಾತಿಗಣ್ಯರು, ಖ್ಯಾತ ಚಲನ ಚಿತ್ರ ನಟ-ನಟಿಯರಾದ ಪ್ರಜ್ವಲ್ ದೇವರಾಜ್ (ಖ್ಯಾತ ನಾಯಕ ನಟ), ಅರವಿಂದ ಬೋಳಾರ್ (ಖ್ಯಾತ ಹಾಸ್ಯ ನಟ), ಕಾರ್ತಿಕ್ ಜಯರಾಮ್ ಜೆ.ಕೆ (ಖ್ಯಾತ ನಾಯಕ ನಟ), ಅರ್ಜುನ್ ಕಾಪಿಕಾಡ್ (ಖ್ಯಾತ ನಟ), ಸೋನು ಗೌಡ(ಖ್ಯಾತ ನಟಿ), ರೂಪೇಶ್ ಶೆಟ್ಟಿ (ಖ್ಯಾತ ನಟ), ನೇಹಾ ಗೌಡ (ಖ್ಯಾತ ನಟಿ), ಚಂದನ್ (ಖ್ಯಾತ ನಟ), ಗುರುನಂದನ್ (ಖ್ಯಾತ ನಟ) ಮತ್ತು ಅನೇಕ ಮಾಧ್ಯಮದ ಮಿತ್ರರು, ಟಿ.ವಿ.ಮಾಧ್ಯಮದವರೂ ಭಾಗವಹಿಸಲಿದ್ದಾರೆ ಆಗಮಿಸಿ ಕಂಬಳ ರಂಗು ಹೆಚ್ಚಿಸಲಿದ್ದಾರೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.


ಕಂಬಳದ ಕೋಣದ ಮಾಲಕರಲ್ಲಿ ಮನವಿ:
ಕೋರ್ಟು ಆದೇಶದಂತೆ ಆಹಿಂಸಾತ್ಮಕವಾಗಿ ಕಂಬಳವನ್ನು ಆಚರಿಸಲು, ಕಂಬಳಕ್ಕೆ ಭಾಗವಹಿಸುವ ಕೋಣಗಳ ಮಾಲಕರ ಶಾಂತಿ, ಸಹಕಾರದ ನಡವಳಿಕೆಗಳು ಪೂರಕವಾಗಲಿದೆ. ತನು-ಮನ-ಧನದ ಸಹಕಾರ ನೀಡಿರುವ ಕಂಬಳಾಭಿಮಾನಿ ಬಂಧುಗಳ ಅಭಿಮಾನದ ಸ್ಮರಣೆ, ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡುತ್ತೀರುವ ಎಲ್ಲರ ಸಹಕಾರವನ್ನು ಮನಪೂರ್ವಕ ಸ್ಮರಿಸುತ್ತಾ ಈ ವರ್ಷವೂ ಸಹಕಾರದ ಭರವಸೆಯ ಆಶಯವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.


ಹಲವು ಸೌಲಭ್ಯ:
ಕಂಬಳಕ್ಕೆ ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಟ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿರುತ್ತೇವೆ. ಅಲ್ಲದೇ ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ. ಉತ್ತಮ ಕರೆ ನಿರ್ಮಾಣ, ಕರೆಗೆ ಶುದ್ಧ ನೀರಿನ ವ್ಯವಸ್ಥೆ, ಸುಸಜ್ಜಿತ ಸ್ಟಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ, ವರ್ಷಕ್ಕೊಂದು ಹೊಸತನ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿದ್ದು, ಜಾತಿ ಧರ್ಮಗಳ ಬೇಧವಿಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ಏಕೈಕ ಕ್ರೀಡೆ ಮತ್ತೂರು ಕಂಬಳವನ್ನು ಯಶ್ವಸಿಗೊಳಿಸುವ ನಿಟ್ಟಿನಲ್ಲಿ ಅವಿತರ ಶ್ರಮ ದುಡಿಯುವ ನೂರಾರು ಕೆಂಪು ಮುಂಡಾಸಿನ ಸ್ವಯಂ ಸೇವಕರ ತಂಡವಿದ್ದು ಕೋಟಿಚೆನ್ನಯ ಜೋಡುಕರೆ ಸಮಿತಿಯ ಸದಸ್ಯರ ಅಪಾರ ಸೇವೆಯು ಕಂಬಳ ನಡೆಯಲು ಸಹಕಾರಿಯಾಗಿದೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ಕೆ.ವಸಂತ ಕುಮಾರ್ ರೈ ದುಗ್ಗಳ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

ಲೇಸರ್ ಫಿನಿಶಿಂಗ್ ತೀರ್ಪು :
ವಿನೂತನವಾಗಿ ಆಧುನಿಕ ತಂತ್ರಜ್ಞಾನದೊಂದಿಗೆ – ಲೇಸರ್ ಫಿನಿಶಿಂಗ್” ವ್ಯವಸ್ಥೆ ಶ್ರೀಘ್ರ ತೀರ್ಪು ನೀಡುವುದಕ್ಕಾಗಿ ಮಾಡಲಾಗುತ್ತಿದೆ. ಇತ್ತೀಚೆಗೆ ಲೇಸರ್ ಫಿನಿಶೀಂಗ್ ತೀರ್ಪಿನಲ್ಲೂ ಎರಡು ಜೋಡಿಗಳು ಸಮ ಸಮ ಬಂದಿತ್ತು. ಈ ನಿಟ್ಟಿನಲ್ಲಿ ಇನ್ನೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಲೇಸರ್ ಫಿನಿಶಿಂಗ್ ತೀರ್ಪು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.

ಪುತ್ತೂರು ಕಂಬಳಕ್ಕೂ ಇಲೆಕ್ಟ್ರಾನಿಕ್ ಗೇಟ್ !
24 ಗಂಟೆಯೊಳಗೆ ಕಂಬಳವನ್ನು ಮುಗಿಸುವಂತೆ ಸೂಚನೆ ಇದೆ. ಅದರಂತೆ ಕಂಬಳವನ್ನು 24 ಗಂಟೆಯೊಳಗೆ ಮುಗಿಸುವ ಪ್ರಯತ್ನ ಕಂಬಳ ಕೂಟದಲ್ಲಿ ನಿರ್ಣಯವಾಗಿದೆ. ಈಗಾಗಲೇ ಕಂಬಳ ಕೂಟದಲ್ಲಿ ನಡೆದ ಮೀಟಿಂಗ್‌ನಲ್ಲಿ ಮುಂದೆ ಕಂಬಳದ ಕೋಣಗಳನ್ನು ಬಿಡುವ ಸ್ಥಳದಲ್ಲಿ ಇಲೆಕ್ಟ್ರಾನಿಕ್ ಮಾದರಿಯ ಗೇಟ್ ಅಳವಡಿಸುವ ಚಿಂತನೆ ನಡೆದಿದೆ. ಅದರಿಂದ ಸಮಯಕ್ಕೆ ತಕ್ಕಂತೆ ಕಂಬಳದ ಕೋಣಗಳ ಓಟ ನಡೆಯಲಿದೆ. ಇದನ್ನು ಐಕಳ ಭಾವ ಕಂಬಳದಲ್ಲಿ ಅಳವಡಿಸಲಿದ್ದಾರೆ. ಮುಂದಿನ ದಿನ ಪುತ್ತೂರು ಕಂಬಳಕ್ಕೂ ಅಳವಡಿಸುವ ಚಿಂತನೆ ಇದೆ.
ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ

ವಿಜೇತ ಕೋಣಗಳಿಗೆ ಚಿನ್ನ, ಕೋಣದ ಓಟಗಾರರಿಗೂ ಬಹುಮಾನ, ಮಾಲಕರಿಗೆ ಟ್ರೋಪಿ
ಕಂಬಳಕ್ಕೆ ಆರು ವಿಭಾಗಗಳ ಕೋಣಗಳ ಭಾಗವಹಿಸಲಿದ್ದು, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿದ್ದು, ಹಿರಿಯ ವಿಭಾದ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ನ (16ಗ್ರಾಂ), ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ 1 ಪವನ್ ಹಾಗೂ ದ್ವಿತೀಯ ಅರ್ಧ ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ವಿಜೇತ ಕೋಣಗಳ ಯಜಮಾನರುಗಳಿಗೆ ಕೋಟಿ ಚೆನ್ನಯ ಟ್ರೋಪಿ ನೀಡಿ ಗೌರವಿಸಲಾಗುವುದು ಎಂದು ಎನ್.ಚಂದ್ರಹಾಸ ಶೆಟ್ಟಿ ಹೇಳಿದರು.

ಸುಮಾರು 800 ವರ್ಷಗಳಿಂದಲೂ ಕಂಬಳ ಎನ್ನುವ ಕೋಣಗಳ ಓಟದ ಕ್ರೀಡೆಯು ಮೂಲತಃ ಒಂದು ಜಾನಪದ ಕಲೆ, ಹಳ್ಳಿಯ ಭೂ ಮಾಲಿಕ ಮತ್ತು ದುಡಿಯುವ ರೈತರ ನಡುವಿನ ಸಾಂಸ್ಕೃತಿಕ ಬೆಸುಗೆಯಲ್ಲಿ ಸಾಮರಸ್ಯಕ್ಕೆ ರಾಜಾಶ್ರಯ ನೀಡಿ ಪ್ರೋತ್ಸಾಹಿಸಿದ ರಾಜ ಮನೆತನ ನಮ್ಮ ಜಿಲ್ಲೆಯಲ್ಲಿದೆ. ದೇವರ ಕಂಬಳ, ರಾಜರ ಕಂಬಳ, ಭವಗಳ ಕಂಬಳ ನವೀನ ರೂಪ ಪಡೆದು ಸಾರ್ವಜನಿಕ ಕಂಬಳವಾಗಿ ರೂಪಗೊಳ್ಳುತ್ತಿದೆ.
ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ

LEAVE A REPLY

Please enter your comment!
Please enter your name here