ಜಯಪ್ರಕಾಶ್‌ ಪುತ್ತೂರು ಅವರ ನೂತನ ಕೃತಿ “ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ” ಜ.28ರಂದು ಲೋಕಾರ್ಪಣೆ

0

ಪುತ್ತೂರು: ದ.ಕ ಜಿಲ್ಲಾ‌ ಕನ್ನಡ ಸಾಹಿತ್ಯ ಪರಷತ್ತಿನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಜಯಪ್ರಕಾಶ್‌ ಪುತ್ತೂರು ಅವರ ನೂತನ ಕೃತಿ “ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ” ಜ.28ರಂದು ಲೋಕಾರ್ಪಣೆಗೊಳ್ಳಲಿದೆ.

ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 4 ಗಂಟೆಗೆ ಪತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಉಮೇಶ್‌ ನಾಯಕ್‌ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ ಸಲಹಾ ಸಮಿತಿ ಸದಸ್ಯ ಡಾ.ಮುರಳಿ ಮೋಹನ್‌ ಚೂಂತಾರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಪ್ರೊ.ವಿ ಬಿ ಅರ್ತಿಕಜೆ ಕೃತಿ ಪರಿಚಯ ಮಾಡಲಿದ್ದಾರೆ. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ತಿನ ಗೌರವ ಕೋಶಾಧಿಕಾರಿ ಐತಪ್ಪ ನಾಯ್ಕ್‌ ಗೌರವ ಉಪಸ್ಥಿತಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಲಕ್ಷ್ಮೀಶ್‌ ತೋಳ್ಪಾಡಿ, ಎನ್‌ ಆರ್‌ ಸಿ ಸಿ ಯ ಡಾ. ದಿನಕರ ಆಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಗತಿ ಪರ ಕೃಷಿಕ ಕಡಮಜಲು ಸುಭಾಶ್‌ ರೈ ಪ್ರಥಮ ಕೃತಿ ಹಸ್ತಾಂತರ ಮಾಡಲಿದ್ದಾರೆ.

ಲೇಖಕರ ಕುರಿತು:
ಪುತ್ತೂರಿನ ದರ್ಬೆ ನಿವಾಸಿಯಾಗಿದ್ದು, ಪ್ರಸ್ತುತ ಮೈಸೂರಿನಲ್ಲಿ ವಾಸವಿರುವ ಜಯಪ್ರಕಾಶ ಪುತ್ತೂರು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಾ ಬಂದವರು. ವಿಜ್ಞಾನ ಪದವೀಧರರಾದ ಜಯಪ್ರಕಾಶ ಪುತ್ತೂರು ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕಾಧಿಕಾರಿ, ರಾಜಕೀಯ ಶಾಸ್ತ್ರ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿ, ಎಲ್.ಐ ಸಿ., ಬ್ಯಾಂಕ್ ಗಳಲ್ಲಿ ಸೇವೆ ಸಲ್ಲಿಸಿದವರು. ಜೇಸಿ ತರಬೇತುದಾರರಾಗಿ, ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ದೇಶ-ವಿದೇಶಗಳಲ್ಲಿ ಉಪನ್ಯಾಸ ನೀಡಿದವರು. ನಿವೃತ್ತಿ ನಂತರವೂ ಅವರ ಸೇವಾ ಕಾರ್ಯ ಮುಂದುವರಿದಿದ್ದು, ಕರ್ನಾಟಕ ಪೊಲೀಸ್ ಅಕಾಡೆಮಿ, ಪೊಲೀಸ್ ತರಬೇತಿ ಶಾಲೆ, ಮೀಡಿಯಾ ಮ್ಯಾನೇಜ್ ಮೆಂಟ್, ಪೊಲೀಸ್ ಇಮೇಜ್ ಬಗ್ಗೆ ಉಪನ್ಯಾಸ ನೀಡುವ ಮೂಲಕ ಭವಿಷ್ಯದ ಬದುಕಿಗೆ ನೆರವಾಗುತ್ತಿದ್ದಾರೆ. ಇದುವರೆಗೂ ಸಹಸ್ರಾರು ಲೇಖನಗಳು, ಪ್ರಬಂಧಗಳನ್ನು ಬರೆದಿರುವ ಜಯಪ್ರಕಾಶ ಪುತ್ತೂರು ಅವರ 6 ಪುಸ್ತಕಗಳು ಪ್ರಕಟಣೆ ಕಂಡಿದೆ. 7ನೇ ನೂತನ ಕೃತಿ “ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ” ಜ.28ರಂದು ಬಿಡುಗಡೆ ಭಾಗ್ಯ ಕಾಣಲಿದೆ. ಜಯಪ್ರಕಾಶ ಪುತ್ತೂರು ತಮ್ಮ ಸೇವಾವಧಿಯಲ್ಲಿ ಡಾ.ಕಲಾಂ ಅವರ ಶಿಷ್ಟಾಚಾರ, ಸಮನ್ವಯ ಅಧಿಕಾರಿಯಾಗಿ, 3 ಕೇಂದ್ರ ರಕ್ಷಣಾ ಸಚಿವರ ಸಮನ್ವಯ ಅಧಿಕಾರಿಯಾಗಿ, ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನದ ವಿನ್ಯಾಸ ಹಾಗೂ ಅಭಿವೃದ್ಧಿ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಡಿ ಆರ್‌ ಡಿ ಒ ಸಂಸ್ಥೆಯ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಸೇವೆ ಸಲ್ಲಿಸಿ ತಮ್ಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಸೇರಿದಂತೆ ಹಾಲ್ ಆಫ್ ಫೇಮ್ ಪುರಸ್ಕಾರ ಪಡೆದಿದ್ದಾರೆ. 14 ರಾಷ್ಟ್ರಗಳ ಕನ್ನಡ ಸಂಘ ಮತ್ತು ಅಕ್ಕ ಹಾಗೂ ನಾವಿಕ ವಿಶ್ವ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡಿದ ಕೀರ್ತಿ ಲೇಖಕರದ್ದು.

LEAVE A REPLY

Please enter your comment!
Please enter your name here