-ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.25ರಂದು ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರ ಆಗಮಿಸುವಿಕೆಯಿಂದ ನೇಮೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ನೇಮೋತ್ಸವದ ದಿನದಂದು ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತಮಾನದವರೆಗೆ ಅರ್ಧ ಏಕಾಹ ಭಜನೆ, ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ಕೊರಗಜ್ಜ ದೈವಕ್ಕೆ ಎಣ್ಣೆ ಕೊಡುವುದು, ಶ್ರೀ ಕೊರಗಜ್ಜ ದೈವದ ನೇಮೋತ್ಸವ ಶ್ರದ್ಧಾಭಕ್ತಿಯಿಂದ ವಿಜ್ರಂಭಣೆಯಿಂದ ನಡೆಯಿತು. ಜ.23 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಭಜನಾ ಕಾರ್ಯಕ್ರಮ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಜ.24 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದೇವರ ಅರ್ಚಕರ ಹಾಗೂ ಶ್ರೀ ಕ್ಷೇತ್ರದ ದೈವದ ಪ್ರಧಾನ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಕೆ.ಮಣ್ಣಾಪು, ಮಧ್ಯಸ್ತರಾದ ಗಣೇಶ್ ಪೂಜಾರಿ ಕೆಮ್ಮಿಂಜೆ ನೇತೃತ್ವದಲ್ಲಿ ಜರಗಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು ಸುಮಾರು 4 ಸಾವಿರಕ್ಕೂ ಮಿಕ್ಕಿ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಕೊರಗಜ್ಜನಿಗೆ ಬೇಕಾಗಿರುವುದು ಭಕ್ತರ ನಿಜವಾದ ಭಕ್ತಿ ಮಾತ್ರ-ಡಾ.ರಘು:
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ ಮಾತನಾಡಿ, ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವಿಯಣ್ಣನ ನೇತೃತ್ವದಲ್ಲಿ ಇಲ್ಲಿನ ಯುವಸಮೂಹ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ನೋಡಿದಾಗ ಕೊರಗಜ್ಜನ ಶಕ್ತಿ ಏನೆಂಬುದು ಎಂಬುದು ಗೋಚರಿಸುತ್ತದೆ. ಪ್ರಸ್ತುತ ಕೊರಗಜ್ಜನ ಹೆಸರು ರಾಜ್ಯಾದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ, ಕೊರಗಜ್ಜನಿಗೆ ಬೆಳ್ಳಿ ಬಂಗಾರ ಬೇಡ, ಅವರಿಗೆ ಬೇಕಾಗಿರುವುದು ಭಕ್ತರ ನಿಜವಾದ ಭಕ್ತಿ ಮಾತ್ರ ಎಂದರು.
ರಾಮರಾಜ್ಯವಾಗಬೇಕಾದರೆ ಸಾಮರಸ್ಯದ ಬದುಕು ನಮ್ಮದಾಗಲಿ-ಡಾ.ರವೀಶ್ ಪಡುಮಲೆ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ದೈವ ನರ್ತಕರು ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಡಾ.ರವೀಶ್ ಪಡುಮಲೆ ಮಾತನಾಡಿ, ಹಲವು ವೈಶಿಷ್ಟ್ಯವನ್ನು ಉಂಟು ಮಾಡಿದ ಕ್ಷೇತ್ರ ಮಣ್ಣಾಪು ಕ್ಷೇತ್ರ. ರಾಮ ದೇವರು ಕಟ್ಟಿದ ಈ ದೇಶವು ರಾಮರಾಜ್ಯವಾಗಬೇಕಾದರೆ ಸಾಮರಸ್ಯದ ಬದುಕು ನಮ್ಮದಾಗಬೇಕಿದೆ. ಜಾತೀಯತೆ, ಅಸ್ಪರ್ಶ್ಯತೆ ದೂರ ಮಾಡಬೇಕಿದೆ. ಪರಸ್ಪರ ಸಹೋದರತ್ವ ಮನೋಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕಾಗಿದೆ. ಆ ಮೂಲಕ ಧರ್ಮ, ಸತ್ಯ ಉಳಿಯುವಂತಾಗಲಿ ಎಂದರು.
ಭಯ, ಭಕ್ತಿ ಇದ್ದಲ್ಲಿ ದೇವರ ಅನುಗ್ರಹವಿದೆ-ಕೆ.ಟಿ ವಿಶ್ವನಾಥ್:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ ವಿಶ್ವನಾಥ ಸುಳ್ಯ ಇವರು ಮಾತನಾಡಿ, ಪರಶುರಾಮನ ಸೃಷ್ಟಿಯಾಗಿರುವ ಈ ಜಿಲ್ಲೆಯಲ್ಲಿ ಅನೇಕ ದೈವ-ದೇವರು ನೆಲೆ ನಿಂತಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಕೊರಗಜ್ಜನ ಸಾನಿಧ್ಯವು ತನ್ನ ಕಾರ್ಣೀಕದ ಮೂಲಕ ಬಹಳ ಪ್ರಸಿದ್ಧಿ ಪಡೆದಿದೆ. ಎಲ್ಲಿ ಭಯ, ಭಕ್ತಿ ಇರುತ್ತದೆ ಅಲ್ಲಿ ದೇವರ ಅನುಗ್ರಹ ಇದ್ದೇ ಇದೆ. ಜೊತೆಗೆ ನಮ್ಮ ಮಕ್ಕಳು ಮೊಬೈಲ್ ಫೋನಿಗೆ ದಾಸರಾಗದೆ ಅವರಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಬೇಕು, ಕಷ್ಟ ಎದುರಾದ ಸಂದರ್ಭದಲ್ಲಿ ಅವನ್ನು ಎದುರಿಸುವುದು ಹೇಗೆಂದು ಕಲಿಸಿ ಕೊಡಬೇಕು ಎಂದರು.
ವಿದ್ಯಾರ್ಥಿಗಳ ಸಮಸ್ಯೆ ಏನೆಂಬುದನ್ನು ಆಲಿಸುವವರಾಗಿ-ಪಿ.ವಿ ಗೋಕುಲ್ನಾಥ್:
ಪ್ರಗತಿ ಸ್ಟಡಿ ಸೆಂಟರ್ನ ಮುಖ್ಯಸ್ಥರಾದ ಪಿ.ವಿ ಗೋಕುಲ್ನಾಥ್ ಮಾತನಾಡಿ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ವತಿಯಿಂದ ನನಗೆ ಆದ ಸನ್ಮಾನ ವಿದ್ಯಾಕ್ಷೇತ್ರಕ್ಕೆ ನೀಡಿದ ಪ್ರಸಾದವಾಗಿದೆ. ಸೋತವರನ್ನು ಗೆಲ್ಲಿಸುವ ಕಾಯಕ ಪ್ರಗತಿ ಎಜ್ಯುಕೇಶನ್ ಸೆಂಟರ್ ಮಾಡುತ್ತಿದೆ. ವಿದ್ಯಾರ್ಥಿಗಳು ಸೋಲಲು ಕೇವಲ ಕಲಿಕೆ ಕಾರಣವಾಗುವುದಿಲ್ಲ, ಬದಲಾಗಿ ಬೇರೆ ಬೇರೆ ಕಾರಣಗಳಿಂದ ವಿದ್ಯಾರ್ಥಿಗಳು ಸೋಲಲು ಕಾರಣವಾಗುತ್ತದೆ. ಪ್ರಗತಿ ವಿದ್ಯಾಸಂಸ್ಥೆಯು ಅಂತಹ ವಿದ್ಯಾರ್ಥಿಗಳ ಸಮಸ್ಯೆ ಏನೆಂಬುದನ್ನು ಗುರುತಿಸಿಕೊಂಡು ಅವರಿಗೆ ವಿದ್ಯಾಭ್ಯಾಸ ನೀಡಿ ಕಲಿಕೆಯಲ್ಲಿ ಮುಂದುವರೆಯುವಂತೆ ಮಾಡುತ್ತೇವೆ ಎಂದರು.
ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದು ಮೈನವಿರೇಳಿಸುತ್ತದೆ-ನಾರಾಯಣ ರೈ:
ಸುದ್ದಿ ಬಿಡುಗಡೆಯ ಅಂಕಣಕಾರ, ಮಧುಪ್ರಪಂಚ ಇದರ ಸಂಪಾದಕರಾದ ನಾರಾಯಣ ರ್ಯ ಕುಕ್ಕುವಳ್ಳಿ ಮಾತನಾಡಿ, ಮಣ್ಣಾಪುವಿನ ಮಣ್ಣಿನ ಪ್ರತಿ ಕಣ ಭಕ್ತರನ್ನು ಬೆಳೆಸುತ್ತದೆ ಮಾತ್ರವಲ್ಲ ಮಣ್ಣಾಪುದ ಸಿರಿ ಬೆಳಗಲೂ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದು ನೋಡಿದಾಗ ಮೈನವಿರೇಳಿಸುತ್ತದೆ. ಪ್ರತಿ ವ್ಯಕ್ತಿಗೆ ಶಕ್ತಿ ಇದೆ. ಆ ಶಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಲು ಮತ್ತು ಆರೋಗ್ಯ ವೃದ್ಧಿಸಲು ಕೊರಗಜ್ಜ ಶಕ್ತಿ ನೀಡಲಿ ಎಂದರು.
ಸಂಪ್ಯ ಅಕ್ಷಯ ಕಾಲೇಜು ಚೇರ್ಮ್ಯಾನ್ ಜಯಂತ್ ನಡುಬೈಲು, ಮಣ್ಣಾಪು ಶ್ರೀ ಕ್ಷೇತ್ರಕ್ಕೆ ಸುಮಾರು ರೂ.1.50 ಲಕ್ಷ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸಲು ಕಾರಣಕರ್ತರಾದ ಉದ್ಯಮಿ ಸದಾಶಿವ ಪೈ, ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ, ಪಂಜಳ ಜೈ ಶ್ರೀರಾಂ ಫ್ರೆಂಡ್ಸ್ನ ಹಿರಿಯರಾದ ಚೆನ್ನಪ್ಪ ಗೌಡ, ಗಿರಿಧರ್ ಗೌಡ ಆಮೆಮನೆ ಸಂಪ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾಗವಹಿಸಿದ ಭಜನಾ ಮಂಡಳಿಗಳು:
ಕಾರ್ಯಕ್ರಮದಲ್ಲಿ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಿಷನ್ಮೂಲೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಮರಾಠಿ ಯುವ ವೇದಿಕೆ ಭಜನಾ ತಂಡ, ಶ್ರೀ ವಜ್ರಮಾತಾ ಮಹಿಳಾ ಭಜನಾ ಮಂಡಳಿ, ಮೊಗರು ಶ್ರೀ ಮಹಾವಿಷ್ಣು ಭಜನಾ ಮಂಡಳಿ, ದೇವಸ್ಯ ಶ್ರೀಹರಿ ಭಜನಾ ಮಂಡಳಿ, ಉಜಿರೆ ಗುರುಪಳ್ಳ ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ, ಕಡಬ ಭಜನಾಮೃತ ಭಜನಾ ತಂಡ, ಬಳ್ಪ ಧರ್ಮಶಾಸ್ತಾವು ಕುಣಿತ ಭಜನಾ ತಂಡದ ಸದಸ್ಯರಿಂದ ಭಜನೆ ಕಾರ್ಯಕ್ರಮ ಜರಗಿತು.
ಸವಿತಾ ಪಂಜ ಪ್ರಾರ್ಥಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಸ್ವಾಗತಿಸಿ, ವಂದಿಸಿದರು. ಪುರುಷೋತ್ತಮ್ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರದ ಕಾರ್ಯದರ್ಶಿ ದಿನೇಶ್ ಕೆಮ್ಮಿಂಜೆ, ಕೋಶಾಧಿಕಾರಿ ಗುರುವ ಮಣ್ಣಾಪು, ಗೌರವ ಸಲಹೆಗಾರರಾದ ಗಂಗಾಧರ ಮಣ್ಣಾಪು ಹಾಗೂ ವಿಶ್ವನಾಥ ನಾಯ್ಕ್ ಅಮ್ಮುಂಜ, ಸದಸ್ಯರುಗಳಾದ ಸತೀಶ ಕೆ.ಮಣ್ಣಾಪು, ಯಶವಂತ ಪೆರಾಜೆ, ಪ್ರವೀಣ ಎಸ್.ಮಣ್ಣಾಪು, ಸುಶೀಲ ಮಣ್ಣಾಪು, ದೇವಕಿ ಮಣ್ಣಾಪು, ಯಮುನಾ ಮಣ್ಣಾಪು, ಬಾಬು ಮಣ್ಣಾಪು, ಲಕ್ಷ್ಮೀ ಮಣ್ಣಾಪು, ನಾರಾಯಣ ಮಣ್ಣಾಪು, ಚಣ್ಣು ಮಣ್ಣಾಪು, ಜಾನಕಿ ಮಣ್ಣಾಪು, ಪಂಜಳ ಜೈ ಶ್ರೀರಾಂ ಗೆಳೆಯರ ಬಳಗದ ಸದಸ್ಯರು ಸಹಿತ ಹಲವರು ವಿವಿಧ ರೀತಿಯಲ್ಲಿ ಸಹಕರಿಸಿದರು.
ಮಣ್ಣಾಪು ಕ್ಷೇತ್ರ ಭಕ್ತರ ಭಕ್ತಿಯ ಸಾನಿಧ್ಯವಾಗಿದೆ..
ಮಣ್ಣಾಪು ಶ್ರೀ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈಗಾಗಲೇ ಶ್ರೀ ಕ್ಷೇತ್ರದಲ್ಲಿ ಮೇಲ್ಛಾವಣಿ ನಿರ್ಮಾಣಗೊಂಡಿದ್ದು ಮುಂದಿನ ದಿನಗಳಲ್ಲಿ ಇದರ ಮೇಲ್ಛಾವಣಿ ವಿಸ್ತರಣೆಯಾಗಲಿದೆ. ಅದಕ್ಕೆ ದಾನಿಗಳ ಅಗತ್ಯವಿದ್ದು, ಕೊರಗಜ್ಜ ಅದನ್ನು ನೆರವೇರಿಸುತ್ತಾನೆ ಎಂಬ ಭಾವನೆ ನಮ್ಮದು. ಶ್ರೀ ಕ್ಷೇತ್ರದಲ್ಲಿ ಹೃದಯವಂತ ದಾನಿಗಳಿಂದ ಮೂಲಭೂತ ಸೌಕರ್ಯ ಸಾಕಾರಗೊಂಡಿರುವುದು ಸಾಕ್ಷಿಯಾಗಿದೆ. ಕೊರಗಜ್ಜ ಕ್ಷೇತ್ರವು ವ್ಯಾಪಾರೀಕರಣ ಕ್ಷೇತ್ರವಾಗದೆ ಅದು ಭಕ್ತರ ಭಕ್ತಿಯ ಸಾನಿಧ್ಯದ ಕ್ಷೇತ್ರವಾಗಿದೆ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಕ್ಷೇತ್ರ ಮಣ್ಣಾಪು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಸನ್ಮಾನ..
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ರವೀಶ್ ಪಡುಮಲೆ(ಜಾನಪದ ಕ್ಷೇತ್ರ), ಕೆ.ಟಿ ವಿಶ್ವನಾಥ್ ಸುಳ್ಯ(ಸಹಕಾರ ಕ್ಷೇತ್ರ), ಪ್ರಗತಿ ಸ್ಟಡಿ ಸೆಂಟರ್ನ ಮುಖ್ಯಸ್ಥರಾದ ಪಿ.ವಿ ಗೋಕುಲ್ನಾಥ್ ಹಾಗೂ ಹೇಮಲತಾ ಗೋಕುಲ್ನಾಥ್ ದಂಪತಿ, ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ಸುಧೀರ್ ಅತ್ತಾಳ, ಪವನ್ ಅತ್ತಾಳ, ಆನಂದ ಮಣ್ಣಾಪು, ಪಂಜಳ ಜೈ ಶ್ರೀರಾಂ ಫ್ರೆಂಡ್ಸ್ನ ಚೆನ್ನಪ್ಪ ಗೌಡರವರುಗಳನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಭಕ್ತಿಗೀತೆ ಬಿಡುಗಡೆ..
ಪಂಜಳ ಜೈ ಶ್ರೀರಾಂ ಫ್ರೆಂಡ್ಸ್ ಸಹಕಾರದಲ್ಲಿ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಬಗ್ಗೆ ರಚಿಸಲಾಗಿರುವ `ಮಣ್ಣಾಪುದ ಕಾರ್ಣಿಕದ ಕಲ್ಲು’ ಭಕ್ತಿಗೀತೆಯನ್ನು ಸುದ್ದಿ ಬಿಡುಗಡೆ ಅಂಕಣಕಾರ ಹಾಗೂ ಮಧುಪ್ರಪಂಚ ಇದರ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿರವರು ಅನಾವರಣಗೊಳಿಸಿದರು. ಪ್ರಕಾಶ್ ಪಾಂಡೇಲು ಸಾಹಿತ್ಯದ ಈ ಭಕ್ತಿಗೀತೆಯನ್ನು ಗಾಯಕರಾದ ಕು.ಶ್ವೇತಾ, ವಿನಾಯಕ ಕುಂಬ್ರರವರು ಹಾಡಿದ್ದು ಅವರುಗಳನ್ನು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರು ಶಾಲು ಹೊದಿಸಿ ಅಭಿನಂದಿಸಿದರು.